ಮಲೇಬೆನ್ನೂರು, ಏ. 13 – ರಸ್ತೆಯಲ್ಲಿ ಸಿಕ್ಕ ಬ್ಯಾಗ್ನಲ್ಲಿದ್ದ 100 ಗ್ರಾಂ ಬಂಗಾರದ ಒಡವೆಗಳನ್ನು ಮಲೇಬೆನ್ನೂರು ಪೊಲೀಸ್ ಠಾಣೆಗೆ ಒಪ್ಪಿಸುವುದರ ಮೂಲಕ ಹಾಲಿವಾಣದ ಆಟೋ ಚಾಲಕ ವಿಜಯ ಕುಮಾರ್ ಎಂಬಾತ ಪ್ರಾಮಾಣಿಕತೆ ಮೆರೆದಿದ್ದಾರೆ.
ಹೊನ್ನಾಳಿಯ ಶಕೀಲ್ ಎಂಬಾತ ಕುಟುಂಬದವರ ಜೊತೆ ಕಾರ್ನಲ್ಲಿ ಹುಬ್ಬಳ್ಳಿಯಿಂದ ಹೊನ್ನಾಳಿಗೆ ತೆರಳುತ್ತಿರುವಾಗ ಗೊತ್ತಿಲ್ಲದಂತೆ ಅವರ ಬ್ಯಾಗ್ ಹಾಲಿವಾಣ ಕ್ರಾಸ್ ಬಳಿ ಬಿದ್ದಿದೆ. ಇದೇ ವೇಳಗೆ ಈ ರಸ್ತೆಯಲ್ಲಿ ಆಗಮಿಸಿದ ಹಾಲಿವಾಣದ ಆಟೋ ಚಾಲಕನಿಗೆ ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ ಸಿಕ್ಕಿದೆ.
ಬ್ಯಾಗ್ ತೆಗೆದು ನೋಡಿದಾಗ ಬಂಗಾರದ ಒಡವೆಗಳು ಕಂಡಿವೆ, ತಕ್ಷಣ ಆಟೋ ಚಾಲಕ ವಿಜಯಕುಮಾರ್ ಅವರು ನೇರವಾಗಿ ಪೊಲೀಸ್ ಠಾಣೆಗೆ ತೆೆರಳಿ ಸಿಕ್ಕ ಬ್ಯಾಗ್ ಅನ್ನು ಪಿಎಸ್ಐ ಪ್ರಭು ಕೆಳಗಿನ ಮನಿ ಅವರಿಗೆ ಒಪ್ಪಿಸಿದ್ದಾನೆ.
ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಬ್ಯಾಗ್ ಕಳೆದುಕೊಂಡಿದ್ದ ಹೊನ್ನಾಳಿಯ ಶಕೀಲ್ ಅವರು ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ವಿಚಾರಣೆ ನಂತರ ಆಟೋ ಚಾಲಕ ವಿಜಯ ಕುಮಾರ್ಗೆ ಸಿಕ್ಕ ಬ್ಯಾಗ್ ಶಕೀಲ್ ಅವರಿಗೆ ಸೇರಿದ್ದನ್ನು ಧೃಡಿಪಡಿಸಿಕೊಂಡು ಬಂಗಾರದ ಒಡವೆಗಳಿದ್ದ ಬ್ಯಾಗ್ ಅನ್ನು ಪೊಲೀಸರು ಶಕೀಲ್ಗೆ ನೀಡಿದರು.
ಆಟೋ ಚಾಲಕ ವಿಜಯಕುಮಾರ್ ಅವರ ಪ್ರಮಾಣಿಕತೆಯನ್ನು ಪ್ರಶಂಸಿದ ಪಿಎಸ್ಐ ಪ್ರಭು ಕೆಳಗಿನ ಮನೆ, ಪಿಎಸ್ಐ ಯುವರಾಜ್ ಕಂಬಳಿ ಅವರು ವಿಜಯಕುಮಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಶಕೀಲ್ ಕೂಡಾ ವಿಜಯಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿ ಪ್ರೀತಿಯ ಕೊಡುಗೆ ನೀಡಿದರು.