ಭಕ್ತರು ಸಹಕಾರ ನೀಡಿದರೆ ಸಾಣೇಹಳ್ಳಿಯಲ್ಲಿ `ಶರಣ ಲೋಕ’ ನಿರ್ಮಾಣ

ಭಕ್ತರು ಸಹಕಾರ ನೀಡಿದರೆ ಸಾಣೇಹಳ್ಳಿಯಲ್ಲಿ `ಶರಣ ಲೋಕ’ ನಿರ್ಮಾಣ

`ನಮ್ಮಂಥ ಸ್ವಾಮಿಗಳನ್ನು ಬೇಕಾದಷ್ಟು  ತರಬಹುದು, ಆದರೆ ಮಾಗನೂರು ಬಸಪ್ಪನವ ರಂಥ ಶಿಷ್ಯರನ್ನು ತರುವುದು ತುಂಬ ಕಷ್ಟ’ ಎಂದು ಶಿವಕುಮಾರ ಶ್ರೀಗಳು ಹೇಳುತ್ತಿದ್ದರು. ಅವರ ಮಾತು ನಮ್ಮದೂ ಆಗಿದೆ. ಗುರುವಿಗಿಂತ ಶಿಷ್ಯರೇ ಶ್ರೇಷ್ಠರು. ಸ್ವಾಮಿಗಳು ತಪ್ಪು ಮಾಡಿದಾಗ ಶಿಷ್ಯರು, ಶಿಷ್ಯರು ತಪ್ಪು ಮಾಡಿದಾಗ ಸ್ವಾಮಿಗಳು ಬುದ್ಧಿವಾದ ಹೇಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

– ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ

ಸಾಣೇಹಳ್ಳಿ, ಮಾ.1-  ಯುವ ಕರು ಪರಿವರ್ತನೆಯಾದರೆ ಮಾತ್ರ ಸಮಾಜ ಸುಧಾರಿಸಲು ಸಾಧ್ಯ ಎಂಬ ವಿಶ್ವಾಸವನ್ನು  ಸಾಣೆಹಳ್ಳಿಯ  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವ್ಯಕ್ತಪಡಿಸಿದರು.

ಇಲ್ಲಿನ ಎಸ್. ಎಸ್. ರಂಗಮಂದಿ ರದಲ್ಲಿ ಆಯೋಜಿಸಲಾಗಿದ್ದ `ಹಳೆ ಬೇರು ಹೊಸ ಚಿಗುರು’, ದವಸ ಸಮರ್ಪಣೆ ಮತ್ತು ಹಿರಿಯ ಚೇತನಗಳಿಗೆ ಅಭಿನಂದನಾ  ಕಾರ್ಯಕ್ರ ಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.  

ಹಿರಿಯ ಚೇತನಗಳನ್ನು ಗೌರವಿಸದೇ, ಮಠ, ಮನೆ, ಸಮಾಜಗಳನ್ನು ಉದಾಸೀನ ಮಾಡುವ ಇಂದಿನ ಯುವಪೀಳಿಗೆಗೆ  ಈ ಕಾರ್ಯಕ್ರಮ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು. 

ನಾವು ಸ್ವಾಮಿಗಳಾದ ಆರಂಭದಲ್ಲಿ ಹಳ್ಳಿಗಳಿಗೆ ದವಸ ಸಂಗ್ರಹಕ್ಕೆ ಹೋಗುತ್ತಿದ್ದೆವು. ದವಸ ಸಂಗ್ರಹ ಒಂದು ಸಂಕೇತವಾಗಿತ್ತು. ಇಂದು ರಾಗಿ, ಜೋಳ, ನವಣೆ ಮೊದಲಾದ ದವಸಗಳನ್ನು ಬೆಳೆಯುವ ಪ್ರಮಾಣ ತುಂಬ ಕಡಿಮೆಯಾಗಿದೆ. ಅಡಿಕೆ, ತೆಂಗು, ಬಾಳೆ ಮೊದಲಾದ ವಾಣಿಜ್ಯ ಬೆಳೆಗಳನ್ನು ಹೆಚ್ಚು ಹೆಚ್ಚು ಬೆಳೆಯುತ್ತಿದ್ದಾರೆ. ಆದರೂ ಮಠಕ್ಕೆ ನೀಡುವ ಪ್ರವೃತ್ತಿ ನಿಂತಿಲ್ಲ. ಇದರ ಜೊತೆಗೆ ಬೆಳೆದ ಅಡಿಕೆಯನ್ನು ಕೊಡುವ ಪ್ರವೃತ್ತಿ ಬೆಳೆಸಿಕೊಂಡರೆ ಮಠ ಆರ್ಥಿಕವಾಗಿ ಇನ್ನೂ ಸದೃಢವಾಗಿ ಬೆಳೆಯಲು ಸಾಧ್ಯವಾಗುವುದು. ಆಗ ಇಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ಉಚಿತ ಪ್ರಸಾದ, ಶಿಕ್ಷಣ ನೀಡಬಹುದು. ಶ್ರೀಮಠದ ಆವರಣದಲ್ಲಿ ಬಸವಾದಿ ಶಿವಶರಣರ ಪ್ರತಿಕೃತಿಗಳು ಮತ್ತು ಅವರಿಗೆ ಸಂಬಂಧಿಸಿದ ಪರಿಕರಗಳ ಮೂಲಕ ಜನರಿಗೆ ವಿಶೇಷವಾಗಿ ಮಕ್ಕಳಿಗೆ ಪರಿಚಯಿಸುವ `ಶರಣ ಲೋಕ’ವನ್ನು ನಿರ್ಮಿಸುವ ಉದ್ದೇಶವಿದೆ.  ಇದಕ್ಕೆ 4-5 ಕೋಟಿ ರೂ.ಗಳ ಅವಶ್ಯಕತೆಯಿದೆ. ಭಕ್ತರು ಉದಾರವಾಗಿ ಆರ್ಥಿಕ ನೆರವು ನೀಡಿದರೆ ಆ ಕಾರ್ಯವನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು. 

ಯಾರು ಏನೇ ಟೀಕೆ, ಆರೋಪ ಮಾಡಿದರೂ ನಾವು ನಮ್ಮ ಕೆಲಸವನ್ನು ಮಾಡಿಕೊಂಡು ಹೋಗುವೆವು. ನಮ್ಮಲ್ಲಿ ಏನು ದೋಷವಿದೆಯೋ ತಿಳಿಯದು. ದೋಷಗಳಿದ್ದರೆ ಯಾರು ಬೇಕಾದರೂ ಬಂದು ಹೇಳಬಹುದು. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಗುರು-ಶಿಷ್ಯರ ಪರಸ್ಪರ ಸಹಕಾರದಿಂದಾಗಿ ಶ್ರೀಮಠದ ಪ್ರಗತಿ, ಬೆಳವಣಿಗೆ ಸಾಧ್ಯವಾಗಿದೆ. ನಮ್ಮ ಎಲ್ಲ ಯೋಜನೆಗಳು, ಯೋಚನೆಗಳನ್ನು ಸಾಕಾರಗೊಳಿಸುವವರು ಸಮಾಜಬಾಂಧವರು. ಇದು ನಮ್ಮ ಸಾಧನೆಯಲ್ಲ; ಭಕ್ತರ ಮತ್ತು ಹಿರಿಯ ಗುರುಗಳ ಕೃಪಾಶೀರ್ವಾದವೇ ಕಾರಣ.

ಆರೋಗ್ಯದ ಸ್ಥಿತಿ ಉತ್ತಮವಾಗಿಲ್ಲದಿದ್ದರೂ ಚಂದ್ರಣ್ಣ, ಚಂದ್ರಶೇಖರಯ್ಯ, ಸಿದ್ಧಪ್ಪನವರಂಥ ಹಲವರು ಹಗಲು ರಾತ್ರಿ ಶ್ರಮಿಸುತ್ತಿರುವುದರ ಫಲವಾಗಿ ನಮ್ಮ ಮಠ ಅಭಿವೃದ್ಧಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಚಾಟಿ ಸಿದ್ಧರಾಮಪ್ಪ ಸೌತನಹಳ್ಳಿ, ದೊಡ್ಡಮಲ್ಲಪ್ಪ, ಲಿಂಗಮೂರ್ತಿ, ಶಾರದ ಮುಂಡ್ರೆ, ಹಳೆ ಮನೆ ಪಾಪಣ್ಣ, ಹೊಗರೇಹಳ್ಳಿ, ಚಂದ್ರಪ್ಪ ಗೌಡ್ರು ಲಿಂಗದಹಳ್ಳಿ. ಶಾಂತವೀರಪ್ಪ ದೋರನಾಳು, ಈಶ್ವರಪ್ಪ ಸಪ್ಪನಹಳ್ಳಿ, ಪುಟ್ಟಮಲ್ಲಪ್ಪ ಚಂದ್ರಶೇಖರಪ್ಪ, ಗಂಗಾಧರಪ್ಪ, ದೇವೀರಮ್ಮ ಚಿಕ್ಕಾನವಂಗಲ, ಚನ್ನಬಸಪ್ಪ ಚಿಣ್ಣಾಪುರ, ಮಲ್ಲೇಶಪ್ಪ ನಾಗರಕಟ್ಟೆ, ಗುರುಯ್ಯ ಸಾಣೇಹಳ್ಳಿ, ಓಂಕಾರಪ್ಪ ಖಗ್ಗಿ, ಸಿದ್ಧಗಂಗಪ್ಪ ಆಸಂದಿ, ಕೊಟ್ಟೂರಯ್ಯ ಗಂಗನಹಳ್ಳಿ, ಸಿದ್ಧಜ್ಜ ಗುತ್ತಿದುರ್ಗ, ಮಹೇಶ್ವರಪ್ಪ ನಾಗೇನಹಳ್ಳಿ, ರುದ್ರಪ್ಪ ವಿಠಲಾಪುರ, ಈಶ್ವರಪ್ಪ ಚೆನ್ನಾಪುರ, ಗಂಗಾಧರಪ್ಪ ದುರ್ವೀಗೆರೆ, ಎಲ್. ಬಿ. ಮಹೇಶ್ವರಪ್ಪ ಕಂಗುವಳ್ಳಿ ಮೊದಲಾದ ಹಿರಿಯ ಚೇತನಗಳನ್ನು ಪಂಡಿತಾರಾಧ್ಯ ಶ್ರೀಗಳು ಶಾಲು, ಹಾರ ಹಾಕಿ, ಫಲಹಾರ, ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. 

ಎಸ್. ಆರ್. ಚಂದ್ರಶೇಖರಯ್ಯ ಸ್ವಾಗತಿಸಿದರು. ಎ. ಸಿ. ಚಂದ್ರಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮಕ್ಕಳು ವಚನ ಗೀತೆಗಳನ್ನು ಹಾಡಿದರು, ಸುಗ್ಗಿ ಹಾಡಿಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ನಾಲ್ಕೂವರೆ ಲಕ್ಷ ಹಣ, 48 ಕ್ವಿಂಟಲ್ ರಾಗಿ ಮತ್ತು ಕಡಲೆ, ಅಕ್ಕಿ, ಮೆಣಸಿನಕಾಯಿಯನ್ನು ಶ್ರೀಮಠಕ್ಕೆ ಭಕ್ತರು ಸಮರ್ಪಿಸಿದರು.  

ಬೆಳಗಿನ ಜಾವ, ಪ್ರಮೋದ್, ಚಂದ್ರಶೇಖರ್‍  ರಾಜ್, ಲೋಕೇಶ್ ಕುಮಾರ್, ಲಿಂಗರಾಜು ಎನ್ನುವ ವಟುಗಳಿಗೆ ಶ್ರೀಮಠದಲ್ಲಿ ಪೂಜ್ಯರು ಜಂಗಮ ದೀಕ್ಷೆ ನೀಡಿದರು.

error: Content is protected !!