ಅಜ್ಞಾನದ ರಾತ್ರಿಯಲ್ಲಿ ಜ್ಞಾನ ಸೂರ್ಯನ ಅವತರಣೆಯೇ ನಿಜವಾದ ಶಿವರಾತ್ರಿ

ಅಜ್ಞಾನದ ರಾತ್ರಿಯಲ್ಲಿ ಜ್ಞಾನ ಸೂರ್ಯನ ಅವತರಣೆಯೇ ನಿಜವಾದ ಶಿವರಾತ್ರಿ

ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ

ದಾವಣಗೆರೆ, ಫೆ. 19- ಅಜ್ಞಾನದ ರಾತ್ರಿಯಲ್ಲಿ ಜ್ಞಾನ ಸೂರ್ಯನ ಅವತರಣೆಯೇ ನಿಜವಾದ ಶಿವರಾತ್ರಿ ಎಂದು ಪ್ರಜಾಪಿತ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಹೇಳಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಸಂಜೆ ಮಹಾ ಶಿವರಾತ್ರಿ ಕಾರ್ಯಕ್ರಮ ದಲ್ಲಿ 1008 ದಂಪತಿಗಳಿಂದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಅವರು ಶಿವರಾತ್ರಿ ಸಂದೇಶ ನೀಡಿದರು.

ಶಿವನು ಅಜ್ಞಾನದ ಕತ್ತಲೆ ಯನ್ನು ದೂರ ಮಾಡಲು ಅವತ ರಿಸಿದ ಘಟನೆಯ ಸ್ಮರಣಾರ್ಥವಾಗಿ ನಾವು ಶಿವರಾತ್ರಿಯನ್ನು ಆಚರಿಸುತ್ತೇವೆ ಎಂದು ಹೇಳಿದರು.

ಶಿವ ಜ್ಯೋತಿರ್ಲಿಂಗ ಸ್ವರೂಪಿಯಾಗಿದ್ದಾನೆ. ಅದಕ್ಕಾಗಿಯೇ ನಾವು ದ್ವಾದಶ ಜ್ಯೋತಿರ್ಲಿಂಗದ ರೂಪದಲ್ಲಿ ಶಿವನನ್ನು ಸ್ಥಾಪಿಸಿರುತ್ತೇವೆ. ಆಕಾರ ರಹಿತನಾದ ಶಿವ ನಿರಾಕಾರ ಜ್ಯೋತಿಯಾಗಿದ್ದಾನೆ. ಅವನ ಗುಣಗಳ ಆಧಾರದಿಂದ ಅವನಿಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ ಎಂದರು.

ಎಲ್ಲರಿಗೂ ಪರಮಾತ್ಮ ಒಬ್ಬನೇ ತಂದೆ. ಹೀಗಾಗಿ ಜಗತ್ತಿನ ಎಲ್ಲಾ ಧರ್ಮದವರೂ ಪರಮಾತ್ಮನಿಗೆ ಮಾನ್ಯತೆ ನೀಡಿದ್ದಾರೆ.ನಾವೆಲ್ಲಾ ಶಿವನ ಮಕ್ಕಳೆಂದು ತಿಳಿದಾಗ ಭೇದಭಾವ ಅಳಿಸಿ ಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಿನಿಮಾ ಅಥವಾ ಟಿವಿ ನೋಡುತ್ತಾ ಜಾಗರಣೆ ಮಾಡುವುದು ನಿಜವಾದ ಜಾಗರಣೆಯಾಗುವುದಿಲ್ಲ. ಅಜ್ಞಾನದ ನಿದ್ದೆ ಬಿಟ್ಟು ಜಾಗರೂಕರಾಗಿರಬೇಕು. ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾತನಾಡಬಾರದು. ಕೈಗಳಿಂದ ಕೆಟ್ಟ ಕರ್ಮ ಮಾಡಬಾರದು. ಮನದಲ್ಲಿ ಕೆಟ್ಟ ಆಲೋಚನೆ ಮಾಡಬಾರದು ಎಂಬುದು ಪರಮಾತ್ಮನ ಸಂದೇಶವಾಗಿದೆ.  ಶಿವರಾತ್ರಿಯ ನಿಜವಾದ ಜಾಗರಣೆ ವರ್ಷದ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿತ್ಯವೂ ನಡೆಯಬೇಕು. ಎಲ್ಲರೂ ಶಿವನನ್ನು ಅರ್ಥೈಸಿಕೊಂಡು ನೆನೆಯುತ್ತಾ ಶಿವಯೋಗಿಗಳಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ದಾರುಕೇಶ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಲಿಂಗ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಕೊಟ್ಟು, 1008 ದಂಪತಿಗಳಿಂದ ಒಂದೇ ಸ್ಥಳದಲ್ಲಿ ಪೂಜೆ ಮಾಡಿಸುದು ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದರು.

ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ಲಿಂಗಪೂಜೆ ನೆರವೇರಿಸಿ, ಆಶೀರ್ವಚನ ನೀಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಅತಿಥಿಗಳನ್ನು ಸ್ವಾಗತಿಸಿದರು. ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ.ಜಿ ಅಜಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಚಾರಕ ದೇವಾಲಯಗಳ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಉಪಸ್ಥಿತರಿದ್ದರು.

ಆರಂಭದಲ್ಲಿ ಸಂಗೀತ ಶಿಕ್ಷಕ ಅಜಯ್ ನಾರಾಯಣ ಪ್ರಾರ್ಥಿಸಿದರು.  ಇಷ್ಟಲಿಂಗ ಪೂಜೆಯ ನಂತರ ಡೊಳ್ಳು ಕುಣಿತ, ಸ್ಯಾಕ್ಸೋಫೋನ್, ವೀಣಾ ವಾದನ, ಚೌಡಿಕೆ,  ಭರತನಾಟ್ಯ, ಭಜನೆ, ಸಾಮೂಹಿಕ ನೃತ್ಯ, ಭಕ್ತಿಗೀತೆ ಗಾಯನ  ಸಂಸ್ಕೃತಿ ಕಾರ್ಯಕ್ರಮಗಳು ನಡೆದವು.

error: Content is protected !!