ಅಹಂಕಾರ ರಹಿತವಾಗಿ ದಾನ ಮಾಡುವುದೇ ದಾಸೋಹ

ಅಹಂಕಾರ ರಹಿತವಾಗಿ ದಾನ ಮಾಡುವುದೇ ದಾಸೋಹ

ಕೊಟ್ಟೂರು ತರಳಬಾಳು ಹುಣ್ಣಿಮೆಯ ಕೊನೆಯ ದಿನದ ಮಹೋತ್ಸವದಲ್ಲಿ ಪ್ರೊ. ಕೃಷ್ಣೇಗೌಡ

ಕೊಟ್ಟೂರು, ಫೆ. 5 – ಅಹಂಕಾರ ರಹಿತವಾಗಿ ದಾನ ಮಾಡುವುದೇ ದಾಸೋಹ ತತ್ವದ ಪರಿಕಲ್ಪನೆ. ದಾಸೋಹವು ದಾನ ಮಾಡುವವನಿಗೆ ವಿನಯ ಕೊಡುತ್ತದೆ ಎಂದು ವಾಗ್ಮಿ ಪ್ರೊ. ಕೃಷ್ಣೇಗೌಡ ಹೇಳಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ ಒಂಭತ್ತನೇ ಹಾಗೂ ಕೊನೆಯ ದಿನದಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ದಾನ ಮಾಡುವಾಗ ಅಹಂಕಾರ ಇರುತ್ತದೆ. ನಾನು ಕೊಡುವವನು ಎಂಬ ಭಾವನೆ ಇರುತ್ತದೆ. ಈ ಭಾವನೆ ಇರಬಾರದು ಎಂದೇ ಶರಣರು ದಾಸೋಹ ತತ್ವ ಅಳವಡಿಸಿಕೊಂಡರು. ದಾಸೋಹ ಎಂಬುದು ದಾಸೋ ಅಹಂ ಎಂಬ ಪದಗ ಳಿಂದ ಬಂದಿದೆ. ಕೊಡುವನಿಗೆ ಅಹಂಕಾರ ಇಲ್ಲದೇ ದಾಸನಾಗಿ ಕೊಡುವುದು ಎಂಬುದೇ ಇದರ ಅರ್ಥ ಎಂದರು.

ಜಾನಪದ ವಿದ್ವಾಂಸ ಶಂಭು ವಿ. ಬಳಿಗಾರ್ ಮಾತನಾಡಿ, ಅಂತರಂಗದ ಕತ್ತಲೆ ಕಳೆದುಕೊಂಡು ಅಜ್ಞಾನ ದೂರ ಆಗಬೇಕು. ಈ ಕಾರ್ಯಕ್ಕೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನೆರವಾಗಿದೆ ಎಂದರು.

ವಿದ್ವಾಂಸ ಬಿ.ಸಿ. ಮಹಾಬಲೇಶ್ವರಪ್ಪ ಮಾತನಾಡಿ, 12ನೇ ಶತಮಾನದಲ್ಲಿ ನಡೆದ ಶರಣ ಕ್ರಾಂತಿಯಲ್ಲಿ 720 ಶಿವಶರಣ ರಿದ್ದರು. ಆ ಕಾಲದಲ್ಲಿ ಮಹಾಮನೆಯಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆ ಕಾರ್ಯ ಶರಣರಿಂದ ನಡೆಯಿತು ಎಂದರು.

ಬಸವಾದಿ ಶರಣರು ವಿಶ್ವದ ಮೊದಲ ಬಂಡಾಯಗಾರರು. ಅವರು ಜಾತಿ, ಮೌಢ್ಯತೆ, ಬಂಡವಾಳಶಾಹಿ ಹಾಗೂ ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದರು. ವೈಜ್ಞಾನಿಕ ಹಾಗೂ ವೈಚಾರಿಕತೆಯ ತಳಹದಿಯ ಮೇಲೆ ಬದುಕಿನ ಸಮಗ್ರತೆಯ ಪರಿಚಯ ಮಾಡಿಕೊಟ್ಟರು ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮಾತನಾಡಿ, ಸಿರಿಗೆರೆ ಹಾಗೂ ಸಿದ್ದಗಂಗಾ ಮಠಗಳ ನಡುವೆ ಅವಿನಾಭಾವ ಸಂಬಂಧ ಇದೆ. ಸಿದ್ದಗಂಗಾ ಮಠದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಸಿರಿಗೆರೆ ಹಿರಿಯ ಜಗದ್ಗುರುಗಳಾದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಕಷ್ಟಗಳನ್ನು ಎದುರಿಸಿ ದೊಡ್ಡ ಸಂಘಟನೆ ಕಟ್ಟಿದ್ದಾರೆ ಎಂದರು.

ಮೊಳಕಾಲ್ಮೂರಿನ ನ್ಯಾಯಮೂರ್ತಿ ಪ್ರಿಯಾಂಕ ಕೊಟ್ರೇಶ್ ಮಾತನಾಡಿ, ನ್ಯಾಯದಾನ ಪ್ರಕ್ರಿಯೆ ಅವಸರವಾದರೂ ಇಲ್ಲವೇ ವಿಳಂಬವಾದರೂ ನ್ಯಾಯ ಸಿಗುವುದಿಲ್ಲ. ವಾದಿ – ಪ್ರತಿವಾದಿಗಳು ತಮ್ಮ ನಿಲುವು ತಿಳಿಸಲು ನ್ಯಾಯಾಲಯಗಳು ಸಮರ್ಪಕ ಸಮಯ ನೀಡಬೇಕು ಎಂದರು.

ನ್ಯಾಯಾಲಯದಿಂದ ಬರುವ ತೀರ್ಪುಗಳು ಒಬ್ಬ ಕಕ್ಷಿದಾರನ ಪರವಾಗಿ ರುತ್ತವೆ. ಅದೇ ಲೋಕ್ ಅದಾಲತ್‌ಗಳಲ್ಲಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಂಡಾಗ  ಉಭಯರಿಗೂ ನ್ಯಾಯ ಸಿಗುತ್ತದೆ. ಸಂಧಾನ ಪ್ರಕ್ರಿಯೆಗೆ ಮುಂದಾ ದರೆ ಕಕ್ಷಿದಾರರು ತಾವೇ ತಮ್ಮ ತೀರ್ಪು ಬರೆದುಕೊಂಡಂತೆ ಎಂದು ಹೇಳಿದರು.

ಸಮಾರಂಭದ ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ವೇದಿಕೆ ಮೇಲೆ ಜೆ.ಎಸ್.ಡಬ್ಲ್ಯೂ. ಕಂಪನಿಯ ಉಪಾಧ್ಯಕ್ಷ ಮುರುಗನ್, ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!