ಕೊಟ್ಟೂರು, ಫೆ. 5 – ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸುವ ವಿಷಯದಲ್ಲಿ ಕೊಟ್ಟೂರಿನ ಭಕ್ತರು ಮೊದಲ ರ್ಯಾಂಕ್ ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹುಣ್ಣಿಮೆ ಮಹೋತ್ಸವದ ಕೊನೆಯ ದಿನದಂದು ಸದ್ಧರ್ಮ ಸಿಂಹಾಸನ ಅಲಂಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಅಡ್ಡಪಲ್ಲಕ್ಕಿ ಉತ್ಸವದ ದಿನ ಭಕ್ತರ ಪರೀಕ್ಷೆಯಾಗಲಿದೆ ಎಂದು ನಿನ್ನೆ ಹೇಳಿದ್ದೆವು. ಅದರಂತೆ ಪರೀಕ್ಷೆ ನಡೆದಿದ್ದು, ಭಕ್ತರು ಮೊದಲ ರಾಂಕ್ನಲ್ಲಿ ಪಾಸ್ ಆಗಿದ್ದಾರೆ ಎಂದರು.
ಜನಸಾಗರದ ನಡುವೆ ನೆರವೇರಿದ ಅಡ್ಡಪಲ್ಲಕ್ಕಿ ಉತ್ಸವ
ಕೊಟ್ಟೂರು, ಫೆ. 5 – ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಭಾನುವಾರದಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.
ಬೆಳಿಗ್ಗೆ ಕೊಟ್ಟೂರಿನ ಮುಖ್ಯ ರಸ್ತೆಗಳಲ್ಲಿ ಪ್ರಭಾತ್ ಪೇರಿ ಹಾಗೂ ನಂತರ ಶರಣ ಧ್ವಜಾರೋಹಣ ನೆರವೇರಿತು.
ಮಧ್ಯಾಹ್ನ ಶ್ರೀ ಶಿವಮೂರ್ತಿ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನೆರವೇರಿತು. ಮೆರವಣಿಗೆಯಲ್ಲಿ ಸ್ವಾಮೀಜಿಗಳನ್ನು ಕಾರ್ಯಕ್ರಮದ ಮಂಟಪಕ್ಕೆ ಕರೆ ತರಲಾಯಿತು. ಮೆರವಣಿಗೆಯಲ್ಲಿ ಅಪಾರ ಜನಸ್ತೋಮ ಭಾಗಿಯಾಗಿತ್ತು. ಕೊಟ್ಟೂರಿನ ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದವು.
ಸಂಜೆ ನಡೆದ ಸಮಾರಂಭದಲ್ಲಿ, ಸಂಪ್ರದಾಯದಂತೆ ಶ್ರೀಗಳು ಸದ್ಧರ್ಮ ಸಿಂಹಾಸನವನ್ನು ಅಲಂಕರಿಸಿದರು.
ಇದೇ ವೇಳೆ, ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಜಮಾ ಖರ್ಚಿನ ಬಗ್ಗೆ ವಿವರ ನೀಡಲಾಯಿತು. ಜಮಾ ಆಗಿರುವುದು 1.87 ಕೋಟಿ ರೂ. ಹಾಗೂ ಖರ್ಚಾಗಿರುವುದು 97 ಲಕ್ಷ ರೂ. ಉಳಿದ ಹಣದಲ್ಲಿ ಹಳೇಬೀಡಿನಲ್ಲಿ ನಾಟ್ಯರಾಣಿ ಶಾಂತಲಾ ಶಾಲಾ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಸಭೆಗೆ ತಿಳಿಸಲಾಯಿತು.
ಹುತಾತ್ಮ ಯೋಧರಿಗೆ ಇದೇ ವೇಳೆ ನಮನ ಸಲ್ಲಿಸಲಾಯಿತು. ಹುತಾತ್ಮರ ಕುಟುಂಬಗಳಿಗೆ ತಲಾ 1 ಲಕ್ಷ ರೂ.ಗಳ ಆರ್ಥಿಕ ನೆರವಿನ ಸಾಂತ್ವನ ನೀಡಲಾಯಿತು.
ಆದರೆ, ಹುಣ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಂಡು ಮರಳುವಾಗ ಮೋಟರ್ ಬೈಕ್ ಅಪಘಾತದಲ್ಲಿ ಹರಪನಹಳ್ಳಿಯ ಬೆಣ್ಣೆಹಳ್ಳಿಯ ವೃಷಭೇಂದ್ರಪ್ಪ ಮೃತಪಟ್ಟಿರುವುದು ಮತ್ತು ಕಾಳಾಪುರ ಘಟನೆಯ ತನಿಖೆಗೆ ಬಂದಿದ್ದ ಹಂಪಿಯ ಎ.ಎಸ್.ಐ. ಶಬ್ಬೀರ್ ಹುಸೇನ್ ಅವರು ಅಪಘಾತದಲ್ಲಿ ಸಾವನ್ನಪ್ಪಿರುವುದು ತಮ್ಮಲ್ಲಿ ವಿಷಾದ ತಂದಿದೆ ಎಂದು ಶ್ರೀಗಳು ಹೇಳಿದರು.
ಉಭಯ ಕುಟುಂಬದವರಿಗೆ ತಲಾ ಒಂದು ಲಕ್ಷ ರೂ.ಗಳನ್ನು ಹುಣ್ಣಿಮೆ ಮಹೋತ್ಸವ ಸಮಿತಿಯ ವತಿಯಿಂದ ಪರಿಹಾರ ನೀಡಲಾಗುವುದು. ಇವರ ಕುಟುಂಬದವರು ಮಕ್ಕಳು ಸಿರಿಗೆರೆ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಕಾಲೇಜಿನವರೆಗೆ ಉಚಿತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀಗಳು ತಿಳಿಸಿದರು. ಸಮಾರಂಭದಲ್ಲಿ ಹುತಾತ್ಮ ಯೋಧರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂ.ಗಳನ್ನು ನೀಡಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿ ಸಂಪ್ರದಾಯ ಮುರಿದು ಸಿಂಹಾಸನದಿಂದ ಕೆಳಗಿಳಿದು ಬಂದು ಹುತಾತ್ಮರಿಗೆ ಗೌರವ ಅರ್ಪಿಸಿದರು.
ಹತ್ತು ಹುತಾತ್ಮ ಯೋಧರ ಕುಟುಂಬದವರು ಬಯಸಿದಲ್ಲಿ, ಪದವಿಯವರೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಭವ ಮಂಟಪದ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು ಎಂದೂ ಶ್ರೀಗಳು ಹೇಳಿದರು.