ಭ್ರಷ್ಟ ಚುನಾವಣೆಯಿಂದ ಅಭಿವೃದ್ಧಿ ನಿರೀಕ್ಷೆಯೇ ‘ಪವಾಡ’

ಭ್ರಷ್ಟ ಚುನಾವಣೆಯಿಂದ ಅಭಿವೃದ್ಧಿ ನಿರೀಕ್ಷೆಯೇ ‘ಪವಾಡ’

ಕೊಟ್ಟೂರು, ಫೆ. 2 – ಚುನಾವಣೆ ಸಮಯದಲ್ಲಿ ಜನರು ಲಂಚ ಪಡೆದು ಅಭಿವೃದ್ಧಿಯ ನಿರೀಕ್ಷೆ ಇಟ್ಟುಕೊಳ್ಳುವುದಕ್ಕಿಂತ ದೊಡ್ಡ ‘ಪವಾಡ’ ಇನ್ನೊಂದಿಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ ಆರನೇ ದಿನದಂದು ಆಯೋಜಿಸಲಾಗಿದ್ದ ಯುವ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಕಲ ಚರಾಚರಗಳಲ್ಲಿ ದೇವರನ್ನು ಕಾಣುವ ದೇಶ ಭಾರತ. ಕಾಯಕವೇ ಕೈಲಾಸ ಎಂದು ಶರಣರು ಸಾರಿದ ದೇಶ ಭಾರತ. ದುರಾದೃಷ್ಟವಶಾತ್ ನಾವು ಇವುಗಳನ್ನೆಲ್ಲ ಮರೆಯುತ್ತಿದ್ದೇವೆ ಎಂದರು.

ಈ ಹಿಂದೆ ಜನರನ್ನು ವಂಚನೆ ಮಾಡಲು ಶೂನ್ಯದಿಂದ ಬೂದಿ ಸೃಷ್ಟಿ ಮುಂತಾದ ಪವಾಡ ಮಾಡುತ್ತಿದ್ದರು. ಈಗ ಅದು ಕಡಿಮೆಯಾಗಿ, ಭ್ರಷ್ಟಾಚಾರದ ಮೂಲಕ ಮೋಸ ಮಾಡುವುದೇ ಹೊಸ ಪವಾಡವಾಗಿದೆ ಎಂದರು.

ಗ್ರಾಮ ಪಂಚಾಯ್ತಿಗಳಲ್ಲಿ ನಿರ್ಮಿಸದೇ ಇರುವ ರಸ್ತೆಗಾಗಿ ಹಣ ಪಡೆಯಲಾಗುತ್ತಿದೆ. ಅಧಿಕಾರಿಗಳು ಯಾವ ಇಲಾಖೆಗೆ ಹೋದರೆ ದುಡ್ಡು ಸಿಗುತ್ತದೆ ಎಂಬ ಯೋಚನೆಯಲ್ಲಿರುತ್ತಾರೆ. ಚುನಾವಣಾ ವೇಳೆಯಲ್ಲಿ ಮತದಾರರು ನಿರ್ಲಜ್ಜರಾಗಿ ಎಲ್ಲ ಪಕ್ಷಗಳಿಂದಲೂ ದುಡ್ಡು ಪಡೆಯುತ್ತಿದ್ದಾರೆ. ಇದೆಲ್ಲವೂ ‘ಹೊಸ ಪವಾಡ’ಗಳು ಎಂದವರು ಹೇಳಿದರು.

ಈ ನಡುವೆ ಯುವ ಜನತೆಗೆ ಉಚಿತವಾಗಿ ಕೊಡುಗೆಗಳನ್ನು ಕೊಡುವುದಾಗಿ ರಾಜಕಾರಣಿಗಳು ಹೇಳುತ್ತಿದ್ದಾರೆ. ಆದರೆ, ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ನನಗೆ ರಕ್ತ ಕೊಟ್ಟರೆ ಸ್ವಾತಂತ್ರ್ಯ ಕೊಡುತ್ತೇನೆ ಎಂದಿದ್ದರು. ಏಕೆಂದರೆ ಯಾವುದೂ ಉಚಿತವಾಗಿ ಬರುವುದಿಲ್ಲ. ಹೀಗಾಗಿ ಯುವಕರಿಗೆ ಉಚಿತ ಕೊಡುಗೆ ಬದಲು ಸ್ವಾವಲಂಬನೆ ನೀಡುವ ಉದ್ಯೋಗ ಬೇಕಿದೆ ಎಂದು ಸೂಲಿಬೆಲೆ ಹೇಳಿದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ  ಹುಲಿಕಲ್ ನಟರಾಜ್ ಮಾತನಾಡಿ,  ನಮಗೆ ನಂಬಿಕೆ ಬೇಕು ಮೂಢನಂಬಿಕೆ ಬೇಡ. ಆಚರಣೆ ಬೇಕು ಮೂಢಾಚರಣೆ ಬೇಡ. ನಮಗೆ ಪ್ರಜ್ಞಾವಂತಿಕೆ, ಆಲೋಚನೆ ಹಾಗೂ ವಿಮರ್ಶೆ ಬೇಕು ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಭ್ರಷ್ಟ ರಾಜಕೀಯ ವ್ಯವಸ್ಥೆ ಬದಲಾವಣೆ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ. 40 ದಾಟಿದವರಿಂದ ಬದಲಾವಣೆ ಸಾಧ್ಯವಿಲ್ಲ. ಇವರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರನ್ನು ಹೊತ್ತು ಮೆರವಣಿಗೆ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಚಿತ್ರದುರ್ಗದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್,  ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್,  ವಿಶ್ವೇಶ್ವರಾಯ ತಾಂತ್ರಿಕ ವಿ.ವಿ. ಕುಲಪತಿ ಎಸ್. ವಿದ್ಯಾಶಂಕರ್, ಮಾಜಿ ಶಾಸಕ ಬಿ.ಪಿ. ಹರೀಶ್, ಉದ್ಯಮಿ ಎಸ್.ಎಸ್. ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!