ಕೊಟ್ಟೂರು, ಜ.30- ಕೊಟ್ಟೂರು ತಾಲ್ಲೂಕಿನ ಕಾಳಾಪುರದಲ್ಲಿ ನಡೆದ ದುರ್ಘ ಟನೆಯ ಹಿಂದೆ ಕೊಳಕು ರಾಜಕೀಯವಿದೆ. ಕುತಂತ್ರದಿಂದ ಸಮಾಜದಲ್ಲಿ ಒಡಕು ಮೂಡಿಸುವ ಸಂಚು ನಡೆದಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಖಾರವಾಗಿ ಖಂಡಿಸಿದರು.
ಶ್ರೀಮಠದಿಂದ ಉಪಕೃತನಾದ ದಾವ ಣಗೆರೆಯ ದೂರ್ತನೊಬ್ಬನಿಂದ ಅಮಾ ಯಕರ ಮೇಲೆ ದೂರು ದಾಖ ಲಿಸಿರುವುದು ಖಂಡನಾರ್ಹವಾದುದು. ಈ ದುರ್ಘ ಟನೆಯ ಹಿಂದೆ ಇರುವ ಸಂಚನ್ನು ಪೊಲೀಸ್ ಇಲಾಖೆಯು ಸರಿಯಾಗಿ ಭೇದಿಸಬೇಕು. ಕಾನೂನು ಪ್ರಜಾಹಿತ ರಕ್ಷಣೆಗೆ ಇದೆಯೇ ವಿನಃ ಅಮಾಯಕರನ್ನು ದಂಡಿಸಲು ಅಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ತಕ್ಕ ಶಿಕ್ಷೆ ಆಗಲಿ. ನಮ್ಮ ಸದ್ಧರ್ಮ ನ್ಯಾಯಪೀಠದಿಂದ ಸಮರ್ಪಕ ನ್ಯಾಯ ಒದಗಿಸುತ್ತೇವೆ ಎಂದು ಶ್ರೀಗಳು ತಿಳಿಸಿದರು.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಮಾಧ್ಯಮದವರು ಸತ್ಯ ಶೋಧನೆ ಮಾಡಿ, ವಸ್ತು ನಿಷ್ಠ ವರದಿ ಮಾಡಬೇಕು ಎಂದು ಶ್ರೀಗಳು ಆಗ್ರಹಿಸಿದರು. ಈ ಹಿಂದೆ ನಡೆದ ಎಲ್ಲಾ ತರಳಬಾಳು ಹುಣ್ಣಿಮೆಗಳಲ್ಲಿ ಪೋಲಿಸ್ ಇಲಾಖೆ ನೆಮ್ಮದಿಯಿಂದ ಕೆಲಸ ಮಾಡಿತ್ತು. ಆದರೆ ಸ್ಥಳೀಯ ಕೊಳಕು ರಾಜಕೀಯದಿಂದ ಶಾಂತಿಗೆ ಭಂಗವಾಗುತ್ತಿದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಧರ್ಮ ಗುರುಗಳಾಗಿ ಧರ್ಮ ಕಾರ್ಯಗಳನ್ನು ಮಾಡಬೇಕೇ ವಿನಃ ಅಧರ್ಮ ಕಾರ್ಯಗಳನ್ನು ಮಾಡಬಾರದು ಎಂದ ಶ್ರೀಗಳು, ನಾವು ಸತ್ಯದ ಪರ ಮತ್ತು ಧರ್ಮದ ಪರವಾಗಿರುತ್ತೇವೆ.
ಕಾಳಾಪುರ ಗ್ರಾಮವನ್ನು ಶ್ರೀಮಠದಿಂದ ದತ್ತು
ಕಾಳಾಪುರ ಗ್ರಾಮವನ್ನು ಶ್ರೀಮಠದಿಂದ ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಶ್ರೀಗಳು ಬಹಿರಂಗವಾಗಿ ಘೋಷಿಸಿದರು.
ಗ್ರಾಮದ ಸರ್ವಜನಾಂಗದವರು ಸುಖ ಶಾಂತಿಯಿಂದ ಬದುಕುವಂತಾಗಬೇಕು.
ತರಳಬಾಳು ಹುಣ್ಣಿಮೆಗೆ ಸಂಗ್ರಹವಾಗಿರುವ ನಿಧಿಯಿಂದ ಗ್ರಾಮಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುವುದು. ಹಣದ ಕೊರತೆಯಾದರೆ ಸರ್ಕಾರದಿಂದ ಸಹಾಯ ಪಡೆಯದೇ ಶ್ರೀಮಠದ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಕಾನೂನು ಇರುವುದು ದುರ್ಬಲರ ರಕ್ಷಣೆಗೆ
ಕಾನೂನು ಇರುವುದು ದುರ್ಬಲ ವರ್ಗದವರನ್ನು ರಕ್ಷಣೆ ಮಾಡಲಿಕ್ಕೆ. ಆದರೆ ಪ್ರಬಲರಿಂದ ಕಾನೂನು ದುರ್ಬಳಕೆಯಾಗುತ್ತಿದೆ.
ಕಾನೂನು ಮಾರ್ಗದರ್ಶನ ಮಾಡಬೇಕೇ ವಿನಃ ಶಾಂತಿಗೆ ಭಂಗ ಮಾಡಬಾರದು ಎಂದ ಶ್ರೀಗಳು, ಕಾಳಾಪುರದ ಘಟನೆ ಬಗ್ಗೆ, ಸತ್ಯ ಹೊಸಿಲು ದಾಟುವಷ್ಟೊತ್ತಿಗೆ ಸುಳ್ಳು ಊರನ್ನೆಲ್ಲ ಸುತ್ತಾಡಿಕೊಂಡು ಬಂದಂತಾಗಿದೆ. ಅಂತೆಕಂತೆಗಳಿಂದ ದೇಶಾದ್ಯಂತ ಹಬ್ಬಿರುವ ಸುದ್ದಿಯಿಂದ ನಮಗೆ ನೋವಾಗಿದೆ ಎಂದ ಶ್ರೀಗಳು, ಸಂಚುಗಳಿಗೆ ನಿರಾಪರಾಧಿಗಳು ಬಲಿಯಾಗಬಾರದು ಎಂದರು.
ಸಾಮರಸ್ಯ ಮೂಡಿಸುವುದೇ ಹುಣ್ಣಿಮೆ ಉದ್ದೇಶ
ತರಳಬಾಳು ಹುಣ್ಣಿಮೆಯ ಉದ್ದೇಶ ಸಾಮರಸ್ಯ ಮೂಡಿಸುವುದೇ ಆಗಿದೆ. ಜಾತಿ – ಜಾತಿಗಳ ನಡುವೆ ಘರ್ಷಣೆಗೆ ಅವಕಾಶ ಮಾಡಿಕೊಡುವುದಲ್ಲ. ಭಾವೈಕ್ಯ ಪರಿಷತ್ತೆಂದು ಹೆಸರಾಗಿರುವ ತರಳಬಾಳು ಹುಣ್ಣಿಮೆಗೆ ಕೊಟ್ಟೂರಿನಲ್ಲಿ ಕಪ್ಪು ಚುಕ್ಕಿಯಾಗಲು ಬಿಡುವುದಿಲ್ಲ.
1993 ರಲ್ಲಿ ಜಗಳೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಆಚರಣೆ ಮಾಡುವ ಸಂದರ್ಭದಲ್ಲಿ ನೂರಾರು ದೂರುಗಳಿದ್ದವು. ಎಲ್ಲಾ ದೂರುಗಳನ್ನು ರದ್ದು ಮಾಡಿ ಜಾತಿಗಳ ನಡುವಿನ ಸಂಘರ್ಷಗಳಿಗೆ ಪೂರ್ಣ ವಿರಾಮ ಹಾಕಲಾಯಿತು. ಆಗ ಎಲ್ಲಾ ಜನಾಂಗದವರು ಸಾಮರಸ್ಯದಿಂದ ಬದುಕಲು ಅವಕಾಶ ಮಾಡಿಕೊಟ್ಟ ಉದಾಹರಣೆಯಿದೆ ಎಂದ ಶ್ರೀಗಳು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಸಹಕಾರವನ್ನು ಸ್ಮರಿಸಿದರು.
ನಮಗೆ ಜಾತಿಯ ಸಂಕುಚಿತ ಭಾವನೆಗಳಿಲ್ಲ. ನಮ್ಮ ಮಠ ಸ್ವಾತಂತ್ರ್ಯ ಪೂರ್ವದಿಂದಲೂ ಜಾತ್ಯತೀತವಾಗಿ ಅನ್ನ, ಅಕ್ಷರ ದಾಸೋಹ ನಡೆಸಿಕೊಂಡು ಬಂದಿದೆ ಎಂದು ಶ್ರೀಗಳು ಸೂಚ್ಯವಾಗಿ ತಿಳಿಸಿದರು.
ದುರ್ಘಟನೆಯಲ್ಲಿ ಒಳಗಾಗಿರು ವವರಿಗೆ ದಾವಣಗೆರೆಯ ಎಸ್ ಎಸ್ ಆಸ್ಪತ್ರೆ ಯಲ್ಲಿ ವಿಶೇಷ ಚಿಕಿತ್ಸೆಯನ್ನು ಉಚಿತವಾಗಿ ನೀಡಿಸಲಾಗುತ್ತಿದೆ. ಅಲ್ಲಿ ಸಾಧ್ಯವಾಗದಿದ್ದರೆ ಬೆಂಗಳೂರಿನ ಉನ್ನತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಜಾತ್ಯತೀತವಾಗಿ ಶ್ರೀ ಮಠದಿಂದ ಚಿಕಿತ್ಸೆಯ ವೆಚ್ಚ ಭರಿಸ ಲಾಗುವುದು ಎಂದು ಶ್ರೀಗಳು ಸಭೆಗೆ ತಿಳಿಸಿದರು.
ಅಧಿಕಾರ ಇರುವಲ್ಲಿ ಸೇವಾ ಮನೋಭಾವನೆ ಇರುವುದಿಲ್ಲ, ಸೇವಾ ಮನೋಭಾವ ಇರುವಲ್ಲಿ ಅಧಿಕಾರ ಇರುವುದಿಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬುದು ಭೌತವಿಜ್ಞಾನದಲ್ಲಿ ನ್ಯೂಟನ್ನನ ನಿಯಮವಿದೆಯಾದರೂ ಅದು ಸಾಮಾಜಿಕ ಸ್ತರದಲ್ಲಿ ಹಾಗೆ ಆಗಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಕ್ರಿಯೆಗೆ ಅಸಮಾನವಾದ ಪ್ರತಿಕ್ರಿಯೆ ಇರುತ್ತದೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು.