ಕೊಟ್ಟೂರು ತರಳಬಾಳು ಹುಣ್ಣಿಮೆಯಲ್ಲಿ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್
ಕೊಟ್ಟೂರು, ಜ. 30 – ಮಹಿಳೆಗೆ ರಕ್ಷಣೆಯ ಅಗತ್ಯ ಎಷ್ಟಿದೆಯೋ, ಸಮಾನತೆಯ ಅಗತ್ಯವೂ ಅಷ್ಟೇ ಇದೆ. ಗಂಡು ಹಾಗೂ ಹೆಣ್ಣನ್ನು ಸಮಾನವಾಗಿ ಕಾಣುತ್ತಾ, ಪರಸ್ಪರ ಬೆಂಬಲಿಸುವ ಸಮಾಜ ನಿರ್ಮಾಣವಾಗಬೇಕಿದೆ ಎಂದು ಚಿಕ್ಕಮಗಳೂರಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಮೂರನೇ ದಿನದಂದು ಆಯೋಜಿಸಲಾಗಿದ್ದ ಮಹಿಳಾ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ಅಕ್ಕಮಹಾದೇವಿಯವರಿಂದ ಹಿಡಿದು ಇಂದಿನ ಉದ್ಯಮಿ ಇಂದ್ರಾ ನೂಯಿ ಅವರವರೆಗೆ ಮಹಿಳೆಯರು ಹಲವಾರು ವಲಯಗಳಲ್ಲಿ ಸಾಧನೆ ಮಾಡಿದ್ದಾರೆ. ಆದರೆ, ಅವರನ್ನು ‘ಹೆಣ್ಣು’ ಎಂಬ ಸೀಮಿತ ಚೌಕಟ್ಟಿನಲ್ಲೇ ನೋಡಲಾಗುತ್ತದೆ. ಕಚೇರಿಗಳಲ್ಲಿ ‘ಸರ್’ ಎಂಬ ಮಾತಿನಲ್ಲಿ ಕಾಣುವ ಗೌರವ ‘ಮೇಡಂ’ ಎಂದಾಗ ಇರುವುದಿಲ್ಲ ಎಂದು ವಿಷಾದಿಸಿದರು.
ಆದರೂ, ಇತ್ತೀಚೆಗೆ ಸಮಾಜ ಬದಲಾಗುತ್ತಿದೆ. ಮಹಿಳೆಯರ ಸಾಧನೆಯನ್ನು ಬೆಂಬಲಿಸಲಾಗುತ್ತಿದೆ. ಹೀಗಾಗಿ ಮಹಿಳಾ ವಾದದ ಚಿಂತನೆಗಳು ಈಗ ಮಹಿಳಾ ಸಂವೇದಿಯಾಗಿ ಬದಲಾಗುತ್ತಿವೆ. ಹೆಣ್ಣಿಗೆ ರಕ್ಷಣೆಯ ಅಗತ್ಯವಿರುವಷ್ಟೇ ಸಮಾನತೆಯ ಅಗತ್ಯವೂ ಇದೆ. ಇದನ್ನು ಅರಿತು ಗಂಡು – ಹೆಣ್ಣು ಪರಸ್ಪರವಾಗಿ ಬೆಂಬಲಿಸುವ ಸಮಾಜ ಬೇಕಿದೆ ಎಂದು ಹೇಳಿದರು.
ಕದ್ದ ಶೂಸ್ ಪದಕಕ್ಕೆ ನೆರವಾಯಿತು : ಬಿ.ಎಲ್. ಭಾರತಿ
ಬೇರೆಯವರ ಚಪ್ಪಲಿ ಹಾಕಿದರೆ ದರಿದ್ರ ಬರುತ್ತದೆ ಎನ್ನುತ್ತಾರೆ. ಆದರೆ, ನನ್ನ ಕ್ರೀಡಾ ದಿನಗಳ ಆರಂಭದಲ್ಲಿ ಹೊಸ ಸ್ಪೋಟ್ಸ್ ಶೂಸ್ ಖರೀದಿಸಲು ಹಣವಿಲ್ಲದಿದ್ದಾಗ ಬೇರೆಯವರು ಧರಿಸಿದ್ದ ಶೂಸ್ ಧರಿಸಿ, ಬಂಗಾರದ ಪದಕ ಗೆದ್ದಿದ್ದೆ ಎಂದು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಉಪಾಧ್ಯಕ್ಷೆಯೂ ಆಗಿರುವ ಅಂತರರಾಷ್ಟ್ರೀಯ ಕ್ರೀಡಾಪಟು ಬಿ.ಎಲ್. ಭಾರತಿ ಹೇಳಿದರು. ಬಡತನದ ಹಿನ್ನೆಲೆಯಲ್ಲಿ ಹೊಸ ಕ್ರೀಡಾ ಶೂಸ್ ಖರೀದಿಸುವ ಸಾಮರ್ಥ್ಯ ಇರಲಿಲ್ಲ. ಕದ್ದಿರುವ ಚಪ್ಪಲಿ ಮಾರುವ ಕೆ.ಆರ್. ಮಾರುಕಟ್ಟೆಯ ಒಂದು ಅಂಗಡಿಯಲ್ಲಿ ಉತ್ತಮ ಗುಣಮಟ್ಟದ ಶೂಸ್ ಖರೀದಿಸಿದ್ದೆ. ಅದೇ ಪದಕ ಗೆಲ್ಲಲು ನೆರವಾಯಿತು ಎಂದವರು ನೆನಪಿಸಿಕೊಂಡರು.
ಈಗ ಕ್ರೀಡಾಪಟುಗಳ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಹೆಣ್ಣು ಮಕ್ಕಳು ಶಾರ್ಟ್ಸ್ ಹಾಕಿಕೊಂಡು ಕ್ರೀಡೆಯಲ್ಲಿ ಪಾಲ್ಗೊಂಡರೆ ಬೇರೆಯವರು ಏನೆನ್ನುತ್ತಾರೆ ಎಂಬ ಚಿಂತೆಯಿಂದ ಹೊರ ಬರಬೇಕು ಎಂದು ತಿಳಿಸಿದರು.
ಬೆಂಗಳೂರಿನ ಹೃದಯ ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎನ್ನುತ್ತೇವೆ. ಆದರೆ, ಈ ಮೂವರಿಗೂ ಗುರುವಾದವಳು ಅರುಂಧತಿ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅರುಂಧತಿ – ವಶಿಷ್ಟರ ರೀತಿ ನವದಂಪತಿ ಸಮಾನ ವಾಗಿ ಇರಲಿ ಎಂಬ ಆಶಯದೊಂದಿಗೆ ನವ ವಿವಾಹಿತರಿಗೆ ಅರುಂಧತಿ ನಕ್ಷತ್ರ ತೋರಿಸಲಾಗುತ್ತದೆ ಎಂದರು.
12ನೇ ಶತಮಾನದಲ್ಲಿ ಅಕ್ಕ ನಾಗಮ್ಮ ಬಸವಣ್ಣನವರಿಗೆ ಬೆನ್ನೆಲುಬಾಗಿ ಅದ್ಭುತ ಕೆಲಸ ಮಾಡಿದ್ದರು. 18ನೇ ಶತಮಾನದಲ್ಲಿ ಅಹಲ್ಯಾ ಬಾಯಿ ಹೋಳ್ಕರ್ ಅವರು ಕಾಶಿ, ಹರಿದ್ವಾರ ಮುಂತಾದ ಕಡೆ 3,150 ದೇವಾಲಯಗಳ ಪುನರುತ್ಥಾನ ಮಾಡಿದರು. ಇಂತಹ ಸ್ತ್ರೀ ಪರಂಪರೆಯ ಬಗ್ಗೆ ಅರಿತು ಗೌರವಿಸಬೇಕಿದೆ ಎಂದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾ ಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯ ಮೇಲೆ ಕುಶಾಲನಗರದ ಸ್ವರ್ಣ ಮಂದಿರದ ಬೌದ್ಧ ಭಿಕ್ಷು ತೇನ್ ಸಿಂಗ್ ಯೆಶಿ, ಚಿಕ್ಕಮಗಳೂರಿನ ಇಹ್ಸಾನ್ ಕರ್ನಾಟಕದ ಮುಖ್ಯ ಕಾರ್ಯನಿರ್ವಾಹಕ ಮೌಲಾನ ಮಹಮ್ಮದ್ ಅನ್ವರ್ ಅಸಾದಿ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ, ಮಾಜಿ ಸಚಿವೆ ಭಾಗೀರಥಿ ಮರುಳಸಿದ್ದನಗೌಡ, ಮಾಜಿ ಶಾಸಕ ನೇಮಿರಾಜ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.