ಬಸವಣ್ಣನವರ ಅನುಯಾಯಿಗಳಾಗದೇ ‘ವಾದಿ’ಗಳಾಗಿದ್ದೇವೆ

ಬಸವಣ್ಣನವರ ಅನುಯಾಯಿಗಳಾಗದೇ ‘ವಾದಿ’ಗಳಾಗಿದ್ದೇವೆ

ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಶಿವರುದ್ರ ಸ್ವಾಮೀಜಿ

ಕೊಟ್ಟೂರು, ಜ. 29 – 12ನೇ ಶತಮಾನದಲ್ಲಿ ಬಸವಣ್ಣನವರ ತತ್ವಗಳು ಜಾರಿ ಆಗಿದ್ದರಿಂದ ಬೇಡುವವರೇ ಇಲ್ಲದ ಅದ್ಭುತ ಸಮಾಜ ಸೃಷ್ಟಿ ಆಯಿತು. ಆದರೆ, ನಾವು ಅಂತಹ ಬಸವಣ್ಣನ ಅನುಯಾಯಿಗಳಾಗದೇ ಕೇವಲ ‘ವಾದಿ’ಗಳಾಗಿದ್ದೇವೆ ಎಂದು ಬೆಂಗಳೂರಿನ ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ವಿಷಾದಿಸಿದ್ದಾರೆ.

ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನದಂದು ಆಯೋಜಿಸಲಾಗಿದ್ದ ‘ಮಠಾಧೀಶರ ಚಿಂತನ ಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಶರಣರು ಪರಿಪೂರ್ಣ ಹಾಗೂ ಆತ್ಮನಿರ್ಭರ ಸಮಾಜ ಸೃಷ್ಟಿಸಿದ್ದರು. ಆದರೆ, ನಾವು ಇಂದು ಕಾಯಕ ಹಾಗೂ ದಾಸೋಹಗಳನ್ನು ಮಾತಿಗೆ ಸೀಮಿತ ಮಾಡಿದ್ದೇವೆ ಎಂದರು.

ಬಸವಣ್ಣನವರನ್ನು ನಾವು ಸಮತಾವಾದಿ – ಸಮಾಜವಾದಿ ಎಂದೆಲ್ಲಾ ಬಣ್ಣಿಸುತ್ತೇವೆ. ಹೀಗೆ ನಾವು ಕೇವಲ ಬಸವ ತತ್ವಗಳ ‘ವಾದಿ’ಗಳಾಗಿದ್ದೇವೆ. ಆದರೆ, ಬಸವ ಅನುಯಾಯಿಗಳಾಗಿಲ್ಲ. ಇದರಿಂದಾಗಿ ಸಮಾಜ ಶೃತಿ ತಪ್ಪಿದ ವೀಣೆಯಂತಾಗಿದೆ ಎಂದರು.

ವೈದಿಕ – ಅವೈದಿಕ ಇತ್ಯಾದಿ ಚರ್ಚೆಗಳ ಅಗತ್ಯ ಈಗಿಲ್ಲ. ಈಗ ನಮ್ಮ ಮನದ ಡೊಂಕನ್ನು ನಾವು ತಿದ್ದಿಕೊಳ್ಳಬೇಕಿದೆ. ಸಕಾರಾತ್ಮಕ ಚಿಂತನೆ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಯುವ ಯುವ ಪಡೆಯನ್ನು ರೂಪಿಸಬೇಕಿದೆ ಎಂದರು. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಭಾರತದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ತಾರತಮ್ಯ ಇದೆ. ಜಾತಿ ಕಾರಣದಿಂದ ಮನುಷ್ಯರನ್ನು ಕೀಳಾಗಿ ಕಾಣಲಾಗುತ್ತಿದೆ. ಜಾತಿಯ ಬದಲು ನೀತಿ ಮನುಷ್ಯನ ಅಳೆಯುವ ಆಧಾರವಾಗಬೇಕಿದೆ ಎಂದು ಹೇಳಿದರು.

ನರಸೀಪುರದ  ನಿಜಶರಣ ಅಂಬಿಗ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಕೊಟ್ಟೂರಿನಲ್ಲಿ ಹುಣ್ಣಿಮೆ ನಡೆಯುತ್ತಿರುವುದು ಈ ಭಾಗದ ಕೆರೆಗಳು ತುಂಬುವ ಸೂಚನೆಯಾಗಿದೆ. 12ನೇ ಶತಮಾನದಲ್ಲಿ ಕಾಯಕ ಯೋಗಿ ಸಿದ್ದರಾಮರು ಕೆರೆಗಳನ್ನು ಕಟ್ಟಿಸಿದ್ದರು. ಅವರ ಮಾರ್ಗದಲ್ಲೇ ತರಳಬಾಳು ಶ್ರೀಗಳು ಕೆರೆಗಳಿಗೆ ನೀರು ತುಂಬಿಸುತ್ತಿದ್ದಾರೆ ಎಂದರು.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಲ್ಲೇದೇವರಪುರದ ಮುಕುಂದೂರು ವಿರಕ್ತಮಠದ ಶ್ರೀ ಡಾ. ಮಹಾಂತ ಬಸವಲಿಂಗ ಸ್ವಾಮೀಜಿ, ಚಿತ್ರದುರ್ಗದ ಸಜ್ಜನ ಗಾಣಿಗ ಮಹಾಪೀಠದ ಶ್ರೀ ಡಾ. ಜಯಬಸವಕುಮಾರ ಸ್ವಾಮೀಜಿ,  ಚಿತ್ರದುರ್ಗ ಶ್ರೀ ಮಾಚಿದೇವ ಮಹಾಸಂಸ್ಥಾನದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಚಿತ್ರದುರ್ಗದ ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ, ಚಿತ್ತಾಪುರದ  ಶ್ರೀ ಸವಿತ ಕೊಂಚೂರು ಪೀಠದ ಶ್ರೀ ಸವಿತಾನಂದನಾಥ ಸ್ವಾಮೀಜಿ, ತಮಿಳುನಾಡಿನ ನಾಗಸಂದ್ರದ ಜಂಗಮ ಪೀಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!