ಸಿರಿಗೆರೆ ಹಿರಿಯ ಜಗದ್ಗುರುಗಳ 28ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಗೊ.ರು.ಚ.
ದಾವಣಗೆರೆ, ಸೆ. 28 – ತರಳಬಾಳು ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಸಕಲ ಶರಣರ ಸಂಗ ಮವಾಗಿದ್ದರು. 12ನೇ ಶತಮಾನದ ಶಿವಶರಣರ ಪ್ರತೀಕವಾಗಿದ್ದರು ಎಂದು ಜಾನಪದ ತಜ್ಞ ಹಾಗೂ ಸಾಹಿತಿ ಗೊ.ರು. ಚನ್ನಬಸಪ್ಪ ಬಣ್ಣಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಆಯೋಜಿಸಲಾಗಿದ್ದ ತರಳಬಾಳು ಬೃಹನ್ಮಠದ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 28ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಬೆಂಗಳೂರಿನ ತರಳಬಾಳು ಕೇಂದ್ರದ ಸ್ವಾಗತ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಸವಣ್ಣನವರ ನುಡಿ ನಿಷ್ಠೆ, ಅಲ್ಲಮ ಪ್ರಭುದೇವರ ಆತ್ಮಜ್ಞಾನ, ಅಕ್ಕಮಹಾದೇವಿ ಅವರ ಸೈರಣೆ, ಮರುಳಸಿದ್ಧ ದೇವರ ಪ್ರಸಾದ, ಮುಕ್ತಾಯಕ್ಕನವರ ಅನುಭಾವ ಯೋಗ, ಮಡಿವಾಳ ಮಾಚಯ್ಯನವರ ನಿಷ್ಠೂರತೆಯಂತಹ ಗುಣಗಳನ್ನು ಶ್ರೀಗಳಲ್ಲಿ ಕಾಣಬಹುದಿತ್ತು. ಅವರು ಶಿವಶರಣರ ಪ್ರತೀಕವಾಗಿದ್ದರು ಎಂದರು.
ಹಿರಿಯ ಜಗದ್ಗುರುಗಳಿಗೆ ಕಾಠಿಣ್ಯವೂ ಇತ್ತು ಕಾರುಣ್ಯವೂ ಇತ್ತು, ಶಿಕ್ಷೆ ಹಾಗೂ ಶಿಕ್ಷಣದ ವ್ಯತ್ಯಾಸ ತಿಳಿದಿತ್ತು. ಪಂಥವೂ ಗೊತ್ತಿತ್ತು ಪಂಚಾಯ್ತಿಯೂ ಗೊತ್ತಿತ್ತು ಎಂದ ಗೊ.ರು.ಚ., ಹಿರಿಯ ಶ್ರೀಗಳು ಮಾತಿಗಿಂತ ಕೃತಿಗೆ ಮಹತ್ವ ಕೊಟ್ಟವರು. ಕಾಲದ ಸವಾಲುಗಳನ್ನು ಸಂಕಲ್ಪದಿಂದ ಎದುರಿಸಿದ್ದರು ಎಂದರು.
ಸಿರಿಗೆರೆಯಲ್ಲಿ ಶ್ರೀಗಳು ಮೊದಲು ಶಾಲೆ ಸ್ಥಾಪಿಸಿದ್ದು ಸ್ಮರಣೀಯವಾಗಿದೆ. ನಂತರದಲ್ಲಿ ಅವರು ನೂರಾರು ಶಾಲೆಗಳನ್ನು ಕಟ್ಟಿ ಸಹಸ್ರ ಸಹಸ್ರ ಮಕ್ಕಳಿಗೆ ಜೀವನ ಕಟ್ಟಿ ಕೊಟ್ಟರು. ಅವರು ಆರಂಭಿಸಿದ ಅನುಭವ ಮಂಟಪ ನಾಡಿನ ಹೆಗ್ಗುರುತಾಗಿದೆ ಎಂದರು.
ಶ್ರೀಗಳು ನಡೆದದ್ದು ಹೂವಿನ ಹಾದಿಯಲ್ಲ, ಕಲ್ಲು – ಮುಳ್ಳಿನ ಹಾದಿಯಾಗಿತ್ತು. ಆ ಹಾದಿಯಲ್ಲಿ ನಡೆದ ಶ್ರೀಗಳು, ಕಲ್ಲು – ಮುಳ್ಳು ಸರಿಸಿ ಸಮಾಜದ ಹಾದಿ ಸುಗಮಗೊಳಿಸಿದರು ಎಂದು ಹೇಳಿದರು.
ಶ್ರೀಗಳು ಬರೆದಿರುವ `ಆತ್ಮ ನಿವೇದನೆ’ ಕೃತಿಯು ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆಯಾಗಿದೆ. ಅಂತರಂಗ ಶೋಧನೆಯ ಆಸಕ್ತರು, ಧರ್ಮಗುರು ಆಗ ಬಯಸುವವರು ಹಾಗೂ ಆಗಿರುವವರು ಅದನ್ನು ತಪ್ಪದೇ ಓದಬೇಕು ಎಂದು ತಿಳಿಸಿದರು.
ದ್ರೋಣರ ಶಿಷ್ಯ ದ್ರೋಹ ಏಕೆ ಪರಿಗಣಿಸಲಿಲ್ಲ?
ಗುರು ದ್ರೋಹ ಪಾಪ ಎಂಬ ಭಾವನೆ ಇದೆ. ಇದೇ ಭಾವನೆಯಿಂದ ದ್ರೋಣಾಚಾ ರ್ಯರು ಕೇಳಿದಾಗ ಏಕಲವ್ಯ ಹೆಬ್ಬೆರಳು ಕೊಡಬೇಕಾಯಿತು. ಆದರೆ, ಏಕಲವ್ಯ ಹೆಬ್ಬೆರಳು ಕತ್ತರಿಸುವಾಗ ಅದನ್ನು ನೋಡಿ ಯೂ ಸುಮ್ಮನಿದ್ದ ದ್ರೋಣಾಚಾರ್ಯರದ್ದು ಶಿಷ್ಯ ದ್ರೋಹ ಅಲ್ಲವೇ? ಈ ಶಿಷ್ಯ ದ್ರೋಹವನ್ನು ಏಕೆ ಪರಿಗಣಿಸಲಿಲ್ಲ?
ಈ ಪ್ರಶ್ನೆಯನ್ನು ಹಿರಿಯ ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕೇಳಿದ್ದರು ಎಂದು ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದ್ದಾರೆ.
ಮಹಾಭಾರತ ಹಾಗೂ ರಾಮಾಯಣ ಧರ್ಮಗ್ರಂಥಗಳು ಪ್ರಶ್ನಾತೀತ ಎಂಬ ಭಾವನೆ ಇದ್ದ ಸಂದರ್ಭದಲ್ಲಿ ಅವುಗಳನ್ನು ಚಿಕಿತ್ಸಕ ದೃಷ್ಟಿಯಿಂದ ಹಿರಿಯ ಜಗದ್ಗುರು ನೋಡಿ ಪ್ರಶ್ನಿಸುತ್ತಿದ್ದರು ಎಂದು ಗೊ.ರು.ಚ. ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ರಾಂತ ಕುಲಪತಿ ಡಾ. ಕೆ. ಸಿದ್ದಪ್ಪ, ಧಾರ್ಮಿಕ ನಡೆ ನುಡಿ ಪಾಲಿಸಿ ಬದುಕಿನ ಎಲ್ಲ ಹಂತಗಳಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂಬ ಅಚಲ ಗುರಿ ಶಿವಕುಮಾರ ಶ್ರೀಗಳದ್ದಾಗಿತ್ತು. ಸಮಾಜದಲ್ಲಿ ಹಲವಾರು ಹೊಸ ರೀತಿಯ ನವ ನವೀನ ಸುಧಾರಣೆಗಳನ್ನು ಅವರು ತಂದರು ಎಂದು ಹೇಳಿದರು.
ಸಾವಿರಾರು ವರ್ಷಗಳ ಹಿಂದೆ ಭಾರತ ವಿಶ್ವ ಗುರು ಆಗಿತ್ತು. ವಿಶ್ವಬಂಧು ಮರುಳಸಿದ್ಧರು, ಜಗಜ್ಯೋತಿ ಬಸವಣ್ಣ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಇವರೆಲ್ಲರೂ ಧರ್ಮ, ಸಂಸ್ಕಾರ ಮಾರ್ಗದರ್ಶನ ಮಾಡುವುದಷ್ಟೇ ಅಲ್ಲದೇ ಬದುಕಿ ತೋರಿಸಿ ಸಾಕ್ಷಾತ್ಕಾರವಾಗುವಂತೆ ಮಾಡಿದವರು. ಇತ್ತೀಚಿನ ದಿನಗಳಲ್ಲಿ ಹಿರಿಯ ಜಗದ್ಗುರುಗಳು ಮಾರ್ಗದರ್ಶನ ಹಾಗೂ ಸಾಕ್ಷಾತ್ಕಾರ ಮಾಡಿದರು ಎಂದು ತಿಳಿಸಿದರು.
ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಇದ್ದ ಅಧ್ಯಾತ್ಮಿಕ ಭಾವವನ್ನು ಮರೆತಿದ್ದರಿಂದ ನಾವೀಗ ಹಿಂದೆ ಬಿದ್ದಿದ್ದೇವೆ. ಅಧ್ಯಾತ್ಮ ಭಾವ ಮರೆತ ಕಾರಣದಿಂದ ಬೆಂಗಳೂರಿನಲ್ಲಿ ನಡೆದ ಗಲಭೆಗಳಂತಹ ಘಟನೆಗಳನ್ನು ಕಾಣುವಂತಾಗಿದೆ. ನಾವೀಗ ಮತ್ತೆ ಅಧ್ಯಾತ್ಮಿಕ ಭಾವ ಹೊಂದಬೇಕಿದೆ ಎಂದು ಡಾ. ಸಿದ್ದಪ್ಪ ತಿಳಿಸಿದರು.
ಕೊರೊನಾ ಕಾರಣದಿಂದ ಇತ್ತೀಚಿನ ತಿಂಗಳಲ್ಲಿ ಸಭೆ – ಸಮಾರಂಭಗಳನ್ನು ನಡೆಸಿರಲಿಲ್ಲ. ಇನ್ನು ಮಂದೆ ಆನ್ಲೈನ್ ಮೂಲಕ ಕಾಲ ಕಾಲಕ್ಕೆ ಸಭೆ, ಸಮಾರಂಭಗಳನ್ನು ನಡೆಸಲು ತರಳಬಾಳು ಕೇಂದ್ರ ನಿರ್ಧರಿಸಿದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮತ್ತಿತರರು ಆನ್ಲೈನ್ ಮೂಲಕ ಭಾಗವಹಿಸಿದ್ದರು.
ತರಳಬಾಳು ಕೇಂದ್ರದ ಸಲಹಾ ಸಮಿತಿಯ ಸದಸ್ಯ ಕೊಂಡಜ್ಜಿ ಷಣ್ಮುಖಪ್ಪ ವಂದಿಸಿದರು.