ತರಳಬಾಳು ಬೃಹನ್ಮಠದ ಶಿವಕುಮಾರ ಶ್ರೀಗಳು ಪೀಠಾಧಿಪತಿಗಳಿಗೆ, ಮಠ-ಪೀಠಗಳಿಗೆ ಮಾದರಿ

ಸಾಣೇಹಳ್ಳಿ, ಸೆ.25- ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಎಲ್ಲಾ ಪೀಠಾಧಿಪತಿಗಳಿಗೆ, ಮಠ-ಪೀಠಗಳಿಗೆ ಮಾದರಿಯಾದರು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು. 

ಇಲ್ಲಿನ ಶ್ರೀ ಶಿವಕುಮಾರ ಕಲಾ ಸಂಘ ಆಯೋಜಿಸಿದ್ದ 20ನೇ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಅಂತರ್ಜಾಲ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಶಿವಕುಮಾರ ಶ್ರೀಗಳು ತರಳಬಾಳು ಜಗದ್ಗುರು ಪೀಠಕ್ಕೆ ಬಂದಾಗ ಪೀಠ ಹೂವಿನ ಪಲ್ಲಕ್ಕಿಯಾಗದೆ, ಮುಳ್ಳಿನ ಹಾಸಿಗೆಯಾಗಿತ್ತು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕವಾಗಿ ಬಹಳ ಹಿಂದುಳಿದಿತ್ತು. ಆಗ ತರಳಬಾಳು ಮಠವನ್ನು ದುಗ್ಗಾಣಿ ಮಠವೆಂದು ಜನ ಹೀಯಾಳಿಸುತ್ತಿದ್ದರು. ಅಂತಹ ಸಂದರ್ಭ ದಲ್ಲಿ ಪೀಠದ ಚುಕ್ಕಾಣಿ ಹಿಡಿದ ಶಿವಕುಮಾರ ಶ್ರೀಗಳು ಹಗಲಿರುಳೆನ್ನದೇ ಶ್ರಮಿಸಿ ಸಮಾಜ ವನ್ನು ಸಂಘಟಿಸಿ, ಅವರಿಗೆ ಶಿಕ್ಷಣ ನೀಡಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕ ವಾಗಿ ಮುಂದೆ ಬರುವಂತೆ ಪ್ರೇರೇಪಿಸಿದರು. 

ಸ್ವಾತಂತ್ರ್ಯಪೂರ್ವದಲ್ಲಿ ಶಾಲಾ-ಕಾಲೇ ಜುಗಳನ್ನು, ವಿದ್ಯಾರ್ಥಿನಿಲಯಗಳನ್ನು ತೆರೆದು ಸಹಸ್ರ-ಸಹಸ್ರ ಜನರ ಬಾಳಿಗೆ ಬೆಳಕಾದರು. ಅವರು ಅಂದು ಶಿಕ್ಷಣವನ್ನು ನೀಡದಿದ್ದರೆ ನಮ್ಮಂತಹ ಅನೇಕರು ಶಿಕ್ಷಣದಿಂದ ವಂಚಿತರಾದ ಬೇಕಾಗಿತ್ತು. ಪೂಜ್ಯರ ಪರಿಶ್ರಮದ ಫಲವಾಗಿ ಇಂದು ಸಿರಿಗೆರೆ ಮಠ ಕೇವಲ ಒಂದು ಜಾತಿಗೆ ಸೀಮಿತಗೊಳ್ಳದೆ ಇಡೀ ಸಮಾಜದ ಸರ್ವತೋಮುಖ ಬೆಳವಣಿಗೆಯನ್ನು ಹೊಂದಿದೆ. ಶಿವಕುಮಾರ ಸ್ವಾಮಿಗಳವರು ಬಸವಾದಿ ಶಿವಶರಣರ ತತ್ವ-ಸಿದ್ಧಾಂತಗಳ ಅನುಸಾರ ಬಾಳಿ ಬದುಕಿದವರು. ಈ ನಿಟ್ಟಿನಲ್ಲಿ ಶರಣರ ಸಂದೇಶ ಸಾರುವಂತಹ ನಾಟಕಗಳನ್ನು ಸ್ವತಃ ತಾವೇ ರಚಿಸಿ, ನಿರ್ದೇಶಿಸಿ, ಪ್ರದರ್ಶನಕ್ಕೆ ಏರ್ಪಾಡು ಮಾಡುತ್ತಿದ್ದರು. ಅವರ ಎರಡು ವರ್ಷಗಳ ದಿನಚರಿಯನ್ನು `ಆತ್ಮ ನಿವೇದನೆ’ ಎನ್ನುವ ಹೆಸರಿನಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಗಳವರು ಸಂಪಾದಿಸಿದ್ದಾರೆ. ಈ ಕೃತಿ ಸ್ವಾಮಿ ಗಳು, ಸ್ವಾಮಿಗಳಾಗುವವರು ಓದಲೇಬೇಕಾದ ಕೃತಿ ಎಂದು ಪಂಡಿತಾರಾಧ್ಯರು ಹೇಳಿದರು. 

ಕೊರೊನಾ ಮಹಾಮಾರಿ ವಿಶ್ವವ್ಯಾಪಿ ಯಾಗಿ ಹಬ್ಬಿದೆ. ಈಗೀಗಲಂತೂ ಗ್ರಾಮೀಣ ಪ್ರದೇಶಗಳಿಗೂ ಹಬ್ಬಿ ಹಲವರ ಬಲಿ ಪಡೆಯು ತ್ತಲಿದೆ. ಇಂತಹ ಸಂದರ್ಭದಲ್ಲಿ ಸಾಮೂಹಿಕ ವಾಗಿ ಜನ ಸೇರುವುದು ಉಚಿತವಾದುದಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿವರ್ಷದಂತೆ ಇಂದು ಸಿರಿಗೆರೆಯಲ್ಲಿ ಸಾರ್ವಜನಿಕವಾಗಿ ನಡೆಯುತ್ತಿದ್ದ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ರದ್ದುಗೊಳಿಸಿ ಮನೆ-ಮನದಲ್ಲಿ ಆಚರಿಸುವಂತೆ ಕರೆಕೊಟ್ಟ ಡಾ. ಜಗದ್ಗುರುಗಳವರ ನಿರ್ಧಾರ ಅತ್ಯಂತ ಸೂಕ್ತವಾಗಿದೆ.  ಮಠದ ಅನುಯಾಯಿಗಳು ಕೇವಲ ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ, ನಮಿಸಿದರೆ ಸಾಲದು; ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಗಬೇಕು. ಆಗ ಅದು ಪೂಜ್ಯರಿಗೆ ಸಲ್ಲುವ ನಿಜವಾದ ಶ್ರದ್ಧಾಂಜಲಿ. ಶಿವಕುಮಾರ ಶ್ರೀಗಳ  ಸ್ಮರಣೆಯೇ ಒಂದು ಸ್ಫೂರ್ತಿ ಎಂದರು. 

ಇದೇ ಸಂದರ್ಭದಲ್ಲಿ ಕಳೆದ ಆಗಸ್ಟ್ 1 ರಿಂದ 30ನೇ ತಾರೀಖಿನವರೆಗೆ ನಡೆದ `ಮತ್ತೆ ಕಲ್ಯಾಣ ಅಂತರ್ಜಾಲ’  ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಆಶೀರ್ವಚನ ನೀಡಿದ್ದ ಮಾತುಗಳ ಸಂಗ್ರಹ `ಶರಣ ಸಂದೇಶ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ, ಚಿಂತಕ ಎಸ್.ಜಿ ಸಿದ್ಧರಾಮಯ್ಯ, ಕೊರೊನಾದ ಅತ್ಯಂತ ಕೆಟ್ಟ ಕಾಲವನ್ನು ಕೂಡ ಸಮರ್ಥವಾಗಿ ಪಂಡಿತಾರಾಧ್ಯ ಶ್ರೀಗಳು ಬಳಸಿಕೊಳ್ಳುತ್ತಿದ್ದಾರೆ. ಅವರ ಈ ಮಾದರಿ ಅನುಕರಣೀಯ. ಕಳೆದ ಅಗಸ್ಟ್  ತಿಂಗಳ ಪೂರ್ಣಾವಧಿಯಲ್ಲಿ ಪಂಡಿತಾರಾಧ್ಯ ಶ್ರೀಗಳು ಮತ್ತೆ ಕಲ್ಯಾಣದಲ್ಲಿ ಆಡಿದ ಮಾತುಗಳು ಸಂಶೋಧನಾತ್ಮಕವಾಗಿವೆ. ಅಧ್ಯಯನಕ್ಕೆ ಯೋಗ್ಯವಾಗಿವೆ. ಈ ಪುಸ್ತಕ ಅನ್ಯ ಭಾಷೆಗಳಿಗೂ ಕೂಡ ಅನುವಾದ ಆಗಬೇಕು. ಇದೊಂದು ಸ್ತುತ್ಯಾರ್ಹ ಕಾರ್ಯ ಎಂದರು.  

ನುಡಿ ನಮನ ಸಲ್ಲಿಸಿದ ಸಾಣೇಹಳ್ಳಿಯ ಅಧ್ಯಾಪಕ ಹೆಚ್.ಎಸ್ ದ್ಯಾಮೇಶ್ ಅವರು, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವ್ಯಕ್ತಿತ್ವ ಮತ್ತು ಶ್ರೀ ತರಳಬಾಳು ಗುರು ಪರಂಪರೆ ಹಾಗೂ ಅದರ ಚಟುವಟಿಕೆ ಕುರಿತಂತೆ ಸಚಿತ್ರ ಮಾಹಿತಿ ನೀಡಿದರು. 

ಆರಂಭದಲ್ಲಿ ಶಿವಸಂಚಾರದ ಕಲಾವಿದ ರಾದ ಕೆ.ದಾಕ್ಷಾಯಿಣಿ ಮತ್ತು ಹೆಚ್.ಎಸ್ ನಾಗರಾಜ್, ಶಿವಕುಮಾರ ಶ್ರೀಗಳವರ ಕುರಿ ತಂತೆ ಮಹಾದೇವ ಬಣಕಾರರು ರಚಿಸಿರುವ ವಚನಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು. ಬಿ. ರಾಜು ಸ್ವಾಗತಿಸಿದರು. ಕಾರ್ಯಕ್ರಮ ಮುಗಿದ ನಂತರ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ವರ ಜೀವನ ಆಧಾರಿತ, ಡಾ. ರಾಜಶೇಖರ ಹನುಮಲಿ ಅವರು ಬರೆದ `ಮಹಾಬೆಳಕು’ ನಾಟಕವನ್ನು ಆರ್. ಜಗದೀಶ್ ನಿರ್ದೇಶನ ದಲ್ಲಿ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯ ಕಲಾವಿದರು ಅಭಿನಯಿಸಿದರು.  

error: Content is protected !!