ಕಾಯ್ದೆಗಳ ತಿದ್ದುಪಡಿ ಖಂಡಿಸಿ ಹೆದ್ದಾರಿ ಬಂದ್

ದಾವಣಗೆರೆ, ಸೆ.25- ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ನಗರದಲ್ಲಿ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ ನಡೆಸುವ ಮುಖಾಂತರ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳ ತಿದ್ದುಪಡಿ ಕೈ ಬಿಡುವಂತೆ ಸರ್ಕಾರದ ಗಮನ ಸೆಳೆದವು.

ಅಖಿಲ ಭಾರತ ರೈತ ಹೋರಾಟ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ), ಭಾರತ ಕಮ್ಯುನಿಸ್ಟ್ ಪಕ್ಷ, ಎಐಕೆಎಸ್, ಕರ್ನಾಟಕ ಜನಶಕ್ತಿ, ಕರ್ನಾಟಕ ಪ್ರಾಂತ ರೈತ ಸಂಘ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಮತ್ತು ಇತರೆ ಸಂಘಟನೆಗಳು ಒಟ್ಟುಗೂಡಿ ಬಾಡಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಬೆಳಿಗ್ಗೆ ಸುಮಾರು 2 ತಾಸು ತಡೆದು ರೈತ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಸುಗ್ರೀವಾಜೆ ಮೂಲಕ ಜಾರಿಗೆ ತರುವುದನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. 

ಇದಕ್ಕೂ ಮುನ್ನ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು, ಕಾರ್ಯಕರ್ತರು ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಬಳಿ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಸುಡುವುದರ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ರೈತರು ಬೆಳೆದ ಬೆಳೆಗೆ ದರ ನಿಗದಿಪಡಿಸುವ ಅಧಿಕಾರ ರೈತರಿಗೆ ನೀಡಬೇಕು. ಅದನ್ನು ಕಾಯ್ದೆಯಲ್ಲಿ ತಿದ್ದುಪಡಿ ಮಾಡಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆಗಿಂತ ವೈಜ್ಞಾನಿಕ ಬೆಲೆ ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವವರನ್ನು ಜೈಲಿಗೆ ಹಾಕುತ್ತೇವೆಂಬ ತಿದ್ದುಪಡಿ ತರಬೇಕು. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಿದ್ದುಪಡಿಗಳನ್ನು ಹಿಂಪಡೆದು ರೈತಪರ ಕಾಳಜಿ ತೋರಬೇಕು ಎಂದು ಆಗ್ರಹಿಸಿದರು.

ನಾಡಿದ್ದು ಭಾನುವಾರ ಬೆಳಗ್ಗೆ 11ಕ್ಕೆ ಜಯದೇವ ವೃತ್ತದಿಂದ ನಗರದ ವಿವಿಧೆಡೆ ಬೈಕ್ ರಾಲಿ ನಡೆಸಲಾಗುವುದು. ಸೋಮವಾರ ದಾವಣಗೆರೆಯಲ್ಲಿ ಬಂದ್ ನಡೆಸುವುದಾಗಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ರೈಲ್ವೆ, ವಿಮೆ, ಬೆಸ್ಕಾಂ ಇತ್ಯಾದಿಯನ್ನು ಖಾಸಗಿಯವರಿಗೆ ವಹಿಸುತ್ತಿರುವ ಸರ್ಕಾರವು ರೈತರ ಭೂಮಿಯನ್ನೂ ಖಾಸಗಿಯವರಿಗೆ ನೀಡಲು ಹೊರಟಿದೆ. ಬರುವ ದಿನಗಳಲ್ಲಿ ಊರುಗಳು ಸಹ ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಾಗುವ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಕಾರ್ಮಿಕ ಮುಖಂಡ ಹೆಚ್‌.ಕೆ. ರಾಮಚಂದ್ರಪ್ಪ ಮಾತನಾಡಿ ಎಪಿಎಂಸಿ, ಭೂ ಸುಧಾರಣಾ
ಕಾಯ್ದೆಗಳ ತಿದ್ದುಪಡಿಯಿಂದ ರೈತರು ಉದ್ಧಾರವಾಗಲ್ಲ.
ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ
ಮಾರಾಟ ಮಾಡಬಹುದು ಎಂದು ಎಪಿಎಂಸಿ ಕಾಯ್ದೆ ಹೇಳುತ್ತದೆ. ಆದರೆ ಎಂಎನ್‌ಸಿಗಳು ರೈತರು ಕೇಳಿದ ದರ ಕೊಟ್ಟು ಉತ್ಪನ್ನವನ್ನು ಖರೀದಿಸುತ್ತಾರೆಂಬುದು ಸುಳ್ಳಿನ ಕಂತೆ ಎಂದು ಆಕ್ಷೇಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ, ಕಿಸಾನ್ ಕಾಂಗ್ರೆಸ್‌ನ ಶಿವಗಂಗಾ ಬಸವರಾಜ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಹೆಚ್‌.ಜಿ. ಉಮೇಶ್‌, ಇ. ಶ್ರೀನಿವಾಸ್, ಆನಂದರಾಜ್, ಸತೀಶ್ ಅರವಿಂದ, ಪಿ.ಕೆ. ಲಿಂಗರಾಜು, ಜಯಣ್ಣ, ಎಂ.ಡಿ. ಹನುಮಂತಪ್ಪ, ಹಾಲೇಶನಾಯ್ಕ, ಚಿಕ್ಕಬೂದಿಹಾಳ್ ಭಗತ್ ಸಿಂಹ, ಗುಮ್ಮನೂರು ಬಸವರಾಜ್, ಆಲೂರು ಪುಟ್ಯಾನಾಯ್ಕ, ನಿಟ್ಟುವಳ್ಳಿ ಪೂಜಾರ್ ಅಂಜಿನಪ್ಪ, ರವಿ, ಅಭಿಷೇಕ್, ಇಟಗಿ ಬಸವರಾಜ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!