ಎಪಿಎಂಸಿ ಉಳಿಸಿಕೊಳ್ಳಲು ಹೋರಾಟ

ರಾಜ್ಯದ ವಿವಿಧ ಜಿಲ್ಲೆಗಳ ಎಪಿಎಂಸಿ ಅಧ್ಯಕ್ಷರುಗಳ ಸಭೆಯಲ್ಲಿ ತೀರ್ಮಾನ, ಐದಾರು ದಿನದಲ್ಲಿ ರೂಪು ರೇಷೆ

ದಾವಣಗೆರೆ, ಸೆ. 13- ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲು ಹಾಗೂ ಎಪಿಎಂಸಿ ಉಳಿಸಿಕೊಳ್ಳಲು ಸಂಘಟಿತ ಹೋರಾಟ ನಡೆಸಲು ನಗರದ ಎಪಿಎಂಸಿ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯದ ವಿವಿಧ ಎಪಿಎಂಸಿ ಅಧ್ಯಕ್ಷರು, ನಿರ್ದೇಶಕರು, ಕೃಷಿ ಮಾರಾಟ ಮಹಾಮಂಡಳಿ ಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಎಪಿಎಂಸಿ ಉಳಿಸಿಕೊಳ್ಳುವಿಕೆಯ ಹೋರಾ ಟದ ರೂಪು ರೇಷೆ ಕುರಿತು ನಡೆದ ಸುದೀರ್ಘ ಚರ್ಚೆಯ ನಂತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾವಣಗೆರೆ ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಬೆಂಗಳೂರಿನಲ್ಲಿ ವಕೀಲರ ಮೂಲಕ ನ್ಯಾಯಾಲಯದ ಮೊರೆ ಹೋಗಲು ಚಿಂತಿಸಲಾಗಿದೆ. ಅಧಿವೇಶನ ನಡೆಯುವುದರೊಳಗೆ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಮುಂದಾಗ ಬಹುದಾದ ಅನ್ಯಾಯವನ್ನು ನೆನೆದರೆ ಮನಸ್ಸಿಗೆ ನೋವಾಗುತ್ತದೆ. ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಇಬ್ಬರೂ ಎಪಿಎಂಸಿ ಸಚಿವರಾಗಿ ನಗರದಲ್ಲಿನ 222 ಎಕರೆ ಎಪಿಎಂಸಿಯನ್ನು ರಾಜ್ಯದಲ್ಲಿಯೇ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿದ್ದರು. ನಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿ ಹೊಣೆ ನೀಡಿದ್ದಾರೆ. ಆದರೆ ಇಂದು ಎಪಿಎಂಸಿ ಮುಳುಗಡೆ ಹಂತಕ್ಕೆ ಬಂದಿರುವುದು ನೋವಿನ ವಿಷಯ ಎಂದರು.

ರಾಜ್ಯದಲ್ಲಿನ 165 ಎಪಿಎಂಸಿ ಅಧ್ಯಕ್ಷರ ಗಮನಕ್ಕೂ ತಾರದೆ ಸರ್ಕಾರ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ತೋಟಗಾರಿಕೆ ಹಾಗೂ ಎಪಿಎಂಸಿ ಇಲಾಖೆಯನ್ನು ವಿಲೀನ  ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಿಂದಾಗಿ ರಾಜ್ಯದಲ್ಲಿನ 15-20 ಲಕ್ಷ ಜನರು ಉದ್ಯೋಗಕ್ಕೆ ಕತ್ತರಿ ಬೀಳಲಿದೆ. ಇದು ಕಳವಳಕಾರಿ ವಿಷಯ ಎಂದರು.

ಎಪಿಎಂಸಿ ಹೊರತಾದ ಹೊರಗಿನ ವರ್ತಕರಿಗೂ ರೈತರು ದಾಸ್ತಾನು ಮಾರಿದರೆ ಅದಕ್ಕೆ ಸೂಕ್ತ  ಭರವಸೆಯಾಗಲೀ, ರಕ್ಷಣೆಯಾಗಲೀ ಸಿಗುವುದಿಲ್ಲ. ಆದ್ದರಿಂದ ಎಪಿಎಂಸಿ ಉಳಿಸಿಕೊಳ್ಳುವ ಹೋರಾಟ ಅನಿವಾರ್ಯವಾಗಿದೆ. ಇಂದಿನ ಸಭೆಯಲ್ಲಿ ನೀಡಿದ ಎಲ್ಲಾ ಸಲಹೆಗಳನ್ನು ಪರಿಗಣಿಸಿ, ನಿರ್ದೇಶಕ ಮಂಡಳಿಯೊಂದಿಗೆ ಚರ್ಚಿಸಿ, ಐದಾರು ದಿನಗಳಲ್ಲಿ ಅಥವಾ ಅಧಿವೇಶನಕ್ಕೂ ಮೊದಲೇ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿ ದಂತೆ ಇತರರಿಗೂ ಮನವಿ ಸಲ್ಲಿಸೋಣ ಎಂದರು.

ಚಾಮರಾಜ ನಗರ ಎಪಿಎಂಸಿ ಅಧ್ಯಕ್ಷ ನಾಗೇಂದ್ರಪ್ಪ ಮಾತನಾಡಿ, ದೇಶದಲ್ಲಿ ಸಾವಿರಕ್ಕೂ ಹೆಚ್ಚು ಎಪಿಎಂಸಿಗಳಿವೆ. ರಾಜ್ಯದಲ್ಲಿಯೇ 165 ಎಪಿಎಂಸಿ, ಸುಮಾರು 4 ಸಾವಿರ ಉಪ ಕೃಷಿ ಮಾರುಕಟ್ಟೆಗಳಿವೆ. ವರ್ಷಕ್ಕೆ 600-700 ಕೋಟಿ ರೂ. ಆದಾಯ ಎಪಿಎಂಸಿಗಳಿಂದ ಬರುತ್ತದೆ.  ಎಪಿಎಂಸಿ ಉಳಿಸಿಕೊಳ್ಳುವ ಹೋರಾಟಕ್ಕೆ ಮುಂದಾಗದಿದ್ದರೆ ರಾಜ್ಯದಲ್ಲಿನ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ನಶಿಸಿ ಹೋಗುತ್ತದೆ ಎಂದು ಎಚ್ಚರಿಸಿದರು.

ನೂತನ ಕಾಯ್ದೆ ಬಂಡವಾಳ ಶಾಹಿಗಳ ಪರವಾಗಿದ್ದು, ಕಾಯ್ದೆ ಅನುಷ್ಠಾನಕ್ಕೆ ತಂದಿದ್ದ ಮಹಾರಾಷ್ಟ್ರ ಸರ್ಕಾರ ವಿಫಲವಾಗಿತ್ತು. ಈಗ ಕೇಂದ್ರ ಸರ್ಕಾರ ಕಾಯ್ದೆ ಜಾರಿಯಾಗಲೇ ಬೇಕು ಎನ್ನುತ್ತಿದೆ. ರಾಜ್ಯ ಸಮಿತಿ ಸದಸ್ಯರು ಕೇಂದ್ರದ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.

ಹೋರಾಟ ನಡೆಸದೇ ಇದ್ದಲ್ಲಿ ಎಪಿಎಂಸಿ ಆಸ್ತಿಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಲೀಸ್ ಅಥವಾ ಮಾರಾಟ ಮಾಡುವ ಸಾಧ್ಯತೆಯೂ ಇದೆ. ಆದ್ದರಿಂದ ಶೀಘ್ರ ಹೋರಾಟ ಅಗತ್ಯ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಎಪಿಎಂಸಿ ಬಗ್ಗೆಯ ಅರಿವೇ ಇಲ್ಲವಾಗುತ್ತದೆ ಎಂದು ಎಚ್ಚರಿಸಿದರು.

ಬ್ಯಾಡಗಿ ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಕೊಡಚಿ ಮಾತನಾಡಿ, ಎಪಿಎಂಸಿ ಹೊರತಾದ ವರ್ತಕರಿಗೆ ರೈತರು ದಾಸ್ತಾನು ಮಾರಿದರೆ ಯಾವುದೇ ನಿಯಂತ್ರಣ ಇರುವುದಿಲ್ಲ. ಈಗಾಗಲೇ ನಮ್ಮ ಎಪಿಎಂಸಿಯಲ್ಲಿ ಕಳೆದ ಒಂದು ತಿಂಗಳಿನಲ್ಲಿ 40 ಸಿಬ್ಬಂದಿಗಳ ಪೈಕಿ 20 ಸಿಬ್ಬಂದಿಗಳನ್ನು ತೆಗೆದು ಹಾಕಲಾಗಿದೆ. ಎಪಿಎಂಸಿ ಉಳಿಕೆಗೆ ವ್ಯವಸ್ಥಿತ ಹೋರಾಟ ಅಗತ್ಯ ಎಂದರು. ನಮ್ಮನ್ನು ಎಪಿಎಂಸಿ ಅಧ್ಯಕ್ಷರನ್ನಾಗಿ ಮಾಡಿ ಅಧಿಕಾರ ನೀಡುವುದಿಲ್ಲ ಎಂದರೆ ಹೇಗೆ? ಎಲ್ಲರೂ ಪಕ್ಷ ಭೇದ ಮರೆತು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಕಾನೂನು ಮೊರೆ ಹೋಗೋಣ ಎಂದು ಅಭಿಪ್ರಾಯಿಸಿದರು.

ಹೈಕೋರ್ಟ್ ಮೊರೆ ಹೋಗುವುದು ಉತ್ತಮ. ಆದರೆ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಹೋರಾಟಕ್ಕೆ ಬಲ ಹೆಚ್ಚುತ್ತದೆ ಎಂದು ಸಾಗರ ಎಪಿಎಂಸಿ ನಿಕಟ ಪೂರ್ವ ಅಧ್ಯಕ್ಷ ಹೆಚ್.ಎಂ. ರವಿಕುಮಾರ್ ಅಭಿಪ್ರಾಯಿಸಿದರು.

ಚಿತ್ರದುರ್ಗದ ರೈತ ಮುಖಂಡ, ಎಪಿಎಂಸಿ ನಿರ್ದೇಶಕ  ಸುರೇಶ್ ಬಾಬು ಅಧಿವೇಶನದ ಆರಂಭದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಬಹುದು. ಎಲ್ಲಾ ರಾಜಕೀಯ ಪಕ್ಷಗಳ ಹಿತ ಬದಿಗೊತ್ತಿ ಹೋರಾಟಕ್ಕೆ ಮುಂದಾಗಬೇಕು ಎಂದರು.

ಹುಬ್ಬಳ್ಳಿ ಸಹದೇವಪ್ಪ, ತುಮಕೂರಿನ ಎಸ್.ಟಿ. ಸೋಮಶೇಖರ್, ಕುಮುಟಾದ ಅರವಿಂದ ಪೈ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಎಪಿಎಂಸಿ ಅಧ್ಯಕ್ಷರು, ನಿರ್ದೇಶಕರು ಸಭೆಯಲ್ಲಿ ಸಲಹೆ ನೀಡಿದರು. ಎಪಿಎಂಸಿ ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!