ಕೊರೊನಾ ನಡುವೆಯೇ ‘ಪೋಷಣೆ’

ದಾವಣಗೆರೆ, ಸೆ. 8 – ಕೊರೊನಾ ನಡುವೆಯೇ ಪೋಷಣಾ ಮಾಸಾಚರಣೆಯ ಸಂದೇಶವನ್ನು ಜನರಿಗೆ ತಲುಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದ್ದು, ಸೆಪ್ಟೆಂಬರ್ ತಿಂಗಳಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್. ವಿಜಯ್ ಕುಮಾರ್, ಮಂಗಳವಾರದಿಂದಲೇ ಮಾಸಾಚರಣೆಯ ಕಾರ್ಯಕ್ರಮಗಳು ಆರಂಭವಾಗಿವೆ. ಸೆ.11ರಂದು ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್ ಅವರಿಂದ ಔಪಚಾರಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಮಹಿಳೆಯರು ಹಾಗೂ ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುವ ಹಾಗೂ ರಕ್ತಹೀನತೆ ತಡೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ‘ನಮ್ಮ ಸಂಕಲ್ಪ ಪೌಷ್ಟಿಕ ಕರ್ನಾಟಕ’ ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಈ ಕಾರ್ಯಕ್ರಮಗಳಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳೂ ಜೊತೆಯಾಗಲಿವೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸಮಾ ರಂಭಗಳನ್ನು ಆಯೋಜಿಸುತ್ತಿಲ್ಲ. ಇದರ ಬದಲು ವಾಟ್ಸ್‌ಆಪ್, ಮಾಧ್ಯಮಗಳು ಹಾಗೂ ಪ್ರಚಾರ ವಾಹನಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದವರು ಹೇಳಿದರು.

ಅಪೌಷ್ಠಿಕತೆ ಇಳಿಕೆ : 2018ರಲ್ಲಿ ಆರಂಭವಾದ ಪೋಷಣ್ ಅಭಿಯಾನದ ಕಾರಣದಿಂದಾಗಿ ಜಿಲ್ಲೆಯಲ್ಲಿ 2019ರಲ್ಲಿ ಶೇ.10.91ರಷ್ಟಿದ್ದ ಅಪೌಷ್ಠಿಕ ಮಕ್ಕಳ ಸಂಖ್ಯೆ ಈ ವರ್ಷ ಶೇ.8.59ಕ್ಕೆ ಇಳಿಕೆಯಾಗಿದೆ. ಗರ್ಭಿಣಿಯರಲ್ಲೂ ಪೌಷ್ಠಿಕತೆಯ ಬಗ್ಗೆ ಸಾಕಷ್ಟು ಅರಿವು ಮೂಡಿದೆ ಎಂದವರು ತಿಳಿಸಿದರು.

ಕೈ ತೋಟಗಳ ಅಭಿವೃದ್ಧಿ : ಜಿಲ್ಲೆಯ 428 ಅಂಗನವಾಡಿ ಕೇಂದ್ರಗಳಲ್ಲಿ ಕೈ ತೋಟಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸವನ್ನೂ ಸಹ ಪಡೆದುಕೊಳ್ಳಲಾಗುವುದು ಎಂದವರು ತಿಳಿಸಿದರು.

ಪ್ರಶಸ್ತಿ ಪುರಸ್ಕಾರ : ಪೋಷಣ ಮಾಸಾಚರಣೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತಾಲ್ಲೂಕು ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗುವುದು. 

332 ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ : ಜಿಲ್ಲೆಯಲ್ಲಿ ಈ ವರ್ಷ 332 ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ಕಂಡು ಬಂದಿದೆ. ಒಟ್ಟಾರೆ 11 ಸಾವಿರ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ ಇದೆ. ಈ ಮಕ್ಕಳಿಗೆ ವಿಶೇಷ ಯೋಜನೆಯ ಮೂಲಕ ನೆರವು ನೀಡಲಾಗುತ್ತಿದೆ. ಚಿಗಟೇರಿ ಆಸ್ಪತ್ರೆಯಲ್ಲಿರುವ ಪೌಷ್ಠಿಕ ಪುನರ್ವಸತಿ ಕೇಂದ್ರ (ಎನ್.ಆರ್.ಸಿ.)ದಲ್ಲಿ ನೆರವು ನೀಡಲಾಗುತ್ತಿದೆ ಎಂದವರು ಹೇಳಿದರು.

ತಾಲ್ಲೂಕುಗಳಲ್ಲೂ ಎನ್.ಆರ್.ಸಿ. : ಪ್ರಸಕ್ತ ಜಿಲ್ಲಾ ಮಟ್ಟದಲ್ಲಿ ಮಾತ್ರ ಎನ್.ಆರ್.ಸಿ. ಕೇಂದ್ರವಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲೂ ಸಹ ಎನ್.ಆರ್.ಸಿ.ಗಳನ್ನು ತೆರೆಯಲಾಗುವುದು. ಈ ಕೇಂದ್ರಗಳಲ್ಲಿ ಬರುವ ಮಕ್ಕಳಿಗೆ ನೆರವಾಗುವುದಷ್ಟೇ ಅಲ್ಲದೇ, ಪೋಷಕರಿಗೆ ನೆರವಾಗಲು ಉದ್ಯೋಗ ಖಾತ್ರಿಯ ಕೂಲಿ ನೀಡಲಾಗುತ್ತಿದೆ ಎಂದವರು ತಿಳಿಸಿದರು.

ಅಪ್ರಾಪ್ತ ಮದುವೆಯಿಂದ ಸಮಸ್ಯೆ : ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಜನಿಸುವ ಮಕ್ಕಳಲ್ಲಿ ಅಪೌಷ್ಠಿಕತೆಗೆ ದಾರಿ ಮಾಡಿಕೊಡುತ್ತದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.

ಬಡತನ, ರಕ್ತ ಸಂಬಂಧಿಗಳಲ್ಲಿ ಮದುವೆ, ಅಂತರ ಇಲ್ಲದೆ ಗರ್ಭ ಧರಿಸುವುದೂ ಸಹ ಅಪೌಷ್ಟಿಕತೆ ತರುತ್ತದೆ. ಹೀಗಾಗಿ ಅಪ್ರಾಪ್ತರ ಮದುವೆ ತಡೆಯಲು ನಿರಂತರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

error: Content is protected !!