ನೀಟ್, ಜೆಇಇ ವಿಳಂಬದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ : ಐಐಟಿ ದೆಹಲಿ

ನೀಟ್ ಪರೀಕ್ಷೆಯ ವಿರುದ್ಧ ಯುವ ಕಾಂಗ್ರೆಸ್ ಸದಸ್ಯರು ದೆಹಲಿಯಲ್ಲಿರುವ ಕೇಂದ್ರ ಶಿಕ್ಷಣ ಇಲಾಖೆಯ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಸದಸ್ಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನವದೆಹಲಿ, ಆ. 26 – ನೀಟ್ ಹಾಗೂ ಜೆಇಇ ಪರೀಕ್ಷೆಗಳನ್ನು ಮತ್ತಷ್ಟು ವಿಳಂಬ ಮಾಡುವುದರಿಂದ ಶೈಕ್ಷಣಿಕ ವರ್ಷಕ್ಕಷ್ಟೇ ಅಲ್ಲದೇ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಗಂಭೀರ ಪರಿಣಾಮಗಳಾಗುತ್ತವೆ ಎಂದು ಐಐಟಿ ದೆಹಲಿ ನಿರ್ದೇಶಕ ವಿ. ರಾಮಗೋಪಾಲ್ ರಾವ್ ತಿಳಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಎರಡು ಮಹತ್ವದ ಪರೀಕ್ಷೆಗಳನ್ನು ಮುಂದೂಡಬೇಕು ಎಂಬ ಒತ್ತಾಯಗಳ ನಡುವೆ ಅವರು ಈ ಹೇಳಿಕೆ ನೀಡಿದ್ದಾರೆ.

ಈ ಪರೀಕ್ಷೆಗಳನ್ನು ಮುಂದೂಡುವುದ ರಿಂದ ಐಐಟಿ ಶೈಕ್ಷಣಿಕ ವರ್ಷದ ಮೇಲೆ ಹಾಗೂ ಅಭ್ಯರ್ಥಿಗಳ ಮೇಲೆ ಗಂಭೀರ ಪರಿಣಾಮವಾಗುತ್ತದೆ. ಎರಡು ಬ್ಯಾಚ್‌ಗಳನ್ನು ಒಟ್ಟೊಟ್ಟಿಗೆ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಒಂದು ವರ್ಷವನ್ನೇ ಕಳೆದುಕೊಳ್ಳುತ್ತಾರೆ. ನಮ್ಮ ಶೈಕ್ಷಣಿಕ ವರ್ಷದ ಮೇಲೆ ಈಗಾಗಲೇ ಸಾಕಷ್ಟು ಒತ್ತಡ ಬಿದ್ದಿದೆ ಎಂದವರು ತಿಳಿಸಿದ್ದಾರೆ.

ನಾವು ಈಗಾಗಲೇ ಆರು ತಿಂಗಳು ಕಳೆದುಕೊಂಡಿದ್ದೇವೆ. ಸೆಪ್ಟೆಂಬರ್ ತಿಂಗಳಲ್ಲಿ ಪರೀಕ್ಷೆ ನಡೆಸಿದರೆ, ಕನಿಷ್ಠ ಪಕ್ಷ ಐಐಟಿಗಳು ಆನ್‌ಲೈನ್ ಮೂಲಕ ಪಾಠ ಮಾಡಲು ಸಾಧ್ಯವಾಗಲಿದೆ. ಪರೀಕ್ಷಾ ವಿಧಾನ ಇಲ್ಲವೇ ಪ್ರವೇಶ ಪ್ರಕ್ರಿಯೆಯನ್ನು ಈ ಹಂತದಲ್ಲಿ ಬದಲಿಸುವುದರಿಂದ ಎಲ್ಲರಿಗೂ ಅನ್ಯಾಯ ವಾಗುತ್ತದೆ. ವಿಶೇಷವಾಗಿ ಹಲವಾರು ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದವರು ಹೇಳಿದ್ದಾರೆ.

ಕೊರೊನಾ ವೈರಸ್ ಸದ್ಯಕ್ಕೆ ನಿವಾರಣೆಯಾಗುವುದಿಲ್ಲ. ಕನಿಷ್ಠ ಒಂದು ವರ್ಷವಾದರೂ ಅದು ಇರಲಿದೆ. ಹೀಗಾಗಿ ನಾವು ಇಡೀ ವರ್ಷ ಲಾಕ್‌ಡೌನ್ ಸ್ಥಿತಿಯಲ್ಲಿ ಇರಲಿಕ್ಕಾಗದು. ವಿದ್ಯಾರ್ಥಿಗಳನ್ನು ಸಂಸ್ಥೆಗಳನ್ನು ನಂಬಬೇಕು ಹಾಗೂ ಕಠಿಣ ಕೊರೊನಾ ಮಾರ್ಗಸೂಚಿಗಳ ಅನ್ವಯ ಪ್ರವೇಶ ಪರೀಕ್ಷೆಯಲ್ಲಿ ಭಾಗಿಯಾಗಬೇಕು ಎಂದವರು ಕರೆ ನೀಡಿದ್ದಾರೆ.

ಪರೀಕ್ಷೆಯ ಬಗ್ಗೆ ಗಂಭೀರವಾಗಿರುವ ವಿದ್ಯಾರ್ಥಿಗಳ ಬಗ್ಗೆ ನನಗೆ ನೋವಾಗುತ್ತಿದೆ. ಅವರು ಕೊರೊನಾ ಒತ್ತಡ ಸಾಲದು ಎಂಬಂತೆ ಪರೀಕ್ಷೆ ಕುರಿತ ಅನಿಶ್ಚಿತತೆಯಿಂದಲೂ ಬಳಲುವಂತಾಗಿದೆ. ಈ ಬಗ್ಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮಗೆ ಪತ್ರ ಬರೆಯುತ್ತಿದ್ದಾರೆ ಎಂದೂ ರಾವ್ ಹೇಳಿದ್ದಾರೆ.

ಜೆಇಇ (ಮೇನ್) ಪರೀಕ್ಷೆಯನ್ನು ಈಗ ವರ್ಷದಲ್ಲಿ ಹಲವು ಬಾರಿ ಕೈಗೊಳ್ಳಲಾಗುತ್ತದೆ. ಯಾರಾದರೂ ವಿದ್ಯಾರ್ಥಿ ಈ ಸಮಯದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಹೋದರೆ, ಅವರು ಆರು ತಿಂಗಳ ನಂತರ ಮತ್ತೆ ಪರೀಕ್ಷೆಗೆ ಬರಬಹುದಾಗಿದೆ. ಹೀಗಾಗಿ ಕಳವಳಕ್ಕೆ ಯಾವುದೇ ಕಾರಣಗಳಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಉತ್ತಮ ರೀತಿಯಲ್ಲಿ ಸಿದ್ಧವಾಗಬೇಕು ಎಂದವರು ಹೇಳಿದ್ದಾರೆ.

error: Content is protected !!