ಅ.1ರಿಂದ ಪದವಿ ಕಾಲೇಜು ಆರಂಭ

ಸೆ.1ರಿಂದ ಆನ್‌ಲೈನ್ ಶಿಕ್ಷಣ ಪ್ರಾರಂಭ : ಡಿಸಿಎಂ

ಬೆಂಗಳೂರು, ಆ. 26 – ಅಕ್ಟೋಬರ್ 1 ರಿಂದಲೇ ಪದವಿ ಕಾಲೇಜುಗಳು ಪ್ರಾರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಇಂದಿಲ್ಲಿ ಪ್ರಕಟಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 1 ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್‍ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು.

ಅಕ್ಟೋಬರ್ 1 ರಿಂದ ನೇರ ತರಗತಿಗಳು ಶುರುವಾಗಲಿವೆ, ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಕೇಂದ್ರದಿಂದ ಮಾರ್ಗಸೂಚಿ ಬರಬೇಕಿದೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ ಎಂದರು.

ಸರ್ಕಾರವು ಮುಂದಿನ ತಿಂಗಳಿನಿಂದ ಆನ್‍ಲೈನ್ ಮೂಲಕವೇ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಶೈಕ್ಷಣಿಕ ವರ್ಷದ ಆರಂಭದ ಜತೆಯಲ್ಲಿಯೇ ಅಂತಿಮ ವರ್ಷದಲ್ಲಿರುವ ಎಲ್ಲ ಪದವಿ, ಡಿಪ್ಲೋಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ಬ್ಯಾಕ್ ಲಾಗ್ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಡಿಸಿಎಂ ಹೇಳಿದರು.

error: Content is protected !!