ಹರಿಹರ : ಪೂರ್ವಭಾವಿ ಸಭೆಯಲ್ಲಿ ಪೊಲೀಸ್ ವೃತ್ತಾಧಿಕಾರಿ ಎಸ್. ಶಿವಪ್ರಸಾದ್
ಹರಿಹರ, ಆ.17-ಇದೇ ದಿನಾಂಕ 22 ರಂದು ನಡೆಯಲಿರುವ ಗಣೇಶೋತ್ಸವವನ್ನು ಸರಳ ಮತ್ತು ಭಕ್ತಿ ಪೂರ್ವಕವಾಗಿ ಬಡಾವಣೆಯ ದೇವಸ್ಥಾನದ ಆವರಣದಲ್ಲಿ ಮತ್ತು ಮನೆಗಳಲ್ಲಿ ಆಚರಣೆ ಮಾಡುವುದರ ಮೂಲಕ ಕಾನೂನು ಪಾಲನೆ ಮಾಡಬೇಕು ಎಂದು ಪೊಲೀಸ್ ವೃತ್ತಾಧಿಕಾರಿ ಎಸ್. ಶಿವಪ್ರಸಾದ್ ಹೇಳಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶೋತ್ಸವ ಆಚರಣೆ ನಿಮಿತ್ತ್ಯ ಇಂದು ಏರ್ಪಾಡಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಗಣೇಶೋತ್ಸವ ಆಚರಣೆಗೆ ಸರ್ಕಾರದ ಮಾರ್ಗಸೂಚಿಯನ್ವಯ ಗಣೇಶೋತ್ಸವ ಆಚರಣೆ ಮಾಡಬೇಕು. ಸಾರ್ವಜನಿಕವಾಗಿ ಪಟಾಕಿ ಸಿಡಿಸುವುದು, ಬಣ್ಣ ಎರಚುವುದು, ಡಿಜೆ ಸೌಂಡ್ ಸಿಸ್ಟಮ್, ಆರ್ಕೆಸ್ಟ್ರಾ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದವರು ತಿಳಿಸಿದರು.
ಗಣೇಶೋತ್ಸವ ಆಚರಣೆ ಮಾಡುತ್ತೇವೆ ಎಂದು ಪೊಲೀಸ್, ನಗರಸಭೆ, ಕೆ.ಇ.ಬಿ ಇನ್ನಿತರೆ ಯಾವುದೇ ಇಲಾಖೆಯ ವತಿಯಿಂದ ಅನುಮತಿ ಪಡೆಯುವ ಅವಕಾಶ ಇರುವುದಿಲ್ಲ. ಕಾನೂನು ಉಲ್ಲಂಘನೆ ಮಾಡಿ ಆಚರಣೆಗೆ ಮುಂದಾದರೆ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ಮಾತನಾಡಿ, ದೊಡ್ಡ ಮೂರ್ತಿ ಪೂಜಿಸಿದರೂ, ಚಿಕ್ಕ ಮೂರ್ತಿಯನ್ನು ಪೂಜಿಸಿದರೂ ತೋರಿಸುವ ಭಕ್ತಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಮನೆಯಲ್ಲಿ ಮತ್ತು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕ ದರ್ಶನಕ್ಕೆ ಆಗಮಿಸುವ ಭಕ್ತರು ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಜೊತೆಗೆ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿಕೊಂಡು, ದೇವರ ದರ್ಶನವನ್ನು ಮಾಡಬೇಕು ಎಂದರು.
ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮೀ ಮಾತನಾಡಿ, ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವುದಕ್ಕೆ ನಗರಸಭೆಯಿಂದ ಒಂದೆಡೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಎಸ್. ಶೈಲಾಶ್ರೀ, ಸೈಫೂದ್ದೀನ್ ಸಾಬ್, ನಗರಸಭೆ ಸದಸ್ಯರಾದ ಎಸ್.ಎಂ. ವಸಂತ್, ದಿನೇಶ್ ಬಾಬು, ಮುಖಂಡರಾದ ಹನುಮಂತಪ್ಪ, ರಮೇಶ್, ಕೇಶವ, ಚಂದನ್ ಮೂರ್ಕಲ್, ಚೇತನ ತಿಪ್ಪಶೆಟ್ಟರ್, ರಾಜು ರೋಖಡೆ, ಪ್ರಶಾಂತ್, ಬೀರಪ್ಪ ನಾಗೇನಹಳ್ಳಿ, ಪೊಲೀಸ್ ಸಿಬ್ಬಂದಿಗಳಾದ ನಾಗರಾಜ್ ಶಿಂಗ್ರಿಹಳ್ಳಿ, ಶಿವಕುಮಾರ್, ನಾಯ್ಕ್ ಇನ್ನಿತರರಿದ್ದರು. ಹಾಜರಿದ್ದರು.