ಜಗಳೂರು, ಆ. 17- ಕೊರೋನ ನಿಯಂತ್ರಣ ನೆಪದಲ್ಲಿ ಅಧಿಕಾರಿಗಳು ಸೋಮಾರಿತನ ಮಾಡದೆ ಕಚೇರಿಗಳಲ್ಲಿದ್ದು, ರೈತರಿಗೆ, ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಶಾಸಕರು ಹಾಗೂ ನೂತನ ಎಸ್ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ನಾನು ಪ್ರತಿ ಹಳ್ಳಿಗಳಿಗೂ ತಿರುಗಾಡಿ ಕೆಲಸ ಮಾಡುತ್ತಿದ್ದೇನೆ. ನೀವು ಸಹ ಧೈರ್ಯವಾಗಿ ಕೆಲಸ ನಿರ್ವಹಿಸಬೇಕು. ಮುಂದಿನ ತಿಂಗಳು ಕರೋನಾ ಪ್ರಕರಣಗಳು ಹೆಚ್ಚಾಗುವುದಾಗಿ ತಜ್ಞರು ಹೇಳುತ್ತಿದ್ದಾರೆ, ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಜನರಲ್ಲಿ ಜಾಗೃತಿ ಉಂಟು ಮಾಡಬೇಕು ಎಂದು ಶಾಸಕರು ಸಲಹೆ ನೀಡಿದರು.
ಕೆಲವು ಇಲಾಖೆ ಕಾಮಗಾರಿಗಳಿಗೆ ಕರೋನ ಹಿನ್ನೆಲೆಯಲ್ಲಿ ಹಣಕಾಸಿನ ತೊಂದರೆ ಇದ್ದು, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇನೆ. ರೈತರೂ ಸಹ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅನಾವಶ್ಯಕ ದುಂದು ವೆಚ್ಚಗಳನ್ನು ಕಡಿಮೆಮಾಡಬೇಕಾಗಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು ಪ್ರಗತಿ ವರದಿ ನೀಡಿ, ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಬೆಳೆ ಉತ್ತಮವಗಾಿವೆ. ಮೆಕ್ಕೆಜೋಳ ಸೂಲಂಗಿ ಹಂತದಲ್ಲಿದೆ. ಯೂರಿಯಾ ಗೊಬ್ಬರ ಬಂದಿದೆ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ರೈತರಿಗೆ ಯೂರಿಯಾ ಗೊಬ್ಬರದ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ರೈತರು ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು. ಅಗತ್ಯ ಔಷಧ ದಾಸ್ತಾನು ಮಾಡಬೇಕು. ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ನೀರು ನೈರ್ಮಲ್ಯ ಇಲಾಖೆಯ ಎಇಇ ಹೇಮಜಿ ನಾಯ್ಕ್, ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿದ್ದು ಯಾವುದೇ ಸೆಕ್ಷನ್ ಆಫೀಸರ್ ಗಳು ಇಲ್ಲ. ನಾನೊಬ್ಬನೇ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಮನೆಮನೆ ಗಂಗೆ ಯೋಜನೆಯಡಿ ತಾಲ್ಲೂಕಿನ ಹಳ್ಳಿಗಳು ಆಯ್ಕೆಯಾಗಿವೆ. ವಿವಿಧ ಲೆಕ್ಕ ಶೀರ್ಷಿಕೆಯಲ್ಲಿ ಕುಡಿಯುವ ನೀರಿನ 144 ಕಾಮಗಾರಿ ಹೇಳಿದ್ದು 90 ಕಾಮಗಾರಿಗಳು ಪೂರ್ಣಗೊಂಡಿವೆ 10 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಲಾಕ್ ಡೌನ್ ಸಂದರ್ಭದಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ. 1926 ಎಕರೆ ವಿಸ್ತೀರ್ಣದಲ್ಲಿ 2889 ಜನ ರೈತರು ನಷ್ಟ ಅನುಭವಿಸಿದ್ದು ಪರಿಹಾರ ವಿತರಣೆಗೆ 2. 88 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಜಿ.ಪಂ. ಸದಸ್ಯ ಎಸ್.ಕೆ. ಮಂಜುನಾಥ್, ಶ್ರೀಮತಿ ಸವಿತಾ ಕಲ್ಲೇಶಪ್ಪ, ಶಾಂತಕುಮಾರಿ, ಉಮಾ ವೆಂಕಟೇಶ್ ಮತ್ತು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲನಾಯಕ, ತಹಶೀಲ್ದಾರ್ ಡಾ. ನಾಗವೇಣಿ, ಸರ್ಕಲ್ ಇನ್ ಸ್ಪೆಕ್ಟರ್ ದುರುಗಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್, ಲೋಕೋಪಯೋಗಿ ಇಲಾಖೆಯ ಎಇಇ, ರುದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶ್, ಬಿಸಿಎಂ ಇಲಾಖೆಯ ಅಧಿಕಾರಿ ವೆಂಕಟೇಶಮೂರ್ತಿ, ಬೆಸ್ಕಾಂ ಎಇಇ ಪ್ರವೀಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.