ಹರಪನಹಳ್ಳಿ, ಡಿ.27- ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಬ್ಯಾಲೆಟ್ ಪೇಪರ್ ಗೊಂದಲದಿಂದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಮರು ಮತದಾನಕ್ಕೆ ಒತ್ತಾಯಿಸಿದ ಘಟನೆ ಭಾನುವಾರ ಜರುಗಿತು.
ಮತ್ತಿಹಳ್ಳಿ ಗ್ರಾಮದ ವಾರ್ಡ್ ಸಂಖ್ಯೆ 3 ರ ಮತಗಟ್ಟೆಯ ಅಭ್ಯರ್ಥಿಗಳ ಹೆಸರುಳ್ಳ ಬ್ಯಾಲೆಟ್ ಪೇಪರ್ ವಾರ್ಡ್ ಸಂಖ್ಯೆ 4ರಲ್ಲಿ ಇದ್ದು, ವಾರ್ಡ್ 4 ಹಾಗೂ 4ಎ ದರ ಬ್ಯಾಲೆಟ್ ಪೇಪರ್ ವಾರ್ಡ್ 3 ಮತಗಟ್ಟೆಯಲ್ಲಿ ಇದ್ದುದ ರಿಂದ ನಮ್ಮ ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ನಾವು ಮತ ಹಾಕಲು ಆಗುತ್ತಾ ಇಲ್ಲ ಎಂದು ಅಸಮಾದಾನ ವ್ಯಕ್ತ ಪಡಿಸಿದರು.
ಮತಗಟ್ಟೆ ಸಂಖ್ಯೆ 03 ರಲ್ಲಿ 10 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಮತಗಟ್ಟೆ ಸಂಖ್ಯೆ 04 ರಲ್ಲಿ 7 ಜನ ಅಭ್ಯರ್ಥಿಗಳು ಕಣದಲ್ಲಿರು ವುದು ನಿಜ ಸಂಗತಿಯಾಗಿದೆ. ಆದರೆ ಮತ ದಾನಕ್ಕೆ ಸಿದ್ದವಾಗಿರುವ ಚುನಾವಣೆ ಅಧಿಕಾರಿ ಗಳ ಪ್ರಕಾರ ಈ ಎರಡೂ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅದಲು ಬದಲಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಇದರಿಂದ ಒಬ್ಬರೂ ಮತಗಟ್ಟೆಗೆ ಬರದೇ ಮತದಾನದಿಂದ ದೂರ ಉಳಿದರು. ವಿಷಯ ತಿಳಿದ ಉಪವಿಭಾಗಾಧಿಕಾರಿ ವಿ.ಕೆ.ಪ್ರಕನ್ನ ಕುಮಾರ ಹಾಗೂ ತಹಶೀಲ್ದಾರ್ ಎಲ್.ಎಂ. ನಂದೀಶ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ನಂತರ ಅಭ್ಯರ್ಥಿಗಳು ಹಾಗೂ ಗ್ರಾಮದ ಮುಖಂಡರ ಜೊತೆ ಮಾತುಕತೆ ನಡೆಸಿ, ನಮ್ಮ ಕಡೆಯಿಂದ ಯಾವುದೇ ಲೋಪದೋಷವಾಗಿಲ್ಲ, ನೀವು ನಾಮಪತ್ರದಲ್ಲಿ ಹೇಗೆ ನಮೂದಿಸಿದ್ದೀರೋ ಆ ರೀತಿ ನಾವು ಬ್ಯಾಲೆಟ್ ಪೇಪರ್ ಮುದ್ರಿಸಿದ್ದೇವೆ. ಮತದಾನದಲ್ಲಿ ಭಾಗವಹಿಸಿ ಎಂದು ಮನವೊಲಿಕೆಗೆ ಪ್ರಯತ್ನ ಪಟ್ಟರೂ ಫಲ ನೀಡಲಿಲ್ಲ.
ಅಂತಿಮವಾಗಿ ಬಳ್ಳಾರಿಯಿಂದ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಹಾಗೂ ಎಸ್ಪಿ ಸೈದುಲ್ಲಾ ಅಡಾವತ್ ಆಗಮಿಸಿ, ನಮ್ಮ ಚುನಾವಣಾ ಅಧಿಕಾರಿಗಳಿಂದ ಲೋಪವಾಗಿಲ್ಲ, ಮತದಾನದಲ್ಲಿ ಪಾಲ್ಗೊಳ್ಳಿ ಎಂಬ ಮನವೊಲಿಕೆ ಸಹ ವಿಫಲಗೊಂಡಿತು.
ಮತಗಟ್ಟೆಯ ಅಧಿಕಾರಿಗಳು ಯಾವೊಬ್ಬ ಮತದಾರರು ಮತದಾನಕ್ಕೆ ಬರದಿದ್ದುದರಿಂದ ಸುಮ್ಮನೆ ಕುಳಿತು ಕೊಳ್ಳಬೇಕಾಯಿತು.
ಬೆಳಿಗ್ಗೆ 11 ಗಂಟೆ ಹೊತ್ತಿಗೆ ಗ್ರಾಮಸ್ಥರು ಗ್ರಾಮದ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಈ ಸಮಸ್ಯೆ ತಲೆದೂರಲು ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಮೈದೂರು ರಾಮಣ್ಣ, ಲಿಂಗನಗೌಡ, ಆರ್.ಕೊಟ್ರಗೌಡರು, ಪಿ.ಮಂಜುನಾಥ್, ಅಭ್ಯರ್ಥಿ ಎಂ.ಕೊಟ್ರೇಶ್ ಮತ್ತಿತರರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಒಟ್ಟಿನಲ್ಲಿ ಎರಡೂ ಮತದಾನ ಕೇಂದ್ರಗಳ 7 ಸದಸ್ಯ ಸ್ಥಾನಗಳಿಂದ 17 ಜನರು ಸ್ಪರ್ಧಿಸಿದ್ದರು. ಮತದಾನ ಬಹಿಷ್ಕಾರದಿಂದ 7 ಸದಸ್ಯ ಸ್ಥಾನಗಳು ಖಾಲಿ ಉಳಿದಂತಾಗಿವೆ.
ಈ ವೇಳೆ ಉಪವಿಭಾಗಾಧಿಕಾರಿ, ವಿ.ಕೆ.ಪ್ರಸನ್ನಕುಮಾರ್ ಮಾತನಾಡಿ, ನಮ್ಮ ಚುನಾವಣಾಧಿಕಾರಿಗಳಿಂದ ಯಾವುದೇ ಲೋಪದೋಷವಾಗಿಲ್ಲ, ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪ್ರಕಾರ ಸಿದ್ದತೆ ಕೈಗೊಂಡಿದ್ದೇವೆ. ಆದರೂ ಯಾವೊಬ್ಬ ಮತದಾರರು ಮತದಾನ ಮಾಡಿಲ್ಲ. ಈ ಕುರಿತು ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸುತ್ತೇವೆ. ಅವರು ಮುಂದಿನ ಕ್ರಮ ಜರುಗಿಸುತ್ತಾರೆ ಎಂದರು.
ಉಪನ್ಯಾಸಕ ಪಿ.ಮಂಜುನಾಥ್ ಮಾತನಾಡಿ, ನಾಮಪತ್ರಗಳಲ್ಲಿ ಲೋಪದೋಷಗಳಿದ್ದರೆ ಪರಿಶೀಲನೆ ಸಂದರ್ಭದಲ್ಲಿ ಸರಿಪಡಿಸಬೇಕಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆ ಉದ್ಭವವಾಗಿದೆ. ಈ ಸಮಸ್ಯೆ ಸರಿಪಡಿಸಿ ಮರು ಮತದಾನ ನಡೆಸಬೇಕು ಎಂದರು.