ಎಂ.ಎಸ್.ಪಿ. ಭತ್ತದ ಹಲ್ಲಿಂಗ್‌ನ ಹಳೆಯ ಬಾಕಿ ಶೀಘ್ರ ಪಾವತಿಗೆ ಕ್ರಮ

ದಾವಣಗೆರೆ,ಡಿ.25- ಎಂ.ಎಸ್.ಪಿ. ಭತ್ತದ ಹಲ್ಲಿಂಗ್ ನ ಹಳೆಯ ಬಾಕಿಯನ್ನು ಶೀಘ್ರ ಪಾವತಿ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್ ಅವರು ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕರಿಗೆ ಭರವಸೆ ನೀಡಿದ್ದಾರೆ.

ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಇಂದು ನಗರಕ್ಕಾಗಮಿಸಿದ್ದ ಅವರು, ತಮ್ಮನ್ನು ಭೇಟಿ ಮಾಡಿದ ಅಕ್ಕಿ ಗಿರಣಿ ಮಾಲೀಕರು ಸಲ್ಲಿಸಿದ ಲಿಖಿತ ಮನವಿ ಪತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಸುಮಾರು ತಿಂಗಳುಗಳಿಂದ ಎಂ.ಎಸ್.ಪಿ. ಭತ್ತದ ಹಲ್ಲಿಂಗ್ ನ ಬಾಕಿ  ಹಣ  ಪಾವತಿಯಾಗದೇ ಉಳಿದಿದ್ದು, ಈ ಬಾಕಿ ಹಣವನ್ನು ಪಾವತಿ ಮಾಡುವಂತೆ ಅಕ್ಕಿ ಗಿರಣಿ ಮಾಲೀಕರು ತಾವು ಸಲ್ಲಿಸಿರುವ ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ. 2020-21ನೇ ಸಾಲಿನ, ರೈತರಿಂದ ಭತ್ತದ ಖರೀದಿ ಮತ್ತು ಮಿಲ್ಲಿಂಗ್ ಅನ್ನು ಶೀಘ್ರ ಪ್ರಾರಂಭಿಸುವಂತೆಯೂ ಅನಿಲ್ ಕುಮಾರ್ ಅವರನ್ನು ಅಕ್ಕಿ ಗಿರಣಿ ಮಾಲೀಕರು ಮನವಿ ಮಾಡಿಕೊಂಡರು.

ಅತೀ ಹೆಚ್ಚು ರೈತರಿಂದ ಎಂ.ಎಸ್.ಪಿ. ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಲು ಕೇಂದ್ರ ಸರ್ಕಾರ ತಿಳಿಸಿದ್ದು, ಈ ಬಗ್ಗೆ ಒತ್ತು ನೀಡಬೇಕು ಎಂದು ಅಕ್ಕಿ ಗಿರಣಿ ಮಾಲೀಕರಿಗೆ ಕರೆ ನೀಡಿದ ಅನಿಲ್ ಕುಮಾರ್, ರೈತರ ಅನುಕೂಲಕ್ಕಾಗಿ 10 ಲಕ್ಷ ಟನ್ ಭತ್ತವನ್ನು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಬೇಕಾಗುವ ಪಡಿತರ ಅಕ್ಕಿಯನ್ನು ಎಂ.ಎಸ್.ಪಿ. ಭತ್ತದ ಮೂಲಕ ರೈತರಿಂದ ಖರೀದಿಸಿ ಭತ್ತವನ್ನು ಮಿಲ್ಲುಗಳಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ, ರಾಜ್ಯ ರೈಸ್ ಮಿಲ್ ಮಾಲೀಕರ ಸಂಘದ ಮುಖಂಡ ಕೋಗುಂಡಿ ಬಕ್ಕೇಶಪ್ಪ, ರೈಸ್ ಮಿಲ್ ಮಾಲೀಕರುಗಳಾದ ಚಂದ್ರಪ್ಪ ಹೊನ್ನಾಳಿ, ಹೆಚ್.ಎನ್. ಉಮಾಪತಿ, ಅನಿಲ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!