ದೂಡಾ ಆಸ್ತಿ ರಕ್ಷಿಸುವ ಕಾರ್ಯಕ್ಕೆ ಕೊನೆ ಇಲ್ಲ

ದೂಡಾ ಆಸ್ತಿ ರಕ್ಷಿಸುವ ಕಾರ್ಯಕ್ಕೆ ಕೊನೆ ಇಲ್ಲ - Janathavaniಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಪ್ರಾಂಗಣದಲ್ಲಿ ಹಾದು ಹೋಗಿರುವ 60 ಅಡಿಯ ಎರಡೂ ರಸ್ತೆಗಳ ಅತಿಕ್ರಮಣದ ತನಿಖೆಗೆ ಸೂಚನೆ. 

– ರಾಜನಹಳ್ಳಿ ಶಿವಕುಮಾರ್

ದಾವಣಗೆರೆ, ಡಿ.9- ನಗರದ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಪ್ರಾಂಗಣದಲ್ಲಿ ಹಾದು ಹೋಗಿರುವ 60 ಅಡಿಯ ಎರಡು ರಸ್ತೆಗಳು ನಗರಾಭಿವೃದ್ಧಿ ಯೋಜನೆಯ (ಸಿಡಿಪಿ) ರಸ್ತೆಗಳಾಗಿದ್ದು, ಅವುಗಳನ್ನು ಅತಿಕ್ರಮಿಸಿರುವುದಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ನೇರವಾಗಿ ಆರೋಪಿಸಿದ್ದಾರೆ. 

ಈ ಎರಡೂ ರಸ್ತೆಗಳ ಜಾಗವೇ ಸುಮಾರು 2 ಲಕ್ಷ ಅಡಿ ಆಗಬಹುದು. ರಸ್ತೆ ಅತಿಕ್ರಮಣದ ತನಿಖೆಗೆ ಸೂಚಿಸಿದ್ದು, ಕಾನೂನು ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಸರ್ವೇ ಮಾಡಲು ಸೂಚಿಸಿದ್ದೇನೆ. ಸಾರ್ವಜನಿಕ ರಸ್ತೆ, ಪಾರ್ಕ್ ಸರ್ಕಾರದ ಆಸ್ತಿಗಳಾಗಿದ್ದು, ಅವುಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ದೂಡಾ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ದೂಡಾ ಕಚೇರಿಗೆ ಬಂದರೆ ದಾಖಲೆ ಸಹಿತ ಎರಡು ರಸ್ತೆಗಳ ಅತಿಕ್ರಮಣದ ಬಗ್ಗೆ ಸಾಬೀತುಪಡಿಸುತ್ತೇನೆ. ಅಲ್ಲಿನ ಎರಡು ರಸ್ತೆಗಳನ್ನು ದೂಡಾ, ನಗರ ಪಾಲಿಕೆಗೆ ಮರಳಿ ಕೊಡಿಸುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು. 

ಜಿಎಂಐಟಿಯಲ್ಲಿ ಇಂತಹ ಪ್ರಕರಣ ಇರಬಹುದೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಎಂಐಟಿ ಕಾಲೇಜು ಜಾಗ ದೂಡಾದಿಂದಾಗಲೀ, ಪಾಲಿಕೆಯಿಂದಾಗಲೀ ಪಡೆದಿದ್ದಲ್ಲ. ಹಿಂದೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್  ಅವರ ಅವಧಿಯಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಅರ್ಜಿ ಸಲ್ಲಿಸಿದ್ದರಿಂದ ರಾಜ್ಯ ಸರ್ಕಾರವೇ ನೀಡಿದ್ದ ಜಾಗವಾಗಿದೆ. ಶೈಕ್ಷಣಿಕ ಉದ್ದೇಶಕ್ಕೆ ಪಡೆದ ಜಾಗವನ್ನು ಅದೇ ಉದ್ದೇಶಕ್ಕೆ ಸಂಸ್ಥೆಯವರು ಬಳಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಗೂ ಸಿಎ ಸೈಟ್ ನೀಡಲಾಗಿದೆ. ಅದನ್ನೇನೂ ನಾನು ಪ್ರಶ್ನಿಸಿಲ್ಲ ಎಂದು ಹೇಳಿದರು.

ದೂಡಾ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ದೂಡಾ ಆಸ್ತಿಯನ್ನು ರಕ್ಷಿಸುವಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಮೊದಲ ಹಂತದಲ್ಲಿ ಬಾತಿ ಕೆರೆ ಬಳಿ ಲೇಔಟ್ ಆಗಿದ್ದ ನಾಲ್ಕು ಎಕರೆ ಜಾಗ, ಕುಂದುವಾಡ ಕೆರೆ ಬಳಿ ಮಾಜಿ ಸಚಿವರ ಸಂಬಂಧಿ ಅತಿಕ್ರಮಿಸಿದ್ದ ಎರಡು ಎಕರೆ ಜಾಗ, ಜಿಎಂಐಟಿ ಬಳಿ ವರ್ತುಲ ರಸ್ತೆ ಒತ್ತುವರಿ ಮಾಡಿ ಕಟ್ಟಿದ್ದ ಶಾದಿ ಮಹಲ್ ಕಟ್ಟಡದ ಭಾಗ ತೆರವು ಮಾಡಿಸಿದ್ದೇನೆ. ಇದು ಇಲ್ಲಿಗೆ ಕೊನೆಯಾಗುವುದಿಲ್ಲ. ಪ್ರಾಧಿಕಾರ ಅಧ್ಯಕ್ಷ ಸ್ಥಾನ ಇಲ್ಲದಿದ್ದರೆ ಒಬ್ಬ ಸಾಮಾನ್ಯ ಪ್ರಜೆಯಾಗಿ ಆರ್‍ಟಿಐನಡಿ ಮಾಹಿತಿ ಪಡೆದು, ಸರ್ಕಾರಿ ಆಸ್ತಿ ಉಳಿಸುವ ಹೋರಾಟ ನಡೆಸುವೆನೆಂದರು.

ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅಧಿಕಾರದ ಅವಧಿಯಲ್ಲಿ ದಾವಣಗೆರೆಯಲ್ಲಿ ಅಭಿವೃದ್ಧಿ ಪರ್ವ ಆಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. ಹೀಗೆ ಅಭಿವೃದ್ಧಿ ಪರ್ವ ಕೈಗೊಂಡವರು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಸೋತಿದ್ದು ಏಕೆಂದು ಪ್ರಶ್ನಿಸಿದರಲ್ಲದೇ, ಉತ್ತಮ ಸಿಸಿ ರಸ್ತೆ ಮಾಡಿದ್ದಕ್ಕೆ ನನ್ನ ಯಾವುದೇ ಆಕ್ಷೇಪ ಇಲ್ಲ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿದ್ದು, ಸರ್ಕಾರಿ ಜಾಗ ಕಬಳಿಸಿದ್ದಕ್ಕೆ ವಿರೋಧವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಕಳೆದ 2017ರಲ್ಲಿ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಬಡ ಜನರಿಗೆ ನಿವೇಶನಗಳನ್ನು ನೀಡುವ ಉದ್ದೇಶದಿಂದ ಹಂಚಿಕೆ ಮಾಡಲಾಗಿತ್ತು. ಆದರೆ, ಕೆಲವು ಕೋಟ್ಯಾಧಿಪತಿಗಳು, ಸ್ಥಿತಿವಂತರಿಗೆ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದ್ದು, ಅಂತಹವರನ್ನು ಈಗ ಗುರುತು ಮಾಡಿದ್ದು, ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

ನಗರ ಪಾಲಿಕೆ ಸದಸ್ಯರಾಗಿರುವ ದೇವರಮನೆ ಶಿವಕುಮಾರ್ ಅವರ ಸಹೋದರರಾದ ದೇವರಮನೆ ಮುರುಗೇಶ್, ದೇವರಮನೆ ಶಿವರಾಜ್ ಅವರುಗಳಿಗೆ 60×40 ಅಳತೆಯ ತಲಾ ಒಂದು ನಿವೇಶನವನ್ನು ವಿತರಣೆ ಮಾಡಲಾಗಿದೆ. ಈ ಆಯ್ಕೆ ಲಾಟರಿ ಮೂಲಕ ಮಾಡಿದ್ದು, ಇದರಲ್ಲಿ ಗೋಲ್‍ಮಾಲ್ ನಡೆದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ದೇವರಮನೆ ಶಿವಕುಮಾರ್ ಅವರು ಪಡೆದಿರುವ ನಿವೇಶನಗಳನ್ನು ಗೌರವಯುತವಾಗಿ ದೂಡಾಗೆ ವಾಪಸ್ ನೀಡಲು ಮನವಿ ಮಾಡಿಕೊಳ್ಳುತ್ತೇನೆ. ಇಲ್ಲವಾದಲ್ಲಿ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದರು.

ಕಾಂಗ್ರೆಸ್ ಮುಖಂಡರು ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿಕೆ ಕೊಡುತ್ತಾರೆ. ಆದರೆ, ಅವರದ್ದೇ ಪಕ್ಷದ ಮುಖಂಡರು ಇಂತಹ ಭ್ರಷ್ಟಾಚಾರ ನಡೆಸುತ್ತಾರೆ. ವಿನಾ ಕಾರಣ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಅದಕ್ಕೆ ಅವರ ಆರೋಪಕ್ಕೆ ದಾಖಲೆಯೊಂದಿಗೆ ಭ್ರಷ್ಟಾಚಾರ ಬಿಡುಗಡೆ ಮಾಡುತ್ತಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದೂಡಾ ಸದಸ್ಯರಾದ  ರುದ್ರೇಶ್, ಸೌಭಾಗ್ಯ ಮುಕುಂದ, ರಾಜು ರೋಖಡೆ ಸೇರಿದಂತೆ ಇತರರು ಇದ್ದರು. 

ತಾತ್ಕಾಲಿಕ ಪುನರ್ ವಸತಿ ಕಲ್ಪಿಸಿಲ್ಲ: ಸರ್ ಮಿರ್ಜಾ ಇಸ್ಮಾಯಿಲ್ ನಗರದಲ್ಲಿ ಹಾದು ಹೋಗಿರುವ ವರ್ತುಲ ರಸ್ತೆಯ ಅಭಿವೃದ್ಧಿ ಸಲುವಾಗಿ ಆ ಸ್ಥಳದಲ್ಲಿ ಅನಧಿಕೃತವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ನಿವಾಸಿಗಳ ಸ್ಥಳಾಂತರಕ್ಕಾಗಿ ದೂಡಾದಿಂದ ತಾತ್ಕಾಲಿಕ ಪುನರ್ ವಸತಿ ಕಾಮಗಾರಿ ಕೈಗೊಳ್ಳಲು 1 ಕೋಟಿ 50 ಲಕ್ಷ ರೂ. ಅನುದಾನವನ್ನು ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆಗೊಳಿಸಲು ಮಾರ್ಚ್ 5, 2017ರಂದು ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಂತೆಯೇ ಅನುದಾನವನ್ನು ಅನುಮೋದನೆಯ ನಿರೀಕ್ಷಣೆ ಮೇರೆಗೆ ನಿರ್ಮಿತಿ ಕೇಂದ್ರಕ್ಕೆ ಅಕ್ಟೋಬರ್ 31, 2017ರಂದು 1 ಕೋಟಿ 25 ಲಕ್ಷ ರೂ. ಪ್ರಾಧಿಕಾರದಿಂದ ಬಿಡುಗಡೆಯಾಗಿದ್ದರೂ, ಆ ಜಾಗದಲ್ಲಿ ಯಾವುದೇ ತಾತ್ಕಾಲಿಕ ಶೆಡ್ ನಿರ್ಮಾಣವಾಗಿಲ್ಲ ಎಂದು ಶಿವಕುಮಾರ್ ಆಪಾದಿಸಿದರು.

ಕಾಮಗಾರಿ ಪೂರ್ಣಗೊಳಿಸಿ ನಗರ ಪಾಲಿಕೆಗೆ ಹಸ್ತಾಂತರಿಸಿ, ಆ ಬಗ್ಗೆ ಪ್ರಾಧಿಕಾರಕ್ಕೆ ವರದಿ ನೀಡುವಂತೆ ಅನೇಕ ಬಾರಿ  ಸೂಚಿಸಿದ್ದರೂ ಸಹ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಸದರಿ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲದಿರುವ ಬಗ್ಗೆ ನವೆಂಬರ್ 17,2020ರಂದು ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿದ್ದು, ಪ್ರಾಧಿಕಾರ ಮತ್ತು ಪಾಲಿಕೆ ಅಭಿಯಂತರರು ಜಂಟಿಯಾಗಿ ಸ್ಥಳ ಪರಿಶೀಲಿಸಿ, ವರದಿ ನೀಡಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದರು.

ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ದು ತಾತ್ಕಾಲಿಕ ಪುನರ್ ವಸತಿ ಕಾಮಗಾರಿ ನಡೆಯದ ಬಗ್ಗೆ ಸಾಕ್ಷಿಯಾಗಿ ಕಣ್ಣೆದುರು ಸಾಬೀತುಪಡಿಸಿದ್ದಾರೆ.

error: Content is protected !!