ಪಂಚಮಸಾಲಿ ಅಲ್ಲದೇ ಎಲ್ಲಾ ಒಳಪಂಗಡಗಳ ಮೀಸಲಾತಿಗೆ ಪಾದಯಾತ್ರೆ
ದಾವಣಗೆರೆ, ಡಿ. 8 – ಲಿಂಗಾಯತ ಪಂಚಮಸಾಲಿಗಳಷ್ಟೇ ಅಲ್ಲದೇ ಲಿಂಗಾಯತರ ಎಲ್ಲ ಒಳಪಂಗಡಗಳಿಗೆ ರಾಜ್ಯದಲ್ಲಿ 2ಎ ಮೀಸಲಾತಿ ಕಲ್ಪಿಸಬೇಕು ಮತ್ತು ಕೇಂದ್ರದಲ್ಲಿ ಒ.ಬಿ.ಸಿ. ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೂಡಲಸಂ ಗಮದಲ್ಲಿ ತಾವು ಉಪವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೂರವಾಣಿ ಮೂಲಕ ಮೀಸಲಾತಿಯ ಭರವಸೆ ನೀಡಿದ್ದರು. ಯಡಿಯೂರಪ್ಪ ಅವರು ಈಗ ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಲಿಂಗಾಯತರ 32 ಒಳಪಂಗಡಗಳಿಗೆ 2ಎ ಮೀಸಲಾತಿ ಶಿಫಾರಸ್ಸು ಆಗಿದ್ದರೂ ಬಾಕಿ ಉಳಿದಿದೆ. ಇನ್ನೂ 72 ಒಳಪಂಗಡಗಳಿಗೆ ಮೀಸಲಾತಿ ಕಲ್ಪಿಸಬೇಕಿದೆ. ಈ ಎಲ್ಲ ಒಳಪಂಗಡಗಳಿಗೆ ರಾಜ್ಯದಲ್ಲಿ 2ಎ ಹಾಗೂ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಕಲ್ಪಿಸಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ.
ಬರುವ ಡಿ.23ರಿಂದ ಪಾದಯಾತ್ರೆ ಆರಂಭಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ದಾವಣಗೆರೆಯಲ್ಲಿಂದು ಪೂರ್ವಭಾವಿ ಸಭೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ಈ ಪಾದಯಾತ್ರೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ. ಪಾದಯಾತ್ರೆಯ ಮೂಲಕ ಬೆಂಗಳೂರಿಗೆ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಆಗಲೂ ಬೇಡಿಕೆ ಈಡೇರಿಸದೇ ಇದ್ದರೆ ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಲಿಂಗಾಯತ ಮೀಸಲಾತಿಗೆ ಬಿಜೆಪಿ ಹೈಕಮಾಂಡ್ ಅಡ್ಡಗಾಲು
ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಿದರೆ ಅವರು ಹೀರೋ ಆಗುತ್ತಾರೆ ಎಂದು ಬಿಜೆಪಿ ವರಿಷ್ಠರು ಮೀಸಲಾತಿಗೆ ಅಡ್ಡ ಹಾಕಿದ್ದಾರೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ.
ಸಂಪುಟದಲ್ಲಿ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾಪ ಬಂದರೂ ಜಾರಿಯಾಗದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒ.ಬಿ.ಸಿ. ಮಾಡಿದರೆ ಯಡಿಯೂರಪ್ಪ ಲಿಂಗಾಯತರ ನಾಯಕರಾಗುತ್ತಾರೆ ಎಂದೇ ಹೈಕಮಾಂಡ್ ತಡೆದಿದೆ ಎಂದಿದ್ದಾರೆ.
ಸಮಾಜ ಒಡೆಯಲು ಯತ್ನಿಸುತ್ತಿರುವವರಿಗೆ ಪಾಠ
ಪಂಚಮಸಾಲಿ ಸಮಾಜದ ಎರಡು ಪೀಠಗಳಿವೆ ಎಂದು ಕೆಲವರು ಸಮಾಜವನ್ನು ಒಡೆಯುವ ಯತ್ನ ನಡೆಸಿದ್ದಾರೆ. ಆದರೆ, ಹತ್ತು ಪೀಠಗಳಾದರೂ ಪಂಚಮಸಾಲಿಗಳು ಒಂದೇ. ಸಮಾಜ ಒಡೆಯಲು ಯತ್ನಿಸುತ್ತಿರುವವರಿಗೆ ಪಾಠ ಕಲಿಸುತ್ತೇವೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಪಂಚಮಸಾಲಿಗಳ ಸಂಖ್ಯೆ ಹೆಚ್ಚಾಗಿದೆ. ಆದರೂ, ಇಲ್ಲಿ ಪಂಚಮಸಾಲಿ ಶಾಸಕರಾಗಲೀ, ಸಂಸದರಾಗಲೀ ಇಲ್ಲ. ಬ್ರಿಟಿಷರಂತೆ ಒಡೆದು ಆಳುವ ನೀತಿಯೇ ಇದಕ್ಕೆ ಕಾರಣ ಎಂದೂ ಅವರು ಆರೋಪಿಸಿದರು.
ಸಂವಿಧಾನದ ಅನ್ವಯ ಮುಖ್ಯಮಂತ್ರಿ ತಾವೇ 2ಎ ನೀಡುವ ಕುರಿತು ನಿರ್ಧರಿಸಬಹುದು. ಮುಖ್ಯಮಂತ್ರಿ ಮನಸ್ಸು ಮಾಡಿದರೆ ಇಂದು ಸಂಜೆಯೇ ಮೀಸಲಾತಿ ಕಲ್ಪಿಸಬಹುದು. ಯಡಿಯೂರಪ್ಪ ಮಾತಿಗೆ ತಪ್ಪುವುದಿಲ್ಲ ಎಂಬ ಹೆಸರು ಪಡೆದಿದ್ದಾರೆ. ಈ ಬಾರಿಯೂ ಅದರಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಾವು ಸಮಾಜದ ಮುಖಂಡರಿಗಾಗಿ ಯಾವುದೇ ಸಚಿವ ಸ್ಥಾನ – ನಿಗಮಗಳನ್ನು ಕೇಳುತ್ತಿಲ್ಲ. ನಮ್ಮ ಸಮಾಜದ ಬಡ ಮಕ್ಕಳಿಗಾಗಿ ಮೀಸಲಾತಿ ಕೇಳುತ್ತಿದ್ದೇವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೀಸಲಾತಿ ಬೇಕಿದೆ. ಯಡಿಯೂರಪ್ಪನವರಿಗೆ ದೊರೆತ ಬೆಂಬಲದಲ್ಲಿ ಶೇ.70ರಷ್ಟು ಪಂಚಮಸಾಲಿ ಸಮಾಜದ್ದು ಎಂದೂ ಶ್ರೀಗಳು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಪಾದಯಾತ್ರೆಯಲ್ಲಿ ಕನಿಷ್ಠ 50 ಸಾವಿರ ಜನರು ಸಾಗಿ ಬರಲಿದ್ದಾರೆ. ಬೆಂಗಳೂರಿಗೆ ಹತ್ತು ಲಕ್ಷ ಜನ ತಲುಪುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಮುಖಂಡರಾದ ಹೆಚ್.ಎಸ್. ನಾಗರಾಜ್, ಎಂ. ಜಯಕುಮಾರ್, ಎಂ.ಟಿ. ಸುಭಾಷ್ಚಂದ್ರ, ಹುಚ್ಚಪ್ಪ ಮಾಸ್ತರ್, ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.