ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ

ದಾವಣಗೆರೆ, ಜು. 31- ವರ ಮಹಾಲಕ್ಷ್ಮಿ ಹಬ್ಬವನ್ನು ದೇವನಗರಿ ಜನತೆ ಸಂಭ್ರಮದಿಂದ ಆಚರಿಸಿದರು. ಮನೆಗಳಲ್ಲಿ ಲಕ್ಷ್ಮಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿ ಪೂಜಿಸಲಾಯಿತು.

ದೇವಿ ಮೂರ್ತಿ ಮುಂಭಾಗ ಹಣ್ಣು, ಹಂಪಲು ಹಾಗೂ ವಿಶೇಷ ಸಿಹಿ ತಿನಿಸುಗಳನ್ನಿಡಲಾಗಿತ್ತು. ಹಬ್ಬದ ಪ್ರಯುಕ್ತ ಬಹುತೇಕರ ಮನೆಯಲ್ಲಿ ಪಾಯಸ, ಹೋಳಿಗೆ ಹೀಗೆ ವಿವಿಧ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ನಗರದ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.

ಕೊರೊನಾ ಆತಂಕದ ನಡುವೆಯೂ ಮನೆಗಳಿಗೆ ತಳಿರು ತೋರಣ ಕಟ್ಟಿ, ವರಮಹಾ ಲಕ್ಷ್ಮೀಯನ್ನು ಅಲಂಕರಿಸಿ, ಹೊಸಬಟ್ಟೆ ಧರಿಸಿದ ಗೃಹಿಣಿಯರು ಸ್ನೇಹಿತರು, ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ ಉಡಿ ನೀಡುವ ಹಾಗೂ ಮಕ್ಕಳೊಂದಿಗೆ ನೆರೆ ಹೊರೆಯ ಮನೆಗಳಿಗೆ ಹೋಗಿ ಕುಂಕುಮ ಸ್ವೀಕರಿಸುತ್ತಿದ್ದ ದೃಶ್ಯಗಳು  ಕಂಡು ಬಂದವು. ಆದರೆ ದೇವಾಲಯಗಳಿಗೆ ತೆರಳುವವರ ಸಂಖ್ಯೆ ವಿರಳವಾಗಿತ್ತು.

ಇಷ್ಟು ದಿನಗಳ ಕಾಲ ಬೇಡಿಕೆ ಕಳೆದಕೊಂಡಿದ್ದ ಹೂವಿಗೆ ಹಬ್ಬದ ಅಂಗವಾಗಿ ಬೇಡಿಕೆ ಹೆಚ್ಚಾಗಿತ್ತು. ಪರಿಣಾಮ ದರವೂ ಗಗನಮುಖಿಯಾಗಿತ್ತು.  ಹಣ್ಣು ಸೇರಿದಂತೆ  ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆ ನಡುವೆಯೂ  ವರ ಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ  ಆಚರಿಸಲಾಯಿತು.

error: Content is protected !!