ಅಂತರಂಗದ ದರ್ಶನ ಮಾಡಿಸುವುದೇ ಧರ್ಮಗಳ ಉದ್ದೇಶ

ಅಂತರಂಗದ ದರ್ಶನ ಮಾಡಿಸುವುದೇ ಧರ್ಮಗಳ ಉದ್ದೇಶ - Janathavaniಚಿತ್ರದುರ್ಗ, ಜು. 27 – ಈ ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳ ಉದ್ದೇಶವೂ ಮಾನವನಿಗೆ ಅಂತರಂಗದ ದರ್ಶನ ಮಾಡಿಸುವುದಾಗಿದೆ. ಇದು ಸ್ವಸ್ವರೂಪ ದರ್ಶನ ಮಾಡಿಸುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಲ್ಲಿನ ಮುರುಘಾ ಮಠದಲ್ಲಿ ನಿನ್ನೆ ನಡೆದ ಶ್ರಾವಣ ದರ್ಶನ ಮೂರನೇ ದಿನದ ಫೇಸ್‍ಬುಕ್ ಮತ್ತು ಯುಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ ಸಾಧನೆ ಮತ್ತು ಮಾನವ ಸಹಜ ದೌರ್ಬಲ್ಯ ವಿಷಯ ಕುರಿತು ಶರಣರು ಆಶೀರ್ವಚನ ನೀಡಿದರು.

ಧರ್ಮ, ಇಷ್ಟಲಿಂಗ, ಜಂಗಮವೆಂಬ ಕನ್ನಡಿ. ಈ ಕನ್ನಡಿಯ ಒಳಗೆ ತನ್ನನ್ನು ನೋಡಿಕೊಳ್ಳುವುದು ತನ್ನ ವರ್ತನೆಗಳನ್ನು ತಿದ್ದಿ ತೀಡಿ ಸ್ವರೂಪ ದರ್ಶನ ಮಾಡಿಕೊಳ್ಳುವುದು ಎಷ್ಟು ಸುಲಭವೋ ಅಷ್ಟೇ ಕಷ್ಟವಾಗಿದೆ. ಈ ಜಗತ್ತಿನ ದಾರ್ಶನಿಕರು ಅಂತರಂಗದ ದರ್ಶನ ಮಾಡುತ್ತಾ ದಿವ್ಯದರ್ಶನವನ್ನು ಕಂಡಿದ್ದಾರೆ. ಈ ರೀತಿಯಾದ ಸಾಕ್ಷಾತ್ಕಾರದ ಅರಿವನ್ನು ಧರ್ಮ, ಶಾಸ್ತ್ರ ಮಾಡಿಕೊಡುತ್ತದೆ ಎಂದರು.

ಮಾನವ ತಪ್ಪು ಮಾಡುವುದು ಸಹಜ. ಆದರೆ, ಆ ತಪ್ಪಿನಿಂದ ಶಕ್ತಿಯಾಗಿ ಬೆಳೆದು ಬರಬೇಕು. ಸತ್ಪುರುಷರು ಒಂದು ತಪ್ಪಿನಿಂದ ಮತ್ತೊಂದು ತಪ್ಪಿನವರೆಗೆ ಶಕ್ತಿಯಾಗಿ ಬೆಳೆದಿರುತ್ತಾರೆ. ತಪ್ಪನ್ನು ತಿದ್ದುಕೊಂಡು ಎದ್ದು ಬರುವಂತಹ ಒಂದು ರೂಢಿಯನ್ನು ಅಳವಡಿಸಿಕೊಂಡರೆ ಎಲ್ಲರೂ ಸಜ್ಜನರೇ, ಉತ್ತಮರೇ ಆಗುತ್ತಾರೆ. ಸತ್ಪುರುಷರು ತಮ್ಮ ಜೀವನದಲ್ಲಿ ಆದ ಒಂದು ತಪ್ಪನ್ನು ವ್ಯಕ್ತಿತ್ವದ ಬೆಳವಣಿಗೆಗೆ ಮೆಟ್ಟಿಲು ಅಥವಾ ಸೋಪಾನ ಮಾಡಿಕೊಳ್ಳುತ್ತಾರೆ. ಅಂತರಾವಲೋಕನದಿಂದ ದೌರ್ಬಲ್ಯ ಸಣ್ಣದಾಗುತ್ತದೆ. ಸಾಧನೆ ದೊಡ್ಡದಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಚೆಲುಮೇರುದ್ರಸ್ವಾಮಿ ಮಠದ ಶ್ರೀ ಬಸವ ಕಿರಣ ಸ್ವಾಮಿಗಳು, ಸಾಧಕರುಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್.ಲಿಂಗರಾಜು ಮುಂತಾದವರಿದ್ದರು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವರಾಜ ಶಾಸ್ತ್ರಿ ನಿರೂಪಿಸಿದರು.

error: Content is protected !!