ಆಸ್ಪತ್ರೆ ದಾಖಲಿಗೆ ನೆರವಾಗಲು ತಂಡಗಳ ರಚನೆ

ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಎಸ್ಪಿ ಮೂಲಕ ಕ್ರಮ: ಸಚಿವ ಭೈರತಿ

ದಾವಣಗೆರೆ, ಜು. 27 – ರೋಗಿಗಳು ಆಸ್ಪತ್ರೆಗೆ ದಾಖಲಾಗುವಲ್ಲಿ ಆಗುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸಲು ಆಸ್ಪತ್ರೆಯ ಹಂತದಲ್ಲಿ ಸಮಿತಿಗಳನ್ನು ರಚಿಸಿ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಮಸ್ಯೆಗಳು ಎದುರಾಗುತ್ತಿ ರುವ ಕುರಿತು ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.

ರೋಗಿಗಳು ಆಸ್ಪತ್ರೆಗೆ ಬಂದ ತಕ್ಷಣ ತಂಡ ಅವರನ್ನು ಸಂಪರ್ಕಿಸುತ್ತದೆ. ಅವರಿಗೆ ಸ್ಪಂದಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ರೋಗಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದವರು ಭರವಸೆ ನೀಡಿದ್ದಾರೆ. 

ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಅರ್ಧದಷ್ಟು ಸೀಟುಗಳನ್ನು ಪಡೆಯಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಇದರ ಅನ್ವಯ ಜಿಲ್ಲೆ ಯಲ್ಲಿ ನಮಗೆ 1,300 ಬೆಡ್‌ಗಳು ಲಭ್ಯವಾ ಗುತ್ತವೆ ಎಂದ ಅವರು,ಚಿಕಿತ್ಸೆ ನೀಡಲು ಬೆಡ್ ಇಲ್ಲ ಎಂಬ ಪ್ರಶ್ನೆಯೇ ಇಲ್ಲ. ಇದು ಸೃಷ್ಟಿಸಲಾ ಗಿರುವ ಮಾತುಗಳಷ್ಟೇ ಎಂದವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಆಗದ ರೀತಿಯಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಬೇಕು, ಸಮಗ್ರ ಆರೋಗ್ಯ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿಯೂ ಅವರು ಹೇಳಿದ್ದಾರೆ. ಜಿಲ್ಲಾ ಆಸ್ಪತ್ರೆಯ ರೆಫರೆನ್ಸ್ ಪಡೆದು ಖಾಸಗಿ ಆಸ್ಪತ್ರೆಗೆ ತೆರಳುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಬೇಕಾಗುತ್ತದೆ. ಕೊರೊನಾ ರೋಗಿಗಳ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಹೀಗಾಗಿ ರೋಗಿಗಳು ಶುಲ್ಕ ಪಾವತಿಸಿದ ನಂತರವೇ ಅಡ್ಮಿಟ್ ಮಾಡಿಕೊಳ್ಳುತ್ತೇವೆ ಎಂದು ಖಾಸಗಿ ಆಸ್ಪತ್ರೆಗಳು ಹೇಳುವ ಹಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಖಾಸಗಿ ಆಸ್ಪತ್ರೆಗಳು ನಿಯಮ ಮೀರಿ ಚಿಕಿತ್ಸೆ ನೀಡಲು ನಿರಾಕರಿಸಿದರೆ ತಂಡಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೇರವಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಚಿವ ಭೈರತಿ ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಾನೇ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.

ಮೃತ ಪೌರ ಕಾರ್ಮಿಕನಲ್ಲ : ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಲ್ಪಟ್ಟು ಪೌರ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಭೈರತಿ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದ್ದಾರೆ.

ಮೃತ ವ್ಯಕ್ತಿ ಪೌರ ಕಾರ್ಮಿಕ ಅಲ್ಲ. ಮೃತ ವ್ಯಕ್ತಿಯ ತಾಯಿ ಪೌರ ಕಾರ್ಮಿಕರಾಗಿದ್ದಾರೆ. ಈ ಬಗ್ಗೆ ನಾನು ನಗರ ಪಾಲಿಕೆ ಆಯುಕ್ತರ ಬಳಿ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.

ನಿಯಮಗಳ ಪ್ರಕಾರ ಪೌರ ಕಾರ್ಮಿಕರಲ್ಲದೇ ಇರುವವರನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಿ ಪರಿಹಾರ ನೀಡಲು ಸಾಧ್ಯವಾಗದು ಎಂದವರು ತಿಳಿಸಿದರು.

ಮೃತ ವ್ಯಕ್ತಿ ಮಲ ಹೊರುವ ಪದ್ಧತಿಯಲ್ಲಿದ್ದುದಾಗಿ ನಗರ ಪಾಲಿಕೆ ಪ್ರಮಾಣ ಪತ್ರ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಲ ಹೊರುವ ಪದ್ಧತಿಯಲ್ಲಿದ್ದವರಿಗೆ ಪರಿಹಾರ ನೀಡಲು ಅವಕಾಶವಿದ್ದರೆ ಆ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!