ದಾವಣಗೆರೆ, ಅ.27 – ಪ್ರತಿಯೊಬ್ಬ ನಾಗರಿಕರು ಸ್ವಯಂ ಪ್ರೇರಣೆಯಿಂದ ಕೋವಿಡ್-19 ಗಂಟಲು ಮಾದರಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಅತೀ ಬೇಗ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದಾಗುವ ಗಂಡಾಂತರವನ್ನು ತಡೆಗಟ್ಟಬಹುದು ಎಂದು ದಾವಣಗೆರೆ ತಾಲ್ಲೂಕು ವೈದ್ಯಾಧಿಕಾರಿ ಡಾ.ದೇವರಾಜ್ ಪಟಗಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರ ಆಶ್ರಯದಲ್ಲಿ ಸರ್ಕಾರಿ ನೌಕರರ ಸಭಾಂಗಣದಲ್ಲಿ ಗುರುವಾರ ಉಚಿತ ಕೋವಿಡ್-19 ಗಂಟಲು ಮಾದರಿ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವುಗಳು ಈಗಾಗಲೇ ನಿಟ್ಟುವಳ್ಳಿ ಇ.ಎಸ್.ಐ ಆಸ್ಪತ್ರೆ ಮುಂಭಾಗ, ವಿದ್ಯಾನಗರ ಕೆನರಾ ಬ್ಯಾಂಕ್ ಎದುರು, ಸೂಪರ್ ಮಾರ್ಕೆಟ್ ದಾವಣಗೆರೆ ಒನ್ ಬಳಿ, ಸರ್ಕಾರಿ ನೌಕರರ ಭವನ ಹಾಗೂ ಇತರೆ ಹಲವಾರು ನಿಗದಿತ ಸ್ಥಳಗಳಲ್ಲಿ ಉಚಿತ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಾಲಾ ಕ್ಷಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಉಮಾಪತಿ ಮಾತನಾಡಿ, ಸಾಂಕ್ರಾಮಿಕ ರೋಗ ಕೋವಿಡ್-19 ಬಗ್ಗೆ ನಾವುಗಳು ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದ್ದು, ಸಾರ್ವಜನಿಕರು ಆರೋಗ್ಯಕರವಾದ ಶುದ್ಧವಾದ ಆಹಾರ, ನೀರು, ಗಾಳಿ ಸೇವಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಕೊರೊನಾ ಸಾಂಕ್ರಾಮಿಕ ರೋಗದಿಂದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ ಪ್ರಯುಕ್ತ ಸಮರ್ಪಕವಾಗಿ ಕೈತೊಳೆಯುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಡಾ.ಉಮೇಶ್, ಕಲ್ಲೇಶಪ್ಪ, ಶಿವಣ್ಣ, ಹೆಚ್.ಉಮಾಪತಿ, ಹಾಗೂ ಆಶಾ ಬಾನುಪ್ರಕಾಶ್, ವೆಂಕಟಾಚಲ ಕುಮಾರ, ಆನಂದ್ ಮೂರ್ತಿ, ಪು.ಆ.ಸ ಅವಿನಾಶ್ ಮತ್ತಿತರರು ಹಾಜರಾಗಿದ್ದರು.