ಭಾನುವಾರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಕಾಯುತ್ತಿರುವ ಪೊಲೀಸ್ ಸಿಬ್ಬಂದಿ. ಏನು ಲಾಕ್ ಆದರೇನು? ಹಸಿವು ನೀಗಿಸಲು ಕಟ್ಟಿಗೆಯೇ ಬೇಕು ಎಂದು ತಲೆ ಮೇಲೆ ಹೊತ್ತು ಹೊರಟ ಮಹಿಳೆ. ಪಿ.ಬಿ. ರಸ್ತೆಯಲ್ಲಿನ ಚಿತ್ರವಿದು.
________________________________________________________________________________________________
ದಾವಣಗೆರೆ, ಜು. 12- ಭಾನುವಾರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರ ಮೌನವಾಗಿತ್ತು. ಬೆಳಿಗ್ಗೆ 9 ಗಂಟೆವರೆಗೆ ಹಣ್ಣು, ತರಕಾರಿ, ಹಾಲು ಮಾರಾಟ ಎಂದಿನಂತೆಯೇ ಇತ್ತು. ತರಕಾರಿ ಮಾರುಕಟ್ಟೆಯಲ್ಲಿ ಜನ ದಟ್ಟಣೆ ವಿರಳವಾಗಿತ್ತು
ಬೆಳಿಗ್ಗೆ 10 ನಂತರ ನಗರ ನಿಧಾನವಾಗಿ ಮೌನವಾಗತೊಡಗಿತು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಆದರೆ ಬಡಾವಣೆಗಳಲ್ಲಿ ಮಾತ್ರ ಲಾಕ್‌ಡೌನ್‌ಗೆ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಜನತೆ ಎಂದಿನಂತೆಯೇ ವಸ್ತುಗಳ ಕೊಡು-ಕೊಳ್ಳುವಿಕೆಯಲ್ಲಿ ನಿರತರಾಗಿದ್ದರು.
ಬಸ್, ಟ್ಯಾಕ್ಸಿಗಳು ರಸ್ತೆಗಿಳಿಯಲ್ಲಿಲ್ಲ. ಆದರೆ ಅಲ್ಲಲ್ಲಿ ಆಟೋಗಳು ಸಂಚರಿಸುತ್ತಿದ್ದವಾದರೂ, ಪೊಲೀಸರ ಭಯಕ್ಕೆ ನಂತರ ಅವುಗಳ ಓಟಾಟವೂ ಸ್ಥಗಿತವಾಯಿತು. ಗ್ರಾಹಕರ ವಿರಳತೆಯ ನಡು ವೆಯೂ ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿ ಸಿದವು. ಔಷಧಿ ಅಂಗಡಿ, ದಿನಸಿ ಅಂಗಡಿ, ಮಿಲ್ಕ್ ಪಾರ್ಲರ್‌ಗಳು, ಬೇಕರಿಗಳು ತೆರೆಯಲ್ಪಟ್ಟಿದ್ದವು.
ವಾಹನಗಳನ್ನು ತಡೆದು ಪೊಲೀಸರು ಪ್ರಶ್ನಿಸಿ, ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದುದು ಅಲ್ಲಲ್ಲಿ ಕಂಡು ಬಂತು. ಸಂಜೆ ಅಲ್ಲಲ್ಲಿ ಮತ್ತೆ ವಾಹನಗಳ ಓಡಾಟ ಆರಂಭವಾಗಿತ್ತು. ರಿಂಗ್ ರಸ್ತೆ, ವಿನೋಬನಗರ, ಜಾಲಿ ನಗರ, ಭಗತ್ ಸಿಂಗ್ ನಗರ, ನಿಟುವಳ್ಳಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಜನರು ಲಾಕ್‌ಡೌನ್‌ಗೆ ಬೆಲೆಯೇ ಇಲ್ಲ ಎಂಬಂತೆ ಮಾಮೂಲಿಯಾಗಿಯೇ ತಿರುಗಾಡುತ್ತಿದ್ದುದು ಕಾಣ ಸಿಕ್ಕಿತ್ತು. ಚಿಕನ್-ಮಟನ್ ಅಂಗಡಿಗಳು ರಶ್ : ನಗರದ ಮಟನ್ ಮಾರ್ಕೆಟ್, ವಿನೋಬನಗರ, ಜಾಲಿ ನಗರ, ಕೆಟಿಜೆ ನಗರ ಮುಖ್ಯ ರಸ್ತೆ ಹಾಗೂ ಹಳೇಭಾಗಗಳಲ್ಲಿ ಚಿಕನ್, ಮಟನ್ ಮಾರಾಟವು ಭಾನುವಾರವಾಗಿದ್ದರ ಪರಿಣಾಮ ಹೆಚ್ಚಾಗಿಯೇ ಇತ್ತು. ಕೆಲವೆಡೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗ್ರಾಹಕರು ಮಟನ್‌ಗಾಗಿ ಮುಗಿ ಬಿದ್ದಿದ್ದರು.