ದಾವಣಗೆರೆ, ಜು. 11 – ಜಿಲ್ಲೆಯಲ್ಲಿ ಕೊರೊನಾ ಮತ್ತಷ್ಟು ವ್ಯಾಪಕವಾಗಿ ಹರಡಿದ್ದು, ಶನಿವಾರದಂದು 70 ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಒಂದೇ ದಿನದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಬಹುತೇಕ ದುಪ್ಪಟ್ಟಾಗಿ 152ಕ್ಕೆ ತಲುಪಿದೆ.
ಕಳೆದ ಸೋಮವಾರ ಜಿಲ್ಲೆಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 36 ಆಗಿತ್ತು. ವಾರಾಂತ್ಯಕ್ಕೆ ತಲುಪುವ ವೇಳೆಗೆ ಸಕ್ರಿಯ ಸೋಂಕುಗಳು 150ರ ಗಡಿ ದಾಟಿವೆ.
ಇದೇ ದಿನದಂದು ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದ ನಾಲ್ಕು ಸಾವುಗಳು ಸಂಭವಿಸಿವೆ. ಇದುವರೆಗೂ ಕೊರೊನಾದಿಂದ ಜಿಲ್ಲೆಯಲ್ಲಿ 18 ಸಾವುಗಳು ಸಂಭವಿಸಿವೆ.
ಮೃತರೆಲ್ಲರೂ 50 ವರ್ಷ ಮೀರಿದವರಾಗಿದ್ದು, ಕೊರೊನಾ ಅಲ್ಲದೇ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ಸಹ ರೋಗಗಳಿಂದಲೂ ಬಳಲುತ್ತಿದ್ದರು.
ನಗರದ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಣೇಬೆನ್ನೂರಿನ 53 ವರ್ಷದ ವ್ಯಕ್ತಿ ಹಾಗೂ ಜಾಲಿನಗರದ 57 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಎನ್.ಆರ್. ರಸ್ತೆಯ 62 ವರ್ಷದ ಸೋಂಕಿತ ಮಹಿಳೆ ಸಾವನ್ನಪ್ಪಿದ್ದರೆ, ದೇವರಾಜ ಅರಸ್ ಬಡಾವಣೆಯ 70 ವರ್ಷದ ವ್ಯಕ್ತಿ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದೇ ದಿನದಂದು ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರಲ್ಲಿ ನಾಲ್ವರು ಹರಿಹರದ ಗೌಸಿಯಾ ಕಾಲೋನಿಗೆ ಸೇರಿದವರು ಹಾಗೂ ಒಬ್ಬರು ದಾವಣಗೆರೆಯ ಜೆ.ಕೆ. ರೆಸಿಡೆನ್ಸಿಯ ನಾಲ್ಕು ವರ್ಷದ ಮಗು.
ದಾವಣಗೆರೆಯ ಮಹಮದ್ ನಗರ, ಆವರಗೆರೆ, ಎಂ.ಸಿ.ಸಿ. ಎ ಬ್ಲಾಕ್, ಎಂಸಿಸಿ ಬಿ ಬ್ಲಾಕ್, ನರಸರಾಜ ಪೇಟೆ, ಇಸ್ಮಾಯಿಲ್ ನಗರ, ಆಜಾದ್ ನಗರ, ಕೆ.ಟಿ.ಜೆ. ನಗರ, ಎನ್.ಆರ್. ರಸ್ತೆ, ರಾಜೇಂದ್ರ ಬಡಾವಣೆ, ಮಾವಿನತೋಪು ಆಸ್ಪತ್ರೆ ಹಿಂದೆ, ಚೌಕಿಪೇಟೆ, ಕುರುಬರಕೇರಿ, ಜಾಲಿನಗರ, ಬೇತೂರು ರಸ್ತೆ, ಬಸವರಾಜಪೇಟೆ, ಬಿ. ಕಲಪನಹಳ್ಳಿ ಹಾಗೂ ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ.
ಚನ್ನಗಿರಿಯ ಮಠದ ಬೀದಿ, ಕುಂಬಾರ ಬೀದಿ ಹಾಗೂ ತಾಲ್ಲೂಕಿನ ಕೊಂಡದಹಳ್ಳಿ, ಮೆದಿಕೆರೆ, ರಾಜಗೊಂಡನಹಳ್ಳಿ ತಾಂಡಾ, ಹಿರೇಕೋಗಲೂರು, ದಿಗ್ಗೇನಹಳ್ಳಿ, ಹೊದಿಗೆರೆಯಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಎಂಸಿಸಿ ಬಿ ಬ್ಲಾಕ್ನಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರಲ್ಲಿ ಸೋಂಕಿರುವುದು ಕಂಡು ಬಂದಿದೆ.
ಹೊನ್ನಾಳಿಯ ಅಕ್ಕಸಾಲಿ ಬೀದಿ, ಟಿ.ಎಂ. ರಸ್ತೆ, ಎ.ಕೆ. ಕಾಲೋನಿ ಹಾಗೂ ತಾಲ್ಲೂಕಿನ ಬಿದರಗಡ್ಡೆ, ತಗ್ಗಿಹಳ್ಳಿ, ಕ್ಯಾಸಿನಕೆರೆಗಳಲ್ಲಿ ಸೋಂಕಿತರು ಕಂಡು ಬಂದಿದ್ದಾರೆ.
ಹರಿಹರದ ಹೊಸ ಹರ್ಲಾಪುರ, ಗಾಂಧಿನಗರ ಹಾಗೂ
ತಾಲ್ಲೂಕಿನ ಗಂಗನರಸಿ, ತೆಗ್ಗಿನಕೇರಿ, ಕೊಂಡಜ್ಜಿಗಳಲ್ಲಿ ಸೋಂಕಿತರಿರುವುದು ಕಂಡು ಬಂದಿದೆ.
ಜಗಳೂರಿನ ರಾಮಾಲಯ ರಸ್ತೆ, ಸರ್ಕಾರಿ ಶಾಲೆ ಹತ್ತಿರ, ಮಾರಿಕಾಂಬ ದೇವಾಲಯ ಹತ್ತಿರ, ಮತ್ತು ತಾಲ್ಲೂಕಿನ ತೋರಣಗಟ್ಟೆ ಹಾಗೂ ಹೊರಕೆರೆಗಳಲ್ಲಿ ಸೋಂಕು ಪ್ರಕರಣಗಳು ಕಂಡು ಬಂದಿವೆ.
ರಾಣೇಬೆನ್ನೂರಿನ ಹೊಳೆ ಆನವೇರಿಯಿಂದ ಜಿಲ್ಲೆಗೆ ಬಂದಿದ್ದ ಒಂದು ವರ್ಷದ ಹೆಣ್ಣು ಮಗುವಿನಲ್ಲಿ ಸೋಂಕಿರುವುದು ಪತ್ತೆಯಾಗಿದೆ.