300ರ ಗಡಿ ದಾಟಿದ ಕೊರೊನಾ

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಕಾಲಿಟ್ಟ ಸೋಂಕು : 50 ವರ್ಷದ ಮಹಿಳೆ ಸಾವು

ದಾವಣಗೆರೆ, ಜೂ. 30 – ಜಿಲ್ಲೆಯಲ್ಲಿ ಮಂಗಳವಾರ ಹನ್ನೆರಡು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಇದೇ ದಿನ ಒಂಭತ್ತು ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 

ನಗರದ ಎಸ್.ಎಸ್.ಎಂ. ನಗರದ 50 ವರ್ಷದ ಸೋಂಕಿತ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರು ಉಸಿರಾಟದ ಸಮಸ್ಯೆಯಿಂದಾಗಿ ಸೋಮವಾರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾದಿಂದ ಮೃತ ಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ದಿನದಂದು ಜಿಲ್ಲೆಯ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದೆ. ಜೊತೆಗೆ, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಕೊರೊನಾ ಪ್ರಕರಣಗಳು ಕಂಡು ಬಂದಂತಾಗಿದೆ. ವಿನೋಬನಗರದ ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರು ಒಂದೇ ಕುಟುಂಬದವರಾಗಿದ್ದಾರೆ. ಇದೇ ಕುಟುಂಬದ ಸೋಂಕಿತ ವ್ಯಕ್ತಿ ಗುಣಮುಖರಾಗಿ ಮಂಗಳವಾರ ಬಿಡುಗಡೆಯಾಗಿದ್ದಾರೆ.

ನಗರದ ಸುಲ್ತಾನ್‌ಪೇಟೆ, ಬೇತೂರು ರಸ್ತೆ, ಗಾಂಧಿನಗರ ಹಾಗೂ ಎಸ್.ಎಸ್.ಎಂ. ನಗರಗಳಲ್ಲಿ ತಲಾ ಒಂದು ಪ್ರಕರಣಗಳು ಕಾಣಿಸಿಕೊಂಡಿವೆ.

ಜಗಳೂರಿನಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಲ್ಲಿನ 43 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೊರೊನಾ ಕಾಣಿಸಿಕೊಂಡಂತಾಗಿದೆ.

ಹರಿಹರದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಸೋಂಕು : ಹರಿಹರದ ಅಗಸರ ಬೀದಿಯ ಕಂಟೈನ್‌ಮೆಂಟ್ ಝೋನ್‌ನಲ್ಲಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಹಾಗೂ ಆಕೆಯ ತಾಯಿಗೆ ಸೋಂಕು ಇರುವುದು ದೃಢಪಟ್ಟಿದೆ. ವಿದ್ಯಾರ್ಥಿನಿ ನಗರದ ಜೆ.ಸಿ. ಬಡಾ ವಣೆಯ ಡಿಆರ್‌ಎಂ ಕೇಂದ್ರದ ವಿಶೇಷ ಕೊಠಡಿ ಯಲ್ಲಿ ಪರೀಕ್ಷೆ ಬರೆದಿದ್ದಳು. ಒಟ್ಟು ಹರಿಹರದ ಮೂವರಲ್ಲಿ ಸೋಂಕು ಪತ್ತೆಯಾಗಿರುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.

ಹರಿಹರದ ಅಗಸರ ಬೀದಿಯಲ್ಲಿ ಇಬ್ಬರು ಹಾಗೂ ಗಾಂಧಿನಗರದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರದಿಂದ ನಗರಕ್ಕೆ ಬಂದಿದ್ದ ಒಬ್ಬರಲ್ಲಿ ಕೊರೊನಾ ಸೋಂಕಿರುವುದು ಕಂಡು ಬಂದಿದೆ. ಮಂಗಳವಾರದಂದು ಹರಿಹರದ ಎ.ಕೆ. ಕಾಲೊನಿಯ ಇಬ್ಬರು, ಹೊನ್ನಾಳಿಯ ಹತ್ತೂರು ಹಾಗೂ ಕ್ಯಾಸಿನಕರೆಯ ಇಬ್ಬರು ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದ ಬೀಡಿ ಲೇಔಟ್‌ನ ಮೂವರು ಸೋಂಕಿತರು ಗುಣ ಮುಖರಾಗಿದ್ದಾರೆ. ಬಳ್ಳಾರಿಯ ಹೊಸಪೇಟೆಯಿಂದ ನಗರಕ್ಕೆ ಬಂದಿದ್ದ ಸೋಂಕಿತರೊಬ್ಬರು ಗುಣವಾಗಿ ಬಿಡುಗಡೆಯಾಗಿ ದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 309 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 266 ಜನರು ಗುಣವಾಗಿ ಬಿಡುಗಡೆಯಾಗಿ ದ್ದಾರೆ ಮತ್ತು ಎಂಟು ಜನರು ಸಾವನ್ನಪ್ಪಿದ್ದಾರೆ. ಪ್ರಸಕ್ತ 35 ಸಕ್ರಿಯ ಪ್ರಕರಣಗಳಿವೆ.

error: Content is protected !!