ಸ್ಟೈಪೆಂಡ್ಗಾಗಿ ಜೆಜೆಎಂ ವೈದ್ಯಕೀಯ ವಿದ್ಯಾರ್ಥಿಗಳ ಧರಣಿ
ದಾವಣಗೆರೆ, ಜೂ. 29 – ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆಜೆಎಂ ವೈದ್ಯ ಕೀಯ ಕಾಲೇಜಿನ ಪಿ.ಜಿ. ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಪೆಂಡ್ ವಿಷಯ ಕೊರೊನಾ ವಾರಿಯರ್ಸ್ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.
ಕಳೆದ 16 ತಿಂಗಳಿನಿಂದ ನಮಗೆ ಸ್ಟೈಪೆಂಡ್ ದೊರೆತಿಲ್ಲ, ಸಚಿವರ ಮಟ್ಟದಲ್ಲಿ ಮಾತನಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಹೇಳಿರುವ ವಿದ್ಯಾರ್ಥಿಗಳು, ನಗರದ ಜಯದೇವ ವೃತ್ತದಲ್ಲಿ ಸಾಮಾಜಿಕ ಅಂತರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದು ಕೊರೊನಾ ವಾರಿಯರ್ಗಳಾದ ವೈದ್ಯಕೀಯ ವಿದ್ಯಾರ್ಥಿಗಳು, ಆಡಳಿತ ಹಾಗೂ ಪೊಲೀಸರು ಮುಖಾಮುಖಿ ಯಾಗಲು ಕಾರಣವಾಗಿದೆ. ಜೆಜೆಎಂ ಮೆಡಿಕಲ್ ಕಾಲೇಜ್ ಆಫ್ ಡಾಕ್ಟರ್ಸ್ ಹಾಗೂ ಎ.ಬಿ.ವಿ.ಪಿ.ಗಳು ಜಂಟಿಯಾಗಿ ಈ ಹೋರಾಟ ನಡೆಸುತ್ತಿವೆ.
ಸೋಮವಾರ ಬೆಳಿಗ್ಗೆಿಯಿಂದಲೇ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಯದೇವ ವೃತ್ತದ ಬಳಿ ಭಾರೀ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಪೊಲೀಸರ ಜಮಾವಣೆ ಆಗಿತ್ತು.
ಅನುಮತಿ ಇಲ್ಲದೇ ಪ್ರತಿಭಟನೆ ನಡೆಸುತ್ತಿರುವುದನ್ನು ಅಂತ್ಯಗೊಳಿಸ ಬೇಕು. ಈ ಬಗ್ಗೆ ಮಾತುಕತೆಗೆ ಬರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಂಗಳವಾರ ಬೆಳಿಗ್ಗೆ ತಿಳಿಸಿದ್ದರು.
ಆದರೆ, ಇದಕ್ಕೆ ಒಪ್ಪದ ಪ್ರತಿಭಟನಾ ನಿರತರು, ನಾವು ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಅದರಂತೆ ಜಿಲ್ಲಾಧಿಕಾರಿ ಬೀಳಗಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ, ಅವರ ಸಮಸ್ಯೆ ಆಲಿಸಿದರು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನಂತರ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಯನ್ನೂ ನಡೆಸಿದರು. ಆದರೂ, ಸಮಸ್ಯೆ ಬಗೆ ಹರಿಯದೇ ಧರಣಿ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.
ಪ್ರತಿಭಟನೆ ವೇಳೆ ಕುಸಿದು ಬಿದ್ದ ವೈದ್ಯ ವಿದ್ಯಾರ್ಥಿನಿ
8 ಗಂಟೆಯೊಳಗೆ ಪ್ರತಿಭಟನೆ ನಿಲ್ಲಿಸದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಆದೇಶ ನೀಡಿದ ಡಿಸಿ
ನಂತರ ಆದೇಶವೊಂದನ್ನು ಹೊರಡಿಸಿದ ಜಿಲ್ಲಾಧಿಕಾರಿ ಬೀಳಗಿ, ಈ ಧರಣಿಯಿಂದ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮುಜುಗರವಾಗಿದೆ. ಕೊರೊನಾ ನಿಯಂತ್ರಣಕ್ಕೆ ಅಡಚಣೆಯಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಯ ಒಳಗೆ ಧರಣಿ ನಿಲ್ಲಿಸಬೇಕು. ಇಲ್ಲವಾದರೆ ಸಾಂಕ್ರಾಮಿಕ ರೋಗಗಳ ಅಧಿನಿಯಮ 1897, ಭಾರತೀಯ ದಂಡ ಸಂಹಿತೆಯ ಕಲಂ 188 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51ರಿಂದ 60ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿದ ವಿದ್ಯಾರ್ಥಿಗಳು, ನಾವು ಯಾವುದೇ ರೀತಿಯಲ್ಲೂ ಕಾನೂನು ಉಲ್ಲಂಘಿಸಿಲ್ಲ. ನಾವು ಪ್ರತಿನಿತ್ಯ ವೈದ್ಯರಾಗಿ ಆಸ್ಪತ್ರೆಯಲ್ಲಿ ಕೊರೊನಾ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಾವು ಕರ್ತವ್ಯ ವೈದ್ಯರಾಗಿ, ತುರ್ತು ಸೇವೆ ವೈದ್ಯರಾಗಿ, ಹೆರಿಗೆ ವೈದ್ಯರಾಗಿ ಹಾಗೂ ಐಸಿಯು ವೈದ್ಯರಾಗಿ ಯಾರಿಗೂ ತೊಂದರೆ ನೀಡದಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ವೈದ್ಯಕೀಯ ವಿದ್ಯಾರ್ಥಿ ಡಾ. ಅರುಣ್, ನಾವು ಕರ್ತವ್ಯ ಬಿಟ್ಟು ಹೋರಾಟಕ್ಕೆ ಬಂದಿಲ್ಲ. ಆಸ್ಪತ್ರೆಯಲ್ಲಿ ನಮ್ಮ ಕೆಲಸಗಳನ್ನು ಪೂರೈಸಿದವರು ಮಾತ್ರ ಇಲ್ಲಿಗೆ ಬರುತ್ತಿದ್ದೇವೆ. ಉಳಿದವರು ಈಗಲೂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಸರ್ಕಾರಿ ಕೋಟಾದಲ್ಲಿ ಸ್ಥಾನ ಪಡೆದವರು, ಸರ್ಕಾರದ ಸಿ.ಜಿ.ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಸರ್ಕಾರವೇ ಸ್ಟೈಪೆಂಡ್ ನೀಡಲಿ ಎಂದು ಹೇಳಿದ್ದಾರೆ.
ವೈದ್ಯಕೀಯ ಸಿಬ್ಬಂದಿಯ ವೇತನ ಹಾಗೂ ಭತ್ಯೆ ಬಾಕಿ ಉಳಿಸಿಕೊಳ್ಳ ಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಇಷ್ಟಾದರೂ ನಮ್ಮ ಸ್ಟೈಪೆಂಡ್ ನೀಡದೇ ಇರುವುದು ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದಂತೆ ಎಂದು ಆರೋಪಿಸಿದ್ದಾರೆ.
ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿನಿ ಡಾ. ಹಿತ ತಿಳಿಸಿದ್ದಾರೆ. ನಾಳೆಯೂ ಸಹ ಧರಣಿ ನಡೆಸುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಪ್ರತಿಭಟನೆ ವೇಳೆ ವಿದ್ಯಾರ್ಥಿನಿಯೊಬ್ಬರು ಕುಸಿದು ಬಿದ್ದರು. ನಂತರ ಜೊತೆಯಲ್ಲಿದ್ದವರು ಆರೈಕೆಯಿಂದ ಮತ್ತೆ ಚೇತರಿಸಿಕೊಂಡ ಘಟನೆಯೂ ನಡೆಯಿತು.
ಕೊರೊನಾ ಉಲ್ಬಣಿಸುತ್ತಿರುವುದರ ನಡುವೆ ಕೊರೊನಾ ವಾರಿಯರ್ಗಳೇ ಬೀದಿಗಿಳಿದು ಹೋರಾಟ ನಡೆಸುವ ಹಾಗೂ ಒಬ್ಬ ವಾರಿಯರ್ ವಿರುದ್ಧ ಇನ್ನೊಬ್ಬರು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸವೇ ಸರಿ.