57 ಕೆರೆಗಳಿಗೆ ನೀರು : ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು

57 ಕೆರೆಗಳಿಗೆ ನೀರು : ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು - Janathavaniವಿಶ್ವೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನಾ ಸಮಿತಿ ಸದಸ್ಯ ಕೆ.ಬಿ.ಕಲ್ಲೇರುದ್ರೇಶ್ ಒತ್ತಾಯ

ಜಗಳೂರು, ಜೂ.29- ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ 650 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಾರಂಭವಾಗಿದ್ದು, ಗುಣಮಟ್ಟದಿಂದ ನಡೆಸಬೇಕೆಂದು ಭಾರೀ ನೀರಾವರಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಸರ್ಕಾರದ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನಾ ಸಮಿತಿ ಸದಸ್ಯ ಕೆ.ಬಿ.ಕಲ್ಲೇರುದ್ರೇಶ್ ತಿಳಿಸಿದ್ದಾರೆ.

ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ನದಿಯಿಂದ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಳಪೆ ಕಾಮಗಾರಿಯಿಂದ ಪೈಪ್‌ಲೈನ್‌ಗಳು ಅಲ್ಲಲ್ಲಿ ಒಡೆದು ಕೆರೆಗಳಿಗೆ ನೀರು ಬರದಂತಾಗಿದೆ. ಅದರಂತೆ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ  650 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಾರಂಭವಾಗಿದ್ದು, ಗುಣಮಟ್ಟದ ಬಗ್ಗೆ ಅನುಮಾನಗಳು ಸಹಜವಾಗಿ ಕಾಡುತ್ತಿವೆ ಎಂದರು.

ಕೆಲವೊಂದು ಲೋಪಗಳು ಕಂಡು ಬಂದಿವೆ. ನಾವು ಹೇಳುವ ಮುಂಚೆಯೇ ಸಂಬಂಧಿಸಿದ ಅಭಿಯಂತರರು ಆಗಿರುವ ತಪ್ಪನ್ನು ತಿದ್ದಬೇಕು. ಅದನ್ನು ಸರಿಪಡಿಸುವಂತೆ ಹೇಳುವುದು ನಮ್ಮ ಇಚ್ಚೆಯಾಗಿದೆ. ಪುಸ್ತಕದಲ್ಲಿ, ಜಾಹೀರಾತಿನಲ್ಲಿ ಸರಬರಾಜು ಆಗಿದೆ ಅಂತ ಕೋರ್ಟ್‌ಗೆ ಹೋಗಲು ಅವಕಾಶ ಆಗಬಾರದು ಎಂಬುದೇ ನಮ್ಮ ಕಳಕಳಿಯಾಗಿದೆ ಎಂದರು.

ಸಿರಿಗೆರೆ ಶ್ರೀ ಶಿವಮೂರ್ತಿ ಸ್ವಾಮೀಜಿಗಳ ಕಳಕಳಿಯಿಂದ ಬರ ಪೀಡಿತ ಜಗಳೂರು ತಾಲ್ಲೂಕಿಗೆ ತುಂಗಭದ್ರಾ ನದಿಯಿಂದ 57 ಕೆರೆಗಳಿಗೆ ನೀರು ಹರಿಸಿ, ಹಸಿರು ನಾಡಾಗಿ ಮಾಡಬೇಕೆಂಬ ಗುರಿ ಇಟ್ಟುಕೊಂಡು ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಆಗಮಿಸಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶ್ರೀಗಳು ಮಾಡಿದ ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 250 ಕೋಟಿ  ಘೋಷಣೆ ಮಾಡಿದ್ದರು. ನಂತರ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಆಡಳಿತಕ್ಕೆ ಬಂದಾಗ ಸ್ವಾಮೀಜಿಗಳ ಒತ್ತಡದ ಫಲವಾಗಿ 650 ಕೋಟಿ ರೂ.ಗೆ ನೀರಾವರಿ ಸಮಿತಿ ಸಭೆಯಲ್ಲಿ ಅನುಮೋದಿಸಿದ್ದರು. ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ ಮೊದಲು 250 ಕೋಟಿ ಮಂಜೂರು ಮಾಡಿದ್ದರು. ನಂತರ ಶ್ರೀಗಳು, ಸಂಸದರು, ಶಾಸಕರುಗಳ ಒತ್ತಾಯದ ಹಿನ್ನೆಲೆಯಲ್ಲಿ 650 ಕೋಟಿ ರೂ. ಹಣ ಮಂಜೂರಾತಿ ಮಾಡಿ, ಹಣ ಬಿಡುಗಡೆ ಮಾಡಿದ್ದಾರೆ. ಈಗ ಕಾಮಗಾರಿ ನಡೆಯುತ್ತಿದೆ. ಕಾಲ ಕಾಲಕ್ಕೆ ಅನುಗುಣವಾಗಿ ಆಯಾ ಸಂದರ್ಭಲ್ಲಿದ್ದ ಶಾಸಕರು, ಸಂಸದರು, ಮುಖಂಡರುಗಳು ಆಯಾ ಸರ್ಕಾರದ ಮೇಲೆ ಒತ್ತಡ ತಂದಿದ್ದನ್ನು ಸ್ವತಃ ಶ್ರೀಗಳೇ ಹೇಳಿರುವುದು ಸತ್ಯದ ಸಂಗತಿಯಾಗಿದೆ.

ನಾವು ಮಾಡಿಸಿದ್ದೇವೆ ಎಂದು ಹೇಳುವ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಹೇಳಿಕೆ ನೀಡುವುದನ್ನು ಬಿಟ್ಟು ಆಡಳಿತ, ವಿರೋಧ ಪಕ್ಷದವರೂ ಸೇರಿದಂತೆ ಎಲ್ಲರೂ 650 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಗುಣ ಮಟ್ಟದ ನಿರ್ಮಾಣದ ಬಗ್ಗೆ ಒತ್ತು ನೀಡೋಣ. ಕಾಮಗಾರಿ ಕೆಲಸ ಪೂರ್ಣವಾಗಿ ಯಶಸ್ವಿಯಾದ ಮೇಲೆ ಶಾಸಕರು, ಸಂಸದರು, ಮಾಜಿ ಶಾಸಕರು, ಅಧಿಕಾರಿಗಳು, ಗುತ್ತಿಗೆದಾರರನ್ನು ರೈತರ ಪರವಾಗಿ ಸನ್ಮಾನಿಸಿ, ಮೆರವಣಿಗೆ ಮಾಡಲಾಗುವುದೆಂದು ಅವರು ಆಶ್ವಾಸನೆ ನೀಡಿದರು.

error: Content is protected !!