ಲಾಕ್‌ಡೌನ್‌ ನಡುವೆ ವಿಕಲಚೇತನರ ‘ಮೂಕ’ ರೋಧನೆ

ದಾವಣಗೆರೆ, ಜೂ. 23 – ಕೊರೊನಾ ಲಾಕ್‌ಡೌನ್ ಹೇರಿಕೆಯಿಂದಾಗಿ ವಿಕಲಚೇತನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರದಿಂದ ಲಾಕ್‌ಡೌನ್‌ ಸಂದರ್ಭಕ್ಕಾಗಿ ಯಾವುದೇ ವಿಶೇಷ ನೆರವು ಸಿಗದೇ, ಇತ್ತ ಸಮಾಜದಲ್ಲೂ ಸಹಾಯ ಸಿಗದೇ ವಿಕಲಚೇತನರಿಗೆ ಸಮಸ್ಯೆಗಳು ಉಲ್ಬಣಿಸಿವೆ.

ಕೊರೊನಾ ಸಂಕಷ್ಟಕ್ಕೆ ಮುಂಚೆಯೇ ವಿಕಲಚೇತನರು ಸಮಾಜದಲ್ಲಿ ಅಸಮಾನತೆ ಎದುರಿಸುತ್ತಿದ್ದರು. ಲಾಕ್‌ಡೌನ್ ಹೇರಿಕೆಯ ನಂತರವಂತೂ ಅವರ ಪರಿಸ್ಥಿತಿ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ. 

ಲಾಕ್‌ಡೌನ್ ಹೇರಿಕೆಯ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ವಲಯದವರಿಗೆ ನೆರವು ಪ್ರಕಟಿಸಿವೆ. ಆದರೆ, ವಿಕಲಚೇತನರಿಗೆ ಯಾವುದೇ ವಿಶೇಷ ನೆರವು ನೀಡಿಲ್ಲ. ಕೆಲವರಂತೂ ಮಾಸಾಶನವೂ ಸರಿಯಾಗಿ ಸಿಗದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಲಾಕ್‌ಡೌನ್‌ಗೆ ಮುಂಚೆ ಜಿಲ್ಲಾಡಳಿತ ಸಭೆಯೊಂದನ್ನು ನಡೆಸಿ ಶ್ರವಣ ಹಾಗೂ ವಾಕ್ ವಿಕಲಚೇತನರಿಗೆ ಖಾಸಗಿ ಹಾಗೂ ಸರ್ಕಾರ ಸೇರಿದಂತೆ ಸಾಧ್ಯವಿರುವ ಕಡೆಗಳಲ್ಲಿ ಉದ್ಯೋಗ ಕಲ್ಪಿಸಲು ತೀರ್ಮಾನಿಸಲಾಗಿತ್ತು. ಆದರೆ, ಅದರ ಹಿಂದೆಯೇ ಎರಗಿದ ಕೊರೊನಾ ಲಾಕ್‌ಡೌನ್ ಖಾಸಗಿ ವಲಯ ದಲ್ಲಿ ಉದ್ಯೋಗಾವಕಾಶಗಳಿಗೆ ಕತ್ತರಿ ಹಾಕಿದೆ.

ಹಲವಾರು ನಿಗಮ ಹಾಗೂ ಮಂಡಳಿಗಳ ಮೂಲಕ ಉದ್ಯೋಗ ಕಲ್ಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ದಿಸೆಯಲ್ಲಿ ಕ್ರಮ ತೆಗೆದುಕೊಂಡ ಬಗ್ಗೆ ವರದಿಯನ್ನು ಕೇಳಲಾಗುತ್ತಿದೆ. ಇನ್ನೂ ವರದಿ ಸಲ್ಲಿಕೆಯಾಗಿಲ್ಲ. ನಮ್ಮ ಇಲಾಖೆಯಿಂದ ಐವರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಿ.ಎಸ್. ಶಶಿಧರ್ ತಿಳಿಸಿದ್ದಾರೆ.

ಹಲವಾರು ಖಾಸಗಿ ಕಂಪನಿಗಳಲ್ಲಿ ನಾವು ಕೆಲಸಕ್ಕಾಗಿ ಅರ್ಜಿ ಹಾಕಿದ್ದೇವೆ. ಆದರೆ, ಕಿವುಡ ಹಾಗೂ ಮೂಕರಾಗಿರುವ ಕಾರಣ ಸಂವಹನ ಸರಿಯಾಗಿ ಆಗುವುದಿಲ್ಲ ಎಂದು ಉದ್ಯೋಗ ನಿರಾಕರಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಕಿವುಡರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಪಿ. ರಾಜಶೇಖರ್ ತಿಳಿಸಿದ್ದಾರೆ.

ನಾವು ಬಡವರಿದ್ದೇವೆ. ನನ್ನ ಪರಿಚಯದ ಕಿವುಡ ಹಾಗೂ ಮೂಕರು ಹೆಚ್ಚಾಗಿ ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದೆವು. ನಮ್ಮಂತೆ 30ರಿಂದ 40 ಜನ ಈ ಕೆಲಸದಲ್ಲಿದ್ದೆವು. ಪ್ರತಿ ತಿಂಗಳಿಗೆ ನಾಲ್ಕೈದು ಸಾವಿರ ರೂ. ಸಿಗುತ್ತಿತ್ತು ಎಂದವರು ಹೇಳಿದ್ದಾರೆ.

ಆದರೆ, ಲಾಕ್‌ಡೌನ್ ಹೇರಿಕೆಯ ನಂತರ ಈ ಕೆಲಸವೂ ಕೈ ಕೊಟ್ಟಿದೆ. ಕೆಲಸವಿಲ್ಲದೇ ಸಂಕಷ್ಟ ಎದುರಾಗಿದೆ. ಮುಂದಿನ ದಿನಗಳ ಚಿಂತೆ ಕಾಡುತ್ತಿದೆ ಎಂದವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ವಿಕಲಚೇತನರಿಗೆ ಶೇ.5ರಷ್ಟು ಅನುದಾನ ನಿಗದಿ ಪಡಿಸಿದೆ. ಅಧಿಕಾರಿಗಳು ಈಗಲಾದರೂ ಆ ಬಗ್ಗೆ ತ್ವರಿತವಾಗಿ ಕ್ರಮ ತೆಗೆದುಕೊಂಡು ನಮ್ಮಂಥವರಿಗೆ ನೆರವು ನೀಡಬೇಕಿದೆ ಎಂದವರು ಒತ್ತಾಯಿಸಿದ್ದಾರೆ.

ಸರ್ಕಾರದ ಮೂಲಕ ಪ್ರತಿ ವರ್ಷ ಸ್ಕೂಟರ್ ಇತ್ಯಾದಿ ನೆರವುಗಳನ್ನು ವಿಕಲಚೇತನರಿಗೆ ಕಲ್ಪಿಸಲಾಗುತ್ತಿದೆ. ಈ ಬಾರಿ ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ತುರ್ತು ನೆರವಿಗಾಗಿ ಶೇ.5ರ ಹಣ ಬಳಕೆ ಮಾಡಿಕೊಳ್ಳಬೇಕು ಎಂಬ ಒತ್ತಾಯದ ಮಾತುಗಳು ವಿಕಲಚೇತನರಿಂದ ಕೇಳಿ ಬರುತ್ತಿವೆ.

ಮಾಸ್ಕ್ ಅಡ್ಡಿ : ಶ್ರವಣ ದೋಷ ಇರುವ ವರು ಸಂವಹನ ನಡೆಸಲು ಕೈ ಸನ್ನೆಗಳನ್ನು ಬಳಸುತ್ತಾರೆ. ಸನ್ನೆ ಭಾಷೆ ಬರದವರು ಮಾತನಾಡುವಾಗ ಅವರ ತುಟಿಗಳ ಚಲನೆ ನೋಡಿ ಮಾತುಗಳನ್ನು  ಅರ್ಥ ಮಾಡಿ ಕೊಳ್ಳುತ್ತಾರೆ.  ಆದರೆ, ಮಾಸ್ಕ್ ಕಡ್ಡಾಯ ಮಾಡಿರುವುದರಿಂದ ಶ್ರವಣ ಸಮಸ್ಯೆ ಇರುವವರು ಮಾತುಗಳನ್ನು ಅರ್ಥ ಮಾಡಿ ಕೊಂಡು ಸ್ಪಂದಿಸುವುದು ಮತ್ತಷ್ಟು ಕಷ್ಟವಾಗುತ್ತಿದೆ. ವಿಕಲಚೇತನರ ಸಮಸ್ಯೆಗಳಿಗೆ ಸಮಾಜವೇ ಈಗ ಕಿವುಡಾಗಬಾರದು. ಸರ್ಕಾರ ದಿಂದ ನೆರವುಗಳನ್ನು ನೀಡುವಾಗ ನಮಗೆ ಆದ್ಯತೆ ನೀಡಿ ಎಂಬುದು ವಿಕಲಚೇತನರ ಅಳಲಾಗಿದೆ.

error: Content is protected !!