ಹರಪನಹಳ್ಳಿ, ಡಿ.26- ಗ್ರಾಮೀಣ ಭಾರತದಲ್ಲಿ ಅಸ್ಪೃಶ್ಯತೆ ಇವತ್ತಿಗೂ ಜೀವಂತ ವಾಗಿದೆ. ಈ ಜಾತೀಯತೆಯನ್ನು ಹೋಗಲಾಡಿ ಸದೇ ಇದ್ದರೆ ಭಾರತ ದೇಶ ಇಬ್ಭಾಗವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ ಎಂದು ಡಾ. ಅಂಬೇಡ್ಕರ್ ಪೀಪಲ್ ಪಾರ್ಟಿಯ ರಾಜ್ಯಾಧ್ಯಕ್ಷ ಎಂ.ಸಿ ಕೃಷ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದ 17ನೇ ವಿಧಿ ಪ್ರಕಾರ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. 1955ರ ಅಸ್ಪೃಶ್ಯತೆ ಅಪರಾಧಗಳ ಕಾಯಿದೆಯು, 1976ರಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆ ಕಾಯಿದೆ ಎಂದು ಪುನರ್ ನಾಮಕರಣಗೊಂಡು ಚಾಲ್ತಿಯಲ್ಲಿದೆ. ಸಮಾಜದ ಮನೋಭಾವನೆಗಳಲ್ಲಿ ಬದಲಾವಣೆಗಳಾಗಿಲ್ಲ ಎಂಬುದಕ್ಕೆ ಪ್ರಸಕ್ತ ವಿದ್ಯಮಾನಗಳೇ ದೊಡ್ಡ ಉದಾಹರಣೆ. ಹರಪನಹಳ್ಳಿ ತಾಲ್ಲೂಕು ಅರಸಿಕೇರಿ ಹೋಬಳಿ ಚಿಕ್ಕಮೇಗಳಗೆರೆ ಗ್ರಾಮದಲ್ಲಿ ದೇವಸ್ಥಾನಗಳಿಗೆ ಪ್ರವೇಶವಿಲ್ಲ, ಹೋಟೆಲ್‍ಗಳಿಗೆ ನಿರಾಕರಣೆ ಇದೆ, ಕಟಿಂಗ್ ಶಾಪ್‍ಗೆ ನಿರ್ಬಂಧವಿದೆ. ಅಲ್ಲದೇ ಪರಿಶಿಷ್ಟ ಜಾತಿ ಸಮುದಾಯದವರು ಅವರ ಬೀದಿಗೆ ಸಂಬಂಧಪಟ್ಟ ಜಾಗದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೇಲ್ವರ್ಗದವರು ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಎ.ಸಿ. ಯವರಿಗೆ, ತಹಶೀಲ್ದಾರ್‌ಗೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಇಒ ರವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಚಿಕ್ಕಮೇಗಳಗೆರೆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ತಪ್ಪಿತಸ್ಥರ ವಿರುದ್ಧ ವಿಜಯನಗರ ಜಿಲ್ಲಾಡಳಿತ 1955ರ ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯಡಿ ಕೇಸ್ ದಾಖಲು ಮಾಡಿಕೊಂಡು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಆ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಡಾ. ಅಂಬೇಡ್ಕರ್ ಪೀಪಲ್ ಪಾರ್ಟಿ ಆಗ್ರಹಪಡಿಸುತ್ತದೆ.
ವಿಜಯನಗರ ಜಿಲ್ಲೆಯಲ್ಲಿ ವಿವಿಧ ರೀತಿಯಲ್ಲಿ ಅಸ್ಪೃಶ್ಯತೆ ಜೀವಂತ ವಾಗಿದೆ ಎನ್ನುವುದು ಗೊತ್ತಾಗುತ್ತದೆ. ಭಾರತ ಸಂವಿಧಾನದ ಆಶಯದಂತೆ ಹಾಗೂ ಕಾನೂನುಗಳನ್ನು ಪಾಲಿಸುವುದರಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಇಡೀ ಜಿಲ್ಲೆಯ ಸಮೀಕ್ಷೆ ಮತ್ತು ಮಾಹಿತಿ ಸಂಗ್ರಹಣೆ ಆಧಾರದ ಮೇಲೆ ಸಾಮಾಜಿಕ ಪಿಡುಗು ಅಸ್ಪೃಶ್ಯತೆ ಆಚರಣೆಯನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಮಾಡದೇ ಹೋದರೆ ಜಿಲ್ಲಾಡಳಿತವನ್ನೇ ಹೊಣೆಗಾರರನ್ನಾಗಿ ಮಾಡಿ, ಎಸ್ಪಿ-ಡಿಸಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಂಟೆಪ್ಟ್ ಪಿಟಿಸಿಎಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಪೀಪಲ್ ಪಾರ್ಟಿಯ ಸಂಸ್ಥಾಪಕ ದೇವ ಮಿತ್ರ ರಾಯಚೂರು, ರಾಜ್ಯಾಧ್ಯಕ್ಷ ಮಾರುತಿರಾವ್ ಜಂಬಗಾ, ಇಂದು ಸಂಜೆ ದಾವಣಗೆರೆ ಜಿಲ್ಲಾ ವರದಿಗಾರ ಎಂ.ಹೆಚ್ ರಾಜು, ವಕೀಲರಾದ ಚಿಕ್ಕಮೇಗಳಗೆರೆ ರೇವಣಸಿದ್ದಪ್ಪ, ಪ್ರಭಾಕರ್, ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.