ಧರ್ಮ ಮಾರ್ಗದಲ್ಲಿ ನಡೆದರೆ ಮನಸ್ಸಿಗೆ ಶಾಂತಿ

ಜಗಳೂರು: ಹಿರೇಮಲ್ಲನಕೆರೆ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಅಭಿಮತ

ಜಗಳೂರು, ಡಿ.26-  12ನೇ ಶತಮಾನದಲ್ಲಿನ  ಶಿವ ಶರಣರು ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರು ಹಾಕಿದ ನ್ಯಾಯ ಮತ್ತು ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಹೂವಿನಹಡಗಲಿ ತಾಲ್ಲೂಕು ಹಿರೇಮಲ್ಲನಕೆರೆ ವಿರಕ್ತಮಠದ ಶ್ರೀ ಮ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆಯ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸರ್ವಧರ್ಮ ಸಮನ್ವಯ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ನೀರಿನಿಂದ ಹುಟ್ಟುವ ಉಪ್ಪು, ಆನೆಕಲ್ಲು ಕರಗುತ್ತದೆ. ಆದರೆ ಅದೇ ನೀರಿನಿಂದ ಹುಟ್ಟುವ ಮುತ್ತು ಎಂದಿಗೂ ಕರಗುವುದಿಲ್ಲ. ಇದರರ್ಥ ಧರ್ಮದ ಹಾದಿಯಲ್ಲಿ ಸಾಗುವವರಿಗೆ ನೆಮ್ಮದಿ, ಶಾಂತಿ ದೊರೆಯಲಿದೆ ಎಂಬುದಾಗಿದೆ ಎಂದು ತಿಳಿಸಿದರು.  

ಚಿತ್ರದುರ್ಗದ ಮೌಲಾನಾ ಮಹಮ್ಮದ್ ಅಜರ್‌ ಅಲಿ ಮಾತನಾಡಿ, ಎಲ್ಲಿಯ ತನಕ ನಾವು ಮನುಷ್ಯರಾಗುವುದಿಲ್ಲವೋ, ಅಲ್ಲಿಯವರೆಗೆ ನೆಮ್ಮದಿ, ಶಾಂತಿ ದೊರೆಯುವುದಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಸೇರಿದಂತೆ  ಎಲ್ಲಾ  ಧರ್ಮಗಳ ಸಾರ ಒಂದೇ ಆಗಿದೆ ಎಂದರು.

ಶಿವಮೊಗ್ಗದ  ಮೌಂಟ್  ಕಾರ್ಮೆಲ್  ಶಾಲೆಯ ವ್ಯವಸ್ಥಾಪಕ ವಂ.ಫಾ.ಜೆರೊಮ್ ಮೊರಸ್ ಮಾತನಾಡಿ, ಏಕತೆಯನ್ನು  ಕಾಪಾಡುವುದರಿಂದ ಹಾಗೂ ಉತ್ತಮ ಹಾದಿಯಲ್ಲಿ ನಡೆಯುವುದರಿಂದ ಶಾಂತಿ ದೊರೆಯಲಿದೆ. 

ದೇಶದಲ್ಲಿ ಶರಣರು, ಸಂತರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮಾನವ ರೂಪದಲ್ಲಿ ಜನಿಸಿ ಭೂಮಿಗೆ ಬಂದು ಜನರನ್ನು ಶಾಂತಿ ಮಾರ್ಗದಲ್ಲಿ ನಡೆಯುವಂತೆ ಮಾಡಿದರು ಏಸು ಕ್ರಿಸ್ತ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣಬೂರು ಕೊಟ್ರೇಶ್, ತಾಲ್ಲೂಕು ಸಂಘದ ಅಧ್ಯಕ್ಷ ಚಿದಾನಂದ, ಕರವೇ ಅಧ್ಯಕ್ಷ ಮಹಾಂತೇಶ್, ಭೀಮಾ ಸೇನೆಯ ಜಿಲ್ಲಾಧ್ಯಕ್ಷ ಧನ್ಯಕುಮಾರ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಡಿಎಸ್‌ಎಸ್ ಸಂಚಾ ಲಕ ಸತೀಶ್, ತಾಲ್ಲೂಕು ಆಶಾ ಕಾರ್ಯ ಕರ್ತೆಯರ ಅಧ್ಯಕ್ಷೆ ಮಾರಕ್ಕ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಅರವಿಂದ, ಧರ್ಮಸ್ಥಳ ಗ್ರಾ.ಯೋಜನೆಯ ತಾಲ್ಲೂಕು ಸಂಚಾಲಕ ಜನಾರ್ದನ ಮುಂತಾದವರು ಹಾಜರಿದ್ದರು.

error: Content is protected !!