ಬಿಜೆಪಿ ಸರ್ಕಾರದಿಂದ ರೈತರಿಗೆ ಮಹತ್ವಪೂರ್ಣ ನಿರ್ಣಯ

ದಾವಣಗೆರೆ, ಡಿ.22- ಬೆಳೆಹಾನಿ ಪರಿಹಾರ ಕುರಿತಂತೆ ಮಹತ್ವದ ನಿರ್ಣಯ ಕೈಗೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ರೈತಪರ ಎಂಬುದನ್ನು ಸಾಬೀತು ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 10 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ 969 ಕೋಟಿ ರೂ.ಪರಿಹಾರ ವಿತರಣೆಗೆ ಸರ್ಕಾರ ಮುಂದಾಗಿದೆ. ಒಣ ಬೇಸಾಯ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೆ ಹಿಂದಿನ ಸರ್ಕಾರಗಳು ಕೇವಲ 6800 ರೂ. ಗಳನ್ನು ಮಾತ್ರ ನೀಡುತ್ತಿದ್ದವು.

ಇದೀಗ ಬಸವರಾಜ್ ಬೊಮ್ಮಾಯಿ ಸರ್ಕಾರ 6800 ರೂ. ಗಳ ಜೊತೆಗೆ 6800  ರೂ. ಗಳನ್ನು ಒಟ್ಟು 13, 600 ರೂ.ಗಳನ್ನು ನೀಡಲು ತೀರ್ಮಾನಿಸಿದೆ ಎಂದರು.

ನೀರಾವರಿ ಪ್ರದೇಶದ 1 ಹೆಕ್ಟೇರ್ ಬೆಳೆ ಹಾನಿಗೆ ನಿಗದಿಯಾಗಿದ್ದ 13,500 ರೂ.ಗಳೊಂದಿಗೆ ಹೆಚ್ಚುವರಿಯಾಗಿ 11,500 ರೂ.ಗಳನ್ನು ಒಟ್ಟು 25,000 ರೂ. ಬೆಳೆಹಾನಿ ಪರಿಹಾರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಒಟ್ಟು 12.69 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರತಿ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೆ ಹಾಲಿ ನಿಗದಿಯಾಗಿದ್ದ 18000 ರೂ.ಗಳ ಜೊತೆಗೆ 10000 ರೂ. ಒಟ್ಟು 28000 ರೂ.ಗಳನ್ನು ನೀಡಲು ಸರ್ಕಾರ ಮುಂದಾಗಿದೆ. ರೈತರ ಮಕ್ಕಳಿಗೆ ಪಿಯುಸಿ, ಐಟಿಐ ಅಥವಾ ತತ್ಸಮಾನ ತರಗತಿಗಳಲ್ಲಿ ಓದುತ್ತಿರುವ ಬಾಲಕ ರಿಗೆ 2500, ಬಾಲಕಿಯರಿಗೆ 3000 ರೂ., ಪದವಿ ವಿದ್ಯಾರ್ಥಿಗಳಿಗೆ 5000, ವಿದ್ಯಾರ್ಥಿನಿಯರಿಗೆ 5500 ರೂ.ಗಳನ್ನು, ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ 7,500 ಹಾಗೂ ವಿದ್ಯಾರ್ಥಿನಿಯರಿಗೆ 8000 ರೂ., ವೈದ್ಯಕೀಯ ವಿದ್ಯಾರ್ಥಿಗಳಿಗೆ 10000,  ವಿದ್ಯಾರ್ಥಿನಿಯರಿಗೆ 11000 ರೂ. ಶಿಷ್ಯ ವೇತನ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಮುಖಂಡರಾದ ಡಿ.ಎಸ್. ಶಿವಶಂಕರ್, ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್. ಜಗದೀಶ್, ವಿಶ್ವಾಸ್ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!