ಎಂಇಎಸ್ ನಿಷೇಧಕ್ಕೆ ಎಸ್ಸೆಸ್, ಎಸ್ಸೆಸ್ಸೆಂ ಆಗ್ರಹ

ದಾವಣಗೆರೆ, ಡಿ.22-  ಇತ್ತೀಚೆಗೆ ಎಂ.ಇ.ಎಸ್ ಪುಂಡರು ಸಂಗೊಳ್ಳಿ ರಾಯಣ್ಣನ  ಪ್ರತಿಮೆ ವಿರೂಪಗೊಳಿಸಿ, ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದಿರುವುದನ್ನು ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರು ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಕಾರಣವಾಗಿರುವ ಎಂಇಎಸ್ ಸಂಘ ಟನೆಯನ್ನು ನಿಷೇಧಿಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಅತಿರೇಕದ ವರ್ತನೆಗಳಿಂದ ಕನ್ನಡಿಗರು ರೋಸಿ ಹೋಗಿದ್ದು ದೇಶ, ಭಾಷೆ ಮೀರಿ ತಮ್ಮ ಸಾಧನೆ ತೋರಿದ ಸಂಗೊಳ್ಳಿ ರಾಯಣ್ಣ ಮತ್ತು ಬಸವಣ್ಣನವರನ್ನು ಅವಹೇಳನ ಮಾಡಿರುವುದು ಅಕ್ಷಮ್ಯ ಅಪರಾಧ. ಇದರ ಜೊತೆಗೆ ಕನ್ನಡ ಬಾವುಟವನ್ನು ಸುಟ್ಟುಹಾಕಿದ ಪುಂಡರ ವರ್ತನೆಯನ್ನು ಖಂಡಿಸುತ್ತಿದ್ದು, ಬೆಂಗಳೂರಿನಲ್ಲಿ ಕೆಲವು ಕಿಡಿಗೇಡಿಗಳು ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಖಂಡನೀಯ ಎಂದಿದ್ದಾರೆ.

 ಎಲ್ಲಾ ಭಾಷಿಕರು, ಧರ್ಮದವರಿಗೆ ಸಮಾನವಾಗಿ ಬದುಕುವ ಅವಕಾಶವನ್ನು ನಮ್ಮ ಸಂವಿಧಾನ ಕಲ್ಪಿಸಿದ್ದು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಯಾರು ನಡೆದುಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

error: Content is protected !!