ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ 19 ಲಕ್ಷ ರೂ. ಲಾಭ

ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿ ಅಧ್ಯಕ್ಷ ಎಲ್.ಬಿ.ಹಾಲೇಶನಾಯ್ಕ

ಹರಪನಹಳ್ಳಿ, ಡಿ.20- ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಷೇರುದಾರ ಸದಸ್ಯರು ನಿಧನ ಹೊಂದಿದರೆ ಅವರ ಕುಟುಂಬಕ್ಕೆ  ನೀಡುವ ಸಹಾಯ ಧನ ಹೆಚ್ಚಳ ಮಾಡಲು ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ  ತೀರ್ಮಾನ ಕೈಗೊಳ್ಳಲಾಯಿತು.

ಈವರೆಗೂ ನಿಧನ ಹೊಂದಿದ ಸಂಘದ ಸದಸ್ಯರಿಗೆ 2 ಸಾವಿರ ರೂ. ಗಳನ್ನು ನೀಡಲಾಗುತ್ತಿತ್ತು. ಇನ್ನೂ ಮುಂದೆ 4 ಸಾವಿರ ರೂ.ಗಳನ್ನು  ನೀಡಲು ಸದಸ್ಯರ ಸಲಹೆ ಮೇರೇಗೆ ಒಪ್ಪಿಗೆ ನೀಡಲಾಯಿತು.

2021 ನೇ ಸಾಲಿನಲ್ಲಿ ರಸಗೊಬ್ಬರ ಮತ್ತು ಪೆಟ್ರೋಲ್ ಬಂಕ್ ಉತ್ಪನ್ನಗಳನ್ನು ಸೇರಿಸಿ ಒಟ್ಟು 9 ಕೋಟಿಗೂ ಹೆಚ್ಚು ವ್ಯವಹಾರ ಮಾಡಿ, 19.43 ಲಕ್ಷ ರೂ.ಗಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಲ್.ಬಿ. ಹಾಲೇಶನಾಯ್ಕ ತಿಳಿಸಿದರು.

ಬಿಡಿಪಿ ಯೋಜನೆಯಲ್ಲಿ 11.33 ಲಕ್ಷ ರು.ಗಳ ಲಾಭ ಗಳಿಸಿದೆ, ಇನ್ನು ಮುಂದೆ ಅನಿಯಂತ್ರಿತ ಆಹಾರ ಧಾನ್ಯ ಮತ್ತು ಸಗಟು ನಿಯಂತ್ರಿತ ಪಡಿತರ ಹಾಗೂ ಇತರೆ ವ್ಯವಹಾರ ಪ್ರಾರಂಭಿಸಲು ಪ್ರಯತ್ನಿಸಲಾಗಿದೆ ಎಂದು ಅವರು ಹೇಳಿದರು.

ಮಾಜಿ ಅಧ್ಯಕ್ಷ ಬಿ.ಕೆ.ಪ್ರಕಾಶ್ ರವರು ಸಂಘದ ಸದಸ್ಯತ್ವ ಉಳಿಸಿಕೊಳ್ಳಲು ಈಗಿರುವ ವ್ಯವಹಾರದ ಮೊತ್ತವನ್ನು ಕಡಿಮೆ ಮಾಡಲು ಸದಸ್ಯರ ಸಲಹೆ ಮೇರೆಗೆ ನಿರ್ಣಯ ಕೈಗೊಂಡು ಪ್ರಸ್ಥಾವನೆಯನ್ನು  ಸರ್ಕಾರಕ್ಕೆ ಕಳಿಸಿಕೊಡೋಣ ಎಂದರು. 

ಟಿಎಪಿಸಿಎಂಎಸ್‌ನ ಪ್ರಭಾರಿ ಕಾರ್ಯದರ್ಶಿ ಎಚ್. ತಿರುಪತಿ ಅವರು ಸಭೆಯ ಕಾರ್ಯ ಕಲಾಪಗಳನ್ನು ಸದಸ್ಯರಿಗೆ ತಿಳಿಸಿ ಒಪ್ಪಿಗೆ ಕೇಳಿದರು. ಈ ಸಂದರ್ಭದಲ್ಲಿ  ಗೃಹರಕ್ಷಕದಳದ ಪೂಜಾರ ವಾಗೀಶ, ವಿಪ್ರ ಸಮಾಜದ ಮುಖಂಡ ಕಟ್ಟಿ ಆನಂದಪ್ಪ ಅವರುಗಳನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ತಳವಾರ ಮಂಜಪ್ಪ, ನಿರ್ದೆಶಕ ಕುಲುಮಿ ಅಬ್ದುಲ್ಲಾ, ಪಿ. ಪ್ರೇಮಕುಮಾರ, ಗಿಡ್ಡಳ್ಳಿ ನಾಗರಾಜ, ಬಿ.ರೇವಣಸಿದ್ದಪ್ಪ, ಎಚ್ .ತಿಮ್ಮನಾಯ್ಕ, ಡಿ.ಜಿ ಪ್ರಕಾಶ್ ಗೌಡ, ಮಂಜುಳಾ ಗುರುಮೂರ್ತಿ, ಎಚ್ .ನೇತ್ರಾವತಿ, ಎಂ.ವಿ.ಕೃಷ್ಣಕಾಂತ, ಕೆ. ವಿರುಪಾಕ್ಷಪ್ಪ, ಯು. ಹನುಮಂತಪ್ಪ, ಎ. ಬಸವರಾಜಪ್ಪ  ಸೇರಿದಂತೆ ಇತರರು ಭಾಗವಹಿಸಿದರು. 

error: Content is protected !!