ಆಧುನಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಪಥದಲ್ಲಿ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್‌

49ನೇ ಮಹಾಸಭೆಯಲ್ಲಿ ಅಧ್ಯಕ್ಷ ಎನ್‌.ಎ. ಮುರುಗೇಶ್‌

ದಾವಣಗೆರೆ, ಆ.29- ಅಭಿವೃದ್ಧಿ ಹೊಂದುತ್ತಿರುವ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯ ಒದಗಿಸುವ ಪೈಪೋಟಿಯಲ್ಲಿ ಯಶಸ್ಸು ಕಂಡಿರುವ ದಾವಣಗೆರೆ-ಹರಿಹರ ಅರ್ಬನ್‌ ಸಹಕಾರ ಬ್ಯಾಂಕು ಸಾಲ ವಿಲೇವಾರಿ, ವಸೂಲಾತಿ ಎರಡರಲ್ಲೂ ಹಿನ್ನಡೆ ಕಾಣದೇ 31.03.2021ರ ವರ್ಷಾಂತ್ಯಕ್ಕೆ ರೂ. 7 ಕೋಟಿ 28 ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎನ್‌.ಎ. ಮುರುಗೇಶ್‌ ಹೇಳಿದರು.

ಅವರಿಂದು ಬ್ಯಾಂಕಿನ 49ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ವಿಡಿಯೋ ಕಾನ್ಫರೆನ್ಸ್‌ ಮುಖಾಂತರ ನೆರವೇರಿಸಿ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಕಳೆದ ಸಾಲಿನಲ್ಲಿ 242 ಕೋಟಿ 93 ಲಕ್ಷ ದಷ್ಟಿದ್ದ ಠೇವಣಾತಿ ಮೊತ್ತವು ಪ್ರಸಕ್ತ ಸಾಲಿನಲ್ಲಿ 32 ಕೋಟಿ 64 ಲಕ್ಷ ಏರಿಕೆ ಕಂಡು ಈಗ 275 ಕೋಟಿ 57 ಲಕ್ಷ ರೂಪಾಯಿಯಾಗಿದ್ದು ಇದು ಬ್ಯಾಂಕಿನ ಮೇಲೆ ಗ್ರಾಹಕರಿಗಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಇದೇ ರೀತಿ ಸಾಲ ಮತ್ತು ಮುಂಗಡಗಳಲ್ಲೂ ಮುಂದಿದ್ದು, 194 ಕೋಟಿ 98 ಲಕ್ಷವಿದ್ದು 223 ಕೋಟಿ 54 ಲಕ್ಷ ತಲುಪಿದೆ. ಸಾಲ ವಿಲೇವಾರಿ ಅಷ್ಟೇ ಅಲ್ಲ ವಸೂಲಾತಿಯಲ್ಲೂ ಬ್ಯಾಂಕು ಸಮರ್ಥವಾಗಿದೆ ಎಂದರು.

ಬ್ಯಾಂಕಿನ ಆಪದ್ಧನ ಮತ್ತು ಇತರೆ ನಿಧಿಗಳ ಪ್ರಮಾಣವೂ ರೂ. 41 ಕೋಟಿ 5 ಲಕ್ಷದಿಂದ 45 ಕೋಟಿ 63 ಲಕ್ಷ ತಲುಪಿದ್ದು, ರೂ. 4 ಕೋಟಿ 57 ಲಕ್ಷ ಏರಿಕೆ ಹೊಂದಿದೆ ಎಂದರು. ಬ್ಯಾಂಕಿನ ಹೂಡಿಕೆಗಳ ಪ್ರಮಾಣದಲ್ಲೂ 83 ಕೋಟಿ 40 ಲಕ್ಷವಿದ್ದು ಇದರಲ್ಲಿ ಶೇಕಡಾ 66 ರಷ್ಟು ಕೇಂದ್ರ ಸರ್ಕಾರದ ಭದ್ರತೆಗಳಲ್ಲೂ ಶೇಕಡಾ 34 ರಷ್ಟು ರಾಜ್ಯ ಸರ್ಕಾರದ ಭದ್ರತೆಗಳಲ್ಲೂ ತೊಡಗಿಸಲಾಗಿದೆ ಎಂದರು.

31.03.2021 ಕ್ಕೆ ಅಂತ್ಯವಾಗುವ ಆರ್ಥಿಕ ವರ್ಷದಲ್ಲಿ ಬ್ಯಾಂಕು 7 ಕೋಟಿ 28 ಲಕ್ಷ ರುಪಾಯಿ ಲಾಭ ಗಳಿಸಿದ್ದು ಇದರಲ್ಲಿ ರೂ. 1 ಕೋಟಿ 49 ಲಕ್ಷ ಆದಾಯ ತೆರಿಗೆ ಪಾವತಿಸಿ ನಂತರ ನಿಯಮಬದ್ಧ ನಿಧಿಗಳನ್ನು ಕಲ್ಪಿಸಿದ ನಂತರ 4 ಕೋಟಿ 32 ಲಕ್ಷ ರೂಪಾಯಿಗಳ ನಿವ್ವಳ ಲಾಭ ಹೊಂದಿದ್ದು, ಪ್ರಸಕ್ತ ವರ್ಷ ಶೇಕಡಾ 13 ರಂತೆ ಲಾಭಾಂಶ ನೀಡಲು ತೀರ್ಮಾನಿಸಿದ್ದು ಇದಕ್ಕೆ ರಿಸರ್ವ್‌ ಬ್ಯಾಂಕಿನ ಅನುಮತಿ ನಿರೀಕ್ಷಿಸುತ್ತಿದೆ ಎಂದರು.

ಕಳೆದ ಸಾಲಿನಲ್ಲಿ ದೈವಾಧೀನರಾದ ಸದಸ್ಯರ ವಾರಸುದಾರರಿಗೆ ರೂ. 15 ಲಕ್ಷ 35 ಸಾವಿರ ರೂಪಾಯಿ ಪರಿಹಾರ ಮೊತ್ತ ನೀಡಿರುವುದಲ್ಲದೇ ಆರಾಧ್ಯ ಆಯುಷ್ಮಾನ್‌ ನಿಧಿಯಿಂದ ಸದಸ್ಯರ ವಿವಿಧ ಆರೋಗ್ಯ ಚಿಕಿತ್ಸೆಗಾಗಿ 74 ಸದಸ್ಯರಿಗೆ ರೂ. 11 ಲಕ್ಷ ರೂಪಾಯಿ ಧನ ಸಹಾಯ ನೀಡಲಾಗಿದೆ ಎಂದರಲ್ಲದೇ ಬ್ಯಾಂಕಿನ ಸಿಬ್ಬಂದಿಗೆ ಆರೋಗ್ಯ ವಿಮೆ ಸಹ ಮಾಡಿಸಲಾಗಿದೆ ಎಂದರು.

ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆಯು ತಮ್ಮ ಬ್ಯಾಂಕಿನಲ್ಲಿ ಉತ್ತಮವಾಗಿ ಅಳವಡಿಕೆಯಾಗಿದ್ದು, ಸೈಬರ್‌ ಸುರಕ್ಷತೆಯನ್ನೂ ಎಚ್ಚರಿಕೆಯಿಂದ ಪಾಲಿಸಲಾಗುತ್ತಿದೆ ಎಂದರು.

ಕೊರೊನಾ ಕೋವಿಡ್‌ ಸಾಂಕ್ರಾಮಿಕದ ಮುಗ್ಗಟ್ಟಿನ ಸ್ಥಿತಿಯಲ್ಲೂ ಬ್ಯಾಂಕು ಉತ್ತಮವಾಗಿ ಮುನ್ನಡೆಯುತ್ತಿದ್ದು ಬರುವ ವರ್ಷದ ವೇಳೆಗೆ ಮಹಾಮಾರಿ ತೊಲಗಿ ಬ್ಯಾಂಕ್‍ನ ಯಶಸ್ವಿ 50 ವರ್ಷಗಳ ಸುವರ್ಣ ಮಹೋತ್ಸವವನ್ನು ವಿಶೇಷವಾಗಿ ಆಚರಿಸಬೇಕೆಂಬ ಅಭಿಲಾಷೆ ಇದೆ ಎಂದ ಎನ್.ಎ ಮುರುಗೇಶ್ ನಿರ್ದೇಶಕ ಮಂಡಳಿ ಸದಸ್ಯರು, ಬ್ಯಾಂಕಿನ ಸರ್ವಸದಸ್ಯರು, ಗ್ರಾಹಕರ, ಸಿಬ್ಬಂದಿಯ, ಸಹಕಾರ ಇಲಾಖೆಯ ಅಧಿಕಾರಿಗಳ ಮಾರ್ಗ ದರ್ಶನ, ಸಹಕಾರವನ್ನು ಸ್ಮರಿಸಿದರು. 

ಇದೇ ಸಂದರ್ಭದಲ್ಲಿ ಮೊಬೈಲ್‍ ಆಪ್ ಮುಂತಾದ ಅತ್ಯಾಧುನಿಕ ಸೌವಲತ್ತುಗಳನ್ನು ಸಭೆಯಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.

ಮಹಾಸಭೆಯ ನಿರೂಪಣೆಯನ್ನು ಹಿರಿಯ ಪತ್ರಕರ್ತ ಹೆಚ್‌.ಬಿ. ಮಂಜುನಾಥ್ ನೆರವೇರಿಸಿದರು. ಸಂಗೀತಾ ರಾಘವೇಂದ್ರ ಹಾಗೂ ಬ್ಯಾಂಕಿನ ನಿರ್ದೇಶಕಿ ಶ್ರೀಮತಿ ಶಶಿಕಲಾ ರುದ್ರಯ್ಯ ತಂಡದವರು ಪ್ರಾರ್ಥನೆ ಹಾಡಿದರು. 

ಕಳೆದ ಸಾಲಿನಲ್ಲಿ ದೈವಾಧೀನರಾದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ದಿ.ಎನ್‍.ಎಂ.ಜೆ.ಬಿ. ಆರಾಧ್ಯರ ಭಾವಚಿತ್ರಕ್ಕೆ ಪುಷ್ಪಂಜಲಿ, ಗೌರವ ಸಲ್ಲಿಸಿ, ದೀಪ ಬೆಳಗಿ ಸಭಾ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಶಂಕರ ಖಟಾವ್‍ಕರ್ ಸ್ವಾಗತಿಸಿದರು. ಕಳೆದ ಸಾಲಿನ ನಡಾವಳಿಕೆ ವಾರ್ಷಿಕ ವರದಿ ವಾಚನ, ಅಂಗೀಕಾರ ಸ್ವೀಕಾರವನ್ನು ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ನಿರ್ವಹಿಸಿದರೆ, ನಿರ್ದೇಶಕ ಎ.ಹೆಚ್‌. ಕುಬೇರಪ್ಪ ನಿರ್ದೇಶಕ ಮಂಡಳಿಯ ವರದಿ ವಾಚನ ಮಾಡಿದರು. 

ಲಾಭ-ನಷ್ಟ, ಅಢಾವೆ ಪತ್ರಿಕೆ, ಆಡಿಟ್ ವರದಿಗಳ ಪ್ರಸ್ತುತಿಯನ್ನು ಎಸ್.ಕೆ ವೀರಣ್ಣ ನಿರ್ವಹಿಸಿ ಅನುಮೋದನೆ ಪಡೆದರೆ ಲಾಭ ವಿಲೇವಾರಿ ಪಟ್ಟಿಯನ್ನು ರಮಣ್‍ಲಾಲ್ ಪಿ. ಸಂಘವಿ ನೆರವೇರಿಸಿದರು. ಮುಂಗಡ ಪತ್ರದ ಮಂಡನೆಯನ್ನು ಕಿರುವಾಡಿ ವಿ.ಸೋಮಶೇಖರ್‌ ಮಾಡಿದರು. ಉಪನಿಯಮಗಳ ತಿದ್ದುಪಡಿಗೆ ಅನುಮೋದನೆ ಪಡೆಯಲಾಯಿತು. 

ನಿರ್ದೇಶಕ  ಮಂಡಳಿ ಸದಸ್ಯರುಗಳಾದ ಶ್ರೀಮತಿ ಜಯಮ್ಮ, ಪರಶುರಾಮಪ್ಪ, ಶ್ರೀಮತಿ ಶಶಿಕಲಾ ರುದ್ರಯ್ಯ, ಎಸ್‌.ಕೆ. ಪ್ರಭು ಪ್ರಸಾದ್, ಕೆ.ಎಂ. ಜ್ಯೋತಿ ಪ್ರಕಾಶ್, ಬಿ. ನಾಗೇಂದ್ರಚಾರಿ, ಪಿ.ಹೆಚ್‍. ವೆಂಕಪ್ಪ, ಕೆ.ಹೆಚ್‍.ಶಿವಯೋಗಪ್ಪ, ಶ್ರೀಮತಿ ಅನಿಲಾ ಇಂದೂಧರ ನಿಶಾನಿ ಮಠ್, ಎ. ಕೊಟ್ರೇಶ್‍, ಆರ್.ವಿ ಸಿರಸಾಲಿಮಠ್‌, ಕಿರಣ್‌ ಆರ್‍.ಶೆಟ್ಟಿ, ಜಿ.ಕೆ. ವೀರಣ್ಣ, ಉಮಾ ವಾಗೀಶ್‍, ಕೆ.ಎಂ. ಬಸವರಾಜ್‍, ಶ್ರೀಮತಿ ಜಿ.ಸಿ ವಸುಂಧರ, ಶ್ರೀಮತಿ ಕೆ.ಎಂ ಶೈಲಾ ಉಪಸ್ಥಿತರಿದ್ದರು.

ವಿಶೇಷ ಅತಿಥಿಗಳಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್, ಲೆಕ್ಕ ಪರಿಶೋಧಕ ಉಮಾಪತಯ್ಯ, ಬಿ.ಹೆಚ್. ಪರಶುರಾಮಪ್ಪ, ಕಂದನಕೋವಿ ವೀರಣ್ಣ, ಯುನೈಟೆಡ್‌ ಇಂಡಿಯಾ ಇನ್ಸೂರೆನ್ಸ್‍ನ ನಿವೃತ್ತ ಅಧಿಕಾರಿ ಎನ್‍.ಎಂ.ಎಸ್‌. ಜಯಪ್ರಕಾಶ್, ನಿಂಚನ ಶಿಕ್ಷಣ ಸಂಸ್ಥೆಯ ಲಿಂಗಪ್ಪ ಮುಂತಾದವರು ಆಗಮಿಸಿದ್ದರು. ಎಂ.ಶಿವಲಿಂಗಸ್ವಾಮಿ ವಂದಿಸಿದರು.

error: Content is protected !!