ಸಮ ಸಮಾಜ ನಿರ್ಮಾಣ ಶರಣ ಸಾಹಿತ್ಯ ಪರಿಷತ್‌ನ ಆಶಯವಾಗಲಿ

ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕರ ದಿನಾಚರಣೆಯಲ್ಲಿ ಡಾ. ಎಂ.ಜಿ. ಈಶ್ವರಪ್ಪ

ದಾವಣಗೆರೆ, ಆ. 29- ಸಮ ಸಮಾಜ, ಸುಖಿ ಸಮಾಜ ನಿರ್ಮಾಣ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಎಲ್ಲಾ ಸಂಘ-ಸಂಸ್ಥೆಗಳ ಆಶಯವಾಗಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ  ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮಷ್ಟು ಶಿಕ್ಷಣ, ಜ್ಞಾನ ಪಡೆದವರು ಯಾರೂ ಇಲ್ಲ. `ಇವನಾರವ, ಇವನಾರವ ನೆಂದೆನಿಸದಿರಯ್ಯಾ’ ಎಂದು ಹೇಳಿದ ಬಸವಣ್ಣ, `ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರ ಬನ್ನಿ’ ಎಂದು ಹೇಳಿದ ಕುವೆಂಪು  ಹೀಗೆ ಹಲವಾರು ಕವಿಗಳು, ಶರಣರು ಸರಳವಾದ ಜ್ಞಾನ ಹಂಚಿದ್ದರೂ ಅದು ಜನರ ಮನಸ್ಸಿಗೆ ನಾಟುತ್ತಿಲ್ಲ. ಮನುಷ್ಯರು ಮನುಷ್ಯರಾಗಿ ಬಾಳಲು ಸಾಧ್ಯವಾಗದೇ ಇರುವುದು ಬೇಸರದ ಸಂಗತಿ ಎಂದರು.

ಪ್ರಸ್ತುತ ದಿನಗಳಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಶರಣರು ಹಾಗೂ ವಚನಗಳ ಬಗ್ಗೆ ಮತ್ತೆ ಮತ್ತೆ ಚರ್ಚೆ ನಡೆಯಬೇಕಿದೆ.  12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ, ಮಹಾಮನೆ ಸ್ಥಾಪಿಸುವ ಮೂಲಕ ಹೊಸ ಸಮಾಜ ನಿರ್ಮಿಸಿದಂತೆ ಮತ್ತೊಮ್ಮೆ ಅಂತಹ ಸಮಾಜ ನಿರ್ಮಿಸಲು ಸಾಧ್ಯವಾದರೆ ನಮ್ಮ ಜನ್ಮ ಸಾರ್ಥಕವಾದಂತೆ ಎಂದರು.

ಶರಣ ಸಾಹಿತ್ಯದಿಂದ ಶಿಸ್ತಿನ ಸಮಾಜ ಕಟ್ಟಲು ಸಾಧ್ಯವೇ ಎಂದು ಚರ್ಚಿಸಲು ಹಾಗೂ ಅದರ ಮನೋಭಾವ ಬೆಳೆಸಿಕೊಳ್ಳುವುದು ಸಂಘ-ಸಂಸ್ಥೆಗಳ ಜವಾಬ್ದಾರಿಯಾಗಿತ್ತು. ಅಂತಹದ್ದೊಂದು ಜವಾಬ್ದಾರಿಯನ್ನು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು 35 ವರ್ಷಗಳ ಹಿಂದೆಯೇ ಕಂಡು, ಅಖಿಲ ಭಾರತ ಮಟ್ಟದಲ್ಲಿ ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿ  ಜನರ ಮನಸ್ಸುಗಳ್ನು ಸುಸ್ಥಿರಗೊಳಿಸಲು ಸಾಧ್ಯವಾ ಎಂಬ ಪ್ರಯತ್ನ ಮಾಡಿದ್ದಾಗಿ ಈಶ್ವರಪ್ಪ ಹೇಳಿದರು.

ವೀರಶೈವ ಮಠಗಳು ದೇಶದ ಜನರಿಗೆ ಶಿಕ್ಷಣ ಕೊಡುವಲ್ಲಿ ಸಮರ್ಥವಾದ ಮಠಗಳಾಗಿವೆ. ಈ ಬಗ್ಗೆ ಹಲವು ಸಂಶೋಧನೆಗಳು ನಡೆದು ಮಹಾ ಪ್ರಬಂಧಗಳೂ ರಚನೆಯಾಗಿವೆ. ಯಾವ ಮಠಗಳು ಯಾವ ಜಾತಿಗೆ ಧರ್ಮಕ್ಕಾದರೂ ಸೇರಿರಬಹುದು. ಆದರೆ ವೀರಶೈವ ಧಾರ್ಮಿಕ ಕೇಂದ್ರಗಳು  ಮಾತ್ರ ಎಲ್ಲರಿಗೂ ಶಿಕ್ಷಣ ನೀಡುತ್ತಿವೆ. ಸುತ್ತೂರು ಮಠವು ರಾಜ್ಯ, ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಶಿಕ್ಷಣ ನೀಡುತ್ತಿರುವುದು ಶ್ಲ್ಯಾಘನೀಯ ಎಂದರು.

ನಿವೃತ್ತ ಪ್ರಾಂಶುಪಾಲ ಬಿ.ಬಿ. ಚಂದ್ರಶೇಖರ್ ಅವರು ಲಿಂಗೈಕ್ಯ ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕುರಿತು ಉಪನ್ಯಾಸ ನೀಡುತ್ತಾ, ರಾಜೇಂದ್ರ ಸ್ವಾಮೀಜಿಯವರು ಬಡವರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು ಎಂದರು.

ಮೈಸೂರಿನಲ್ಲಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು. ಈ ಮೂಲಕ ಸಮಾಜಕ್ಕೆ ಅವರು ಕೊಡುಗೆಯಾಗಬೇಕು ಎಂಬ ಕಾರಣಕ್ಕೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಅವರಿಗೆ ಅನ್ನ ದಾಸೋಹದ ಜತೆಗೆ ಜ್ಞಾನ ದಾಸೋಹ ನಡೆಸಿದರು. ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು ಶರಣ ವಿಚಾರಗಳನ್ನು ನಾಡಿನಾದ್ಯಂತ ಪಸರಿಸುವಂತೆ ಮಾಡಲು ಶರಣ ಸಾಹಿತ್ಯ ಪರಿಷತ್‌ ಸ್ಥಾಪಿಸಿದರು. 

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ಮಹಾಭಲೇಶ್ವರಗೌಡ್ರು ಉಪಸ್ಥಿತರಿದ್ದರು. ಪಂಕಜ ದಯಾನಂದ್ ನಿರೂಪಿಸಿದರು. ಎಸ್.ಎಂ. ತೋಟದ ಪ್ರಾರ್ಥಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎನ್.ಎಸ್. ರಾಜು ವಂದಿಸಿದರು.

error: Content is protected !!