ಅವರವರೇ ಅವರವರ ವ್ಯಕ್ತಿತ್ವದ ಶಿಲ್ಪಿಗಳು : ಮುರುಘಾ ಶರಣರು

ಅವರವರೇ ಅವರವರ ವ್ಯಕ್ತಿತ್ವದ ಶಿಲ್ಪಿಗಳು : ಮುರುಘಾ ಶರಣರು - Janathavaniಚಿತ್ರದುರ್ಗ, ಆ. 24 – ಅವರವರ ವ್ಯಕ್ತಿತ್ವದ ಶಿಲ್ಪಿಗಳು ಅವರವರೇ ಆಗಿರುತ್ತಾರೆ. ಅದನ್ನು ಯಾರೂ ಕಟೆದು ನಿಲ್ಲಿಸಲು ಸಾಧ್ಯವಿಲ್ಲ. ಶಿಲ್ಪಗಳನ್ನು ಕಟೆದು ನಿಲ್ಲಿಸಬಹುದು, ಆದರೆ ವ್ಯಕ್ತಿತ್ವಗಳನ್ನು ರೂಪಿಸುವುದು ಸುಲಭದ ಕೆಲಸವಲ್ಲ. ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳುವ ದಿಸೆಯಲ್ಲಿ ಗುರುಗಳ ಮಾರ್ಗದರ್ಶನವು ಒಂದಿಷ್ಟು ಪ್ರೇರಣೆ ನೀಡುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಿ.ವಿ.ಕೆ.ಎಸ್. ಲೇಔಟ್‍ನ ಸುರೇಶ್‍ಬಾಬು ಅವರ ಮನೆಯಲ್ಲಿ ನಡೆದ ನಿತ್ಯ ಕಲ್ಯಾಣ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ `ವ್ಯಕ್ತಿತ್ವ : ಅನಾವರಣಗೊಳಿಸುವ ಬಗೆ ಯಾವುದು?’ ಎಂಬ ವಿಷಯ ಚಿಂತನ ಕಾರ್ಯಕ್ರಮದಲ್ಲಿ ಶರಣರು ಆಶೀರ್ವಚನ  ನೀಡಿದರು.

ನಮಗೆ ಶರೀರ ಮತ್ತು ಶಾರೀರ ಇದೆ. ಶರೀರವನ್ನು ಸದಾ ಹಿಂಬಾಲಿಸುವುದು ನಮ್ಮ ನೆರಳು. ನೆರಳು ಹೇಗೆ ಶರೀರವನ್ನು ಹಿಂಬಾಲಿಸುತ್ತದೆಯೋ ಅದೇ ರೀತಿ ವ್ಯಕ್ತಿಯನ್ನು ಹಿಂಬಾಲಿಸುವುದು ವ್ಯಕ್ತಿತ್ವ. ಈ ಜಗತ್ತಿನಲ್ಲಿರುವ ಎಷ್ಟು ಕೋಟಿ ಜನಸಂಖ್ಯೆ ಇದೆಯೋ ಅಷ್ಟು ವ್ಯಕ್ತಿತ್ವಗಳಿವೆ. ಪ್ರತಿಯೊಬ್ಬರ ವ್ಯಕ್ತಿತ್ವವು ಒಬ್ಬರಂತೆ ಮತ್ತೊಬ್ಬರಲ್ಲಿ ಇರದೇ ಶಾರೀರಿಕವಾದ ವಿಭಿನ್ನತೆಯನ್ನು ಕಾಣುತ್ತೇವೆ ಎಂದು ವ್ಯಕ್ತಿ-ವ್ಯಕ್ತಿತ್ವದ ವಿಶ್ಲೇಷಣೆ ಮಾಡಿದರು.

ನಿರಂತರವಾಗಿ ಮಾನವನ ಆಂತರ್ಯದಲ್ಲಿ ಬೆಳೆಯುವಂತಹ ಪ್ರಕ್ರಿಯೆ ನಡೆದೇ ಇರುತ್ತದೆ. ವ್ಯಕ್ತಿಯಲ್ಲಿ ವ್ಯಕ್ತಿತ್ವದ ಬೆಳವಣಿಗೆ ಜೀವನದ ಕೊನೆಯವರೆಗೆ ಸಾಗಿರುತ್ತದೆ. ಹಾಗೆಯೇ, ಮಾನವನ ಒಳಗೆ ಮತ್ತು ಹೊರಗೆ ವ್ಯಕ್ತಿತ್ವವನ್ನು ಬೆಳೆಯದಂತೆ ನೋಡಿಕೊಳ್ಳುವಂತಹ ಸಂಗತಿಗಳೂ ಇರುತ್ತವೆ. ನಕಾರಾತ್ಮಕವಾದ ಅಜ್ಞಾನದ ಜಾಡನ್ನು ಹಿಡಿದಾಗ ಕತ್ತಲೆ ಆವರಿಸುತ್ತದೆ. `ಕತ್ತಲೆ ಪುರವ ಕಳ್ಳರು ಮುತ್ತಲು, ಪುರಪತಿ ಮುತ್ತಿಗೆಗೊಳಗಾದ’ ಎಂದು ತೋಂಟದ ಸಿದ್ಧಲಿಂಗ ಶ್ರೀಗಳು ಹೇಳುತ್ತಾರೆ. ಪ್ರತಿಯೊಬ್ಬರ ಆಂತರ್ಯದಲ್ಲಿ ಕತ್ತಲೆ ಆವರಿಸಲು ಪ್ರಲೋಭನೆ, ವಿಷಯಾಸಕ್ತಿ, ಅಜ್ಞಾನಗಳು ಕಾರಣವಾಗುತ್ತವೆ. ನಮ್ಮ ನಿಮ್ಮ ಶತ್ರುಗಳು ನಮ್ಮೊಳಗೇ ಇದ್ದಾರೆ. ಹೊರಗಿನ ಶತ್ರುಗಳನ್ನು ಜಯಿಸಲು ಸಾಧ್ಯವಿದೆ. ಆದರೆ ಅಂತರಂಗದಲ್ಲಿರುವ ಕಳ್ಳಕಾಕರು ನಮ್ಮ ಅಂತಃಸತ್ವವನ್ನು ದೋಚಿಬಿಡುತ್ತಾರೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಜ್ಞಾನೋದಯವಾಗಬೇಕು  ಎಂದು ಹೇಳಿದರು.

ಬಸವಾದಿ ಶರಣರು ಜೀವ ಕಾರುಣ್ಯದ ಬಗ್ಗೆ ಒತ್ತಿ ಒತ್ತಿ ಹೇಳುತ್ತಾರೆ. ಮಾನವ ಹೃದಯದಿಂದ ಕಾರುಣ್ಯವು ಹರಿಯುವಂತಹ ಪ್ರಕ್ರಿಯೆ ನಡೆಯಬೇಕಾಗಿದೆ. ಭಾವನೆ ಗಳ ಜೊತೆ ಮೆದುಳನ್ನು ಅರಳಿಸಿಕೊಳ್ಳಬೇಕು.  ಆಂತರ್ಯ ದಲ್ಲಿರುವಂತಹ ದಿವ್ಯಜ್ಞಾನ ನಮಗೆ ಮಾರ್ಗದರ್ಶನವನ್ನು ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. 

ಸಮ್ಮುಖ ವಹಿಸಿದ್ದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ವ್ಯಕ್ತಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಅಂತಹವರಿಗೆ ಸಮಾಜ ಬೆಲೆ ಕೊಡುತ್ತದೆ. ಒಬ್ಬ ವ್ಯಕ್ತಿಗೆ ವಿಶೇಷ ವ್ಯಕ್ತಿತ್ವವಾದ ಸರಳತೆ, ಸದ್ಗುಣಗಳು ಇಲ್ಲದೆ ಹೋದರೆ ಅದು ಬದುಕೇ ಅಲ್ಲ. ನಮ್ಮಲ್ಲಿರುವ ಸಂಸ್ಕಾರವನ್ನು ಬಿಡದೇ ಇತರರಿಗೆ ಮಾರ್ಗದರ್ಶನವಾಗಬೇಕು ಎಂದರು.

ನಿವೃತ್ತ ಅಭಿಯಂತರ ಚಂದ್ರಶೇಖರಯ್ಯ ಮಾತನಾಡಿದರು. ಶ್ರೀಮತಿ ರತ್ನಮ್ಮ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ದಾಸೋಹಿಗಳಾದ ಸುರೇಶ್‍ಬಾಬು ಸ್ವಾಗತಿಸಿದರು. ಎನ್.ಟಿ. ಲಿಂಗರಾಜು ನಿರೂಪಿಸಿದರು.

error: Content is protected !!