3ನೇ ಅಲೆ ಇರಲಿ, 2ನೇ ಅಲೆಯಲ್ಲೇ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಸೋಂಕು

ಏಪ್ರಿಲ್‌ 1 ರಿಂದ ಮೇ 25 ರವರೆಗೆ ಜಿಲ್ಲೆಯಲ್ಲಿ 10 ವರ್ಷದೊಳಗಿನ 546 ಮಕ್ಕಳಿಗೆ ಸೋಂಕು ತಗುಲಿದೆ

ಮಲೇಬೆನ್ನೂರು, ಮೇ 27- ಕೊರೊನಾದ 3ನೇ ಅಲೆ ಬಂದರೆ ಮಕ್ಕಳ ಮೇಲೆ ತೀವ್ರ ಇಲ್ಲವೇ ಹೆಚ್ಚಿನ ಪರಿಣಾಮವಾಗಲಿದೆ ಎಂಬ ಯಾವುದೇ ಸೂಚನೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆಯಾದರೂ 2ನೇ ಅಲೆಯಲ್ಲೇ ಸೋಂಕು ಮಕ್ಕಳಲ್ಲಿ ಹರಡುತ್ತಿರುವುದು ಪೋಷಕರಲ್ಲಿ ಆತಂಕ ತಂದಿದೆ.

ಕೊರೊನಾ 2ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವುದಿಲ್ಲ ಎಂದು ತಜ್ಞರು ಹೇಳಿದ್ದರಾದರೂ 19 ವರ್ಷದೊಳಗಿನ ಮಕ್ಕಳು ಗಣನೀಯ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಕ್ಕಳ ರಕ್ಷಣೆಗೆ ಮುನ್ನೆಚ್ಚರಿಕೆ ಮತ್ತು ಭವಿಷ್ಯದಲ್ಲಿ ಚಿಕಿತ್ಸೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಮಾರ್ಚ್‌ 18 ರಿಂದ ಮೇ 25 ರ ಅವಧಿಯಲ್ಲಿ 10 ವರ್ಷದೊಳಗಿನ 40 ಸಾವಿರಕ್ಕೂ ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. 10 ರಿಂದ 19 ವರ್ಷದೊಳಗಿನ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪಾಸಿಟಿವ್‌ ಬಂದಿದೆ ಎಂದು ಹೇಳಲಾಗಿದೆ.

ಆದರೆ ಸಮಾಧಾನದ ಅಂಶವೆಂದರೆ ಬಹುತೇಕ ಮಕ್ಕಳಲ್ಲಿ ಸೌಮ್ಯ ಲಕ್ಷಣ ಗಳಿದ್ದು, ಸಾಮಾನ್ಯ ಚಿಕಿತ್ಸೆಯಲ್ಲಿ ಗುಣ ಮುಖರಾಗುತ್ತಿದ್ದಾರೆ. ಈ ಬಗ್ಗೆ ಪೋಷ ಕರು ಭಯ ಪಡಬೇಕಾಗಿಲ್ಲ ಎಂದು ಮಲೇಬೆನ್ನೂರಿನ ಆದಿತ್ಯ ಮಕ್ಕಳ ಆಸ್ಪತ್ರೆ ಮಕ್ಕಳ ತಜ್ಞ ಡಾ. ಶ್ರೀನಿವಾಸ್‌ ತಿಳಿಸಿದ್ದಾರೆ.

ಸಣ್ಣ ಮಕ್ಕಳಿಗೆ ಶೀತ, ಜ್ವರ, ಕೆಮ್ಮಿಗಾಗಿ ಆಗಾಗ ನೀಡುವ ಔಷಧೋಪಚಾರದಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಜೊತೆಗೆ ಬೇರೆ ಬೇರೆ ಲಸಿಕೆಗಳ ಪ್ರಭಾವವೂ ಹೆಚ್ಚಾಗಿರುವುದರಿಂದ ಅವರಿಗೆ ಕೋವಿಡ್‌ ಸೋಂಕಿನಿಂದ ಹೆಚ್ಚು ಹಾನಿಯಾಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಮಕ್ಕಳಲ್ಲಿ ಸೋಂಕಿನ ಬಗ್ಗೆ ಅರಿವು ಇಲ್ಲದ ಕಾರಣ ಭಯ ಪಡುವುದಿಲ್ಲ, ಹಾಗಾಗಿ ರೋಗ ನಿರೋಧಕ ಶಕ್ತಿಯೂ ಕಡಿಮೆ ಆಗುವುದಿಲ್ಲ. ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಇತರೆ ಕಾಯಿಲೆಗಳಿ ರುವ ಮಕ್ಕಳಲ್ಲಿ ಸೋಂಕು ಕಂಡುಬಂದರೆ ಅವರ ಬಗ್ಗೆ ನಿಗಾವಹಿಸಬೇಕು, ಆಸ್ಪತ್ರೆಗೆ ದಾಖಲು ಮಾಡಿದರೆ ಒಳ್ಳೆಯದು ಎಂದು ಡಾ. ಶ್ರೀನಿವಾಸ್‌ ಸಲಹೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಈಚೆಗೆ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಮಕ್ಕಳಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌ಗಿಂತ ರಾಪಿಡ್‌ ಟೆಸ್ಟ್‌ಗೆ ಒತ್ತು ನೀಡಬೇಕೆಂದು ಮತ್ತು ಪಾಸಿಟಿವ್‌ ಬಂದಿರುವ ಮಕ್ಕಳು ಮನೆಯಲ್ಲಿದ್ದಾಗ ಅವರ ಪ್ರತಿದಿನದ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಆರೋಗ್ಯ ಕಾರ್ಯಕರ್ತರನ್ನು ಅಥವಾ ಆಶಾ ಕಾರ್ಯಕರ್ತೆಯರನ್ನು ನೇಮಿಸುವುದು ಸೂಕ್ತ ಎಂದು ಡಾ. ಶ್ರೀನಿವಾಸ್‌ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಪೋಷಕರು ಹೊರಗಡೆ ಸುತ್ತಾಡಿ ಮನೆಗೆ ಬರುವುದರಿಂದ ಮನೆಯಲ್ಲಿರುವ ಮಕ್ಕಳಿಗೆ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಮಕ್ಕಳಿರುವ ಪೋಷಕರು  ಎಚ್ಚರಿಕೆ ವಹಿಸಬೇಕು.  ಸೋಂಕು ಬಂದ ಮಕ್ಕಳಿಗೆ ಸಾಮಾನ್ಯ ಚಿಕಿತ್ಸೆಯನ್ನೇ ನೀಡುತ್ತಿದ್ದೇವೆ. ಇದುವರೆಗೂ ಯಾವ ಮಗುವಿಗೂ ಆಕ್ಸಿಜನ್‌ ಅಥವಾ ಐಸಿಯು ಅವಶ್ಯಕತೆ ಕಂಡುಬಂದಿಲ್ಲ ಎಂದು ಶ್ರೀನಿವಾಸ್‌ ತಿಳಿಸಿದ್ದಾರೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ನೀಡಿರುವ ಮಾಹಿತಿ ಪ್ರಕಾರ 2021 ರ ಏಪ್ರಿಲ್‌ 1 ರಿಂದ ಮೇ 5 ರವರೆಗೆ ದಾವಣಗೆರೆ ದೃಢಪಟ್ಟಿತ್ತು. ಮೇ 6 ರಿಂದ ಮೇ 25 ರವರೆಗೆ 354 ಮಕ್ಕಳಿಗೆ ಸೋಂಕು ಏರಿಕೆಯಾಗಿದ್ದು, ಶೇ. 90 ರಷ್ಟು ಸೋಂಕಿತ ಮಕ್ಕಳು ಸಾಮಾನ್ಯ ಚಿಕಿತ್ಸೆಯಲ್ಲಿ ಗುಣಮುಖರಾಗಿದ್ದಾರೆ. ಶೇ. 10 ರಷ್ಟು ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ ಯಾವ ಮಗುವೂ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿಲ್ಲ.

ಏಪ್ರಿಲ್ 1 ರಿಂದ ಮೇ 25 ರವರೆಗೆ 11 ರಿಂದ 20 ವರ್ಷದೊಳಗಿನ 1409 ಮಕ್ಕಳಿಗೆ ಪಾಸಿಟಿವ್‌ ಬಂದಿದ್ದು, ಇವರಿಗೂ ಕೂಡಾ ಸಾಮಾನ್ಯ ಚಿಕಿತ್ಸೆಯನ್ನೇ ನೀಡಲಾಗಿದೆ ಎಂಬ ಮಾಹಿತಿ ಇದೆ. ಮಕ್ಕಳಲ್ಲಿ ಸೋಂಕು ಹರಡುವುದು ದಿನೇ ದಿನೇ ಹೆಚ್ಚಾಗುತ್ತಿದ್ದು, ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ರಾಘವನ್‌ ಮನವಿ ಮಾಡಿದ್ದಾರೆ.

ಗರ್ಭಿಣಿಯರಲ್ಲೂ ಸೋಂಕು ಹೆಚ್ಚಳ : ಕಳೆದ ವರ್ಷವೂ ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬಂದಿತ್ತಾದರೂ ಆಕ್ಸಿಜನ್‌ ಅವಶ್ಯಕತೆ ಅಷ್ಟಾಗಿ ಕಂಡುಬಂದಿರಲಿಲ್ಲ.ಆದರೆ, 2ನೇ ಅಲೆಯಲ್ಲಿ ಇದುವರೆಗೂ ಸಿ.ಜಿ. ಆಸ್ಪತ್ರೆಯಲ್ಲಿ 110 ಕ್ಕೂ ಹೆಚ್ಚು ಗರ್ಭಿಣಿಯರು ಸೋಂಕಿನಿಂದ ದಾಖಲಾಗಿದ್ದಾರೆ. ಶೇ. 30 ರಷ್ಟು ಸೋಂಕಿತರಿಗೆ ಆಕ್ಸಿಜನ್‌ ಅವಶ್ಯಕತೆ ಕಂಡುಬಂದಿದೆ.

ಕಳೆದ ಬಾರಿ ಗರ್ಭಿಣಿಯರ ಸಾವು ಆಗಿರಲಿಲ್ಲ, ಈ ಬಾರಿ ಮಾಹಿತಿ ಪ್ರಕಾರ ಇಬ್ಬರು ಗರ್ಭಿಣಿಯರು ವೆಂಟಿಲೇಟರ್‌ಗೆ ಹೋಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೊಟ್ಟೆ ಒಳಗಡೆ ಮಗು ತೀರಿಕೊಂಡಿರುವ ಪ್ರಕರಣಗಳು ಈ ಬಾರಿ ಕಂಡುಬಂದಿವೆ. ಈ ವೇಳೆ ತಾಯಿ ಜೀವಕ್ಕೆ ತೊಂದರೆ ಆಗದಿರುವುದು ವಿಶೇಷವಾಗಿದೆ ಎಂದು ಹೇಳಲಾಗಿದೆ. 

ಗರ್ಭಿಣಿಯರು ಇರುವ ಮನೆಯಲ್ಲಿ    ಜಾಗೃತಿ ವಹಿಸಬೇಕು.ಗರ್ಭಿಣಿಯರನ್ನು ಪ್ರತ್ಯೇಕವಾಗಿ ಸುರಕ್ಷಿತವಾಗಿ ಇಟ್ಟರೆ ತುಂಬಾ ಒಳ್ಳೆಯದು ಎಂದು ಮಲೇಬೆನ್ನೂರಿನ ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞ ಡಾ. ಅಪೂರ್ವ ಅವರ ಸಲಹೆ ಆಗಿದೆ.

error: Content is protected !!