ಕೊರೊನಾ ಚೈನ್‍ಲಿಂಕ್ ತಪ್ಪಿಸಲು ಅಧಿಕಾರಿಗಳು ಶ್ರಮಿಸಲಿ

ಹೊನ್ನಾಳಿಯಲ್ಲಿ ಡಿವೈಎಸ್ಪಿ ಡಾ. ಕೆ.ಎಂ. ಸಂತೋಷ್

ಹೊನ್ನಾಳಿ, ಮೇ 25-  ಲಾಕ್‍ಡೌನ್ ನಿಯಮಗಳನ್ನು ಸಾರ್ವ ಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್ಪಿ ಡಾ. ಕೆ.ಎಂ. ಸಂತೋಷ್ ಎಚ್ಚರಿಸಿದರು.

ಸೋಮವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಪೂರೈಕೆ-ಬಳಕೆ ಬಗ್ಗೆ  ಡಾ. ಲೀಲಾವತಿ ಅವರಿಂದ ಮಾಹಿತಿ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊರೊನಾ ಎರಡನೇ ಅಲೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸಮುದಾಯ ಸೋಂಕಿನ ಭೀತಿ ಇದೆ. ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೊರೊನಾ ವೈರಸ್ ಸೋಂಕಿನ ಚೈನ್‍ಲಿಂಕ್ ತುಂಡರಿಸುವ ಮೂಲಕ ಸಮುದಾಯ ಸೋಂಕು ತಪ್ಪಿಸಬೇಕು ಎಂದು ತಿಳಿಸಿದರು.

ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಎಲ್ಲಾ ಚೆಕ್‍ಪೋಸ್ಟ್‍ಗಳು ಹಾಗೂ ಕೋವಿಡ್ ಆರೈಕೆಯ ಎಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್ ಆರೈಕೆಯ ಎಲ್ಲಾ ಕೇಂದ್ರಗಳಿಗೆ ಸಾಕಷ್ಟು ಸಿಬ್ಬಂದಿ ನೇಮಿಸುವ ಮೂಲಕ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 735 ಮಾಸ್ಕ್ ಪ್ರಕರಣಗಳು, ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 872 ಮಾಸ್ಕ್ ಪ್ರಕರಣಗಳು, ಹೊನ್ನಾಳಿ ಸಿಪಿಐ 350 ಮಾಸ್ಕ್ ಪ್ರಕರಣಗಳು ಸೇರಿದಂತೆ ಒಟ್ಟು 1957 ಮಾಸ್ಕ್ ಧರಿಸದ ಪ್ರಕರಣಗಳಿಂದ 1,95,700 ರೂ. ದಂಡ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ಕಳೆದ ವಾರ ಹೊನ್ನಾಳಿ ತಾಲ್ಲೂಕು ಸಾರ್ವ ಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗುವ ಹಂತದ ಲ್ಲಿದ್ದಾಗ ಪೊಲೀಸ್ ಅಧಿಕಾರಿಗಳಾದ ಸಿಪಿಐ ಟಿ.ವಿ. ದೇವರಾಜ್ ಮತ್ತು ಪಿಎಸ್‌ಐ ಬಸನಗೌಡ ಬಿರಾದಾರ ಹಾಗೂ ಇತರೆ ಸಿಬ್ಬಂದಿ ಶ್ರಮವಹಿಸಿ ಹರಿಹರ ಹಾಗೂ ಭದ್ರಾವತಿಯಿಂದ ಆಕ್ಸಿಜನ್ ಸಿಲಿಂಡರ್‍ಗಳನ್ನು ತೆಗೆದುಕೊಂಡು ಬಂದು ರೋಗಿಗಳ ಪ್ರಾಣ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದು ಶ್ಲಾಘನೀಯ ಎಂದು ಸಂತೋಷ್ ತಿಳಿಸಿದರು.

ಸಿಪಿಐ. ದೇವರಾಜ್, ಪಿಎಸ್‌ಐ ಬಸನಗೌಡ ಬಿರಾದಾರ,  ಡಾ. ಲೀಲಾವತಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಮಂಜು ಇನ್ನಿತರರು ಉಪಸ್ಥಿತರಿದ್ದರು.

error: Content is protected !!