ಸಂಸದರು ಹೇಳಿದಂತೆ ಸಿಎಂ ಮನೆ ಮುಂದೆ ಧರಣಿ ಮಾಡಿ, ಜಿಲ್ಲೆಗೆ ಲಸಿಕೆ ತರಲು ಆಗ್ರಹ

ದಾವಣಗೆರೆ, ಮೇ 25- ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಿ ಪಲಾಯನ ಮಾಡಲು ಹೊರಟಿವೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಆರೋಪಿಸಿದ್ದಾರೆ. 

ಜಗಳೂರಿನಲ್ಲಿ ನಿನ್ನೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಆರಂಭವಾದ ಸಮಯದಲ್ಲಿ ಕಾಂಗ್ರೆಸ್ ಪಕ್ಷದವರು ಮಾಡಿದ ಅಪಪ್ರಚಾರದಿಂದ ಲಸಿಕೆ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿತ್ತು ಎಂದು ಹಸಿ ಸುಳ್ಳು ಸೋಂಕು ಹರಡಲು ಮುಂದಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ರಷ್ಯಾ, ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಅಲ್ಲಿನ ಅಧ್ಯಕ್ಷರು, ಪ್ರಧಾನಮಂತ್ರಿಗಳು ಕೋವಿಡ್ ಲಸಿಕೆಯನ್ನು ತಾವೇ ಸ್ವತಃ ಮೊದಲು ಪಡೆದು ಜನರಲ್ಲಿ ವಿಶ್ವಾಸ ಮೂಡಿಸಿದರು. ಕೋವಿಡ್ ಲಸಿಕೆ ಬಗ್ಗೆ ಆರಂಭದಲ್ಲಿ ಬಿಜೆಪಿಯವರಿಗೆ ನಂಬಿಕೆ ಇರಲಿಲ್ಲ. ಆದುದರಿಂದ ಜನವರಿ ತಿಂಗಳಲ್ಲೇ ಕೋವಿಡ್ ಲಸಿಕೆ ದೇಶದಲ್ಲಿ ಬಂದರೂ ಸಹ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಾವು ಲಸಿಕೆಯನ್ನು ಪಡೆಯದೇ ಅದನ್ನು ಆಶಾ ಕಾರ್ಯಕರ್ತರು ಸೇರಿದಂತೆ ಕೊರೊನಾ ವಾರಿಯರ್ಸ್ ಹಾಗೂ ಬಡವರ ಮೇಲೆ ಪ್ರಯೋಗಿಸಿದ್ದರು. ಇದನ್ನು ಕಾಂಗ್ರೆಸ್  ಪ್ರಶ್ನಿಸಿದ್ದು ನಿಜ. ಉನ್ನತ ಸ್ಥಾನದಲ್ಲಿರುವವರು ಮೊದಲು ಲಸಿಕೆ ಪಡೆದು ಜನರಲ್ಲಿ ವಿಶ್ವಾಸ ಮೂಡಿಸಿ ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.  

ಜನವರಿ ತಿಂಗಳಲ್ಲಿಯೇ ಕೊರೊನಾ ಲಸಿಕೆ ಭಾರತದಲ್ಲಿ ಬಂದರೂ ಸಹ ಪ್ರಧಾನ ಮಂತ್ರಿ ತಮ್ಮ ಮೊದಲನೇ ಲಸಿಕೆಯನ್ನು ಮಾರ್ಚ್ 1ರಂದು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಪಡೆದರು. ತಮ್ಮ 2ನೇ ಲಸಿಕೆಯನ್ನು ಏಪ್ರಿಲ್ 8ರಂದು ಪಡೆದರು.  ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಿದ ಸಂಸದ ಸಿದ್ದೇಶ್ವರ ಅವರು ಪ್ರಧಾನಿ ಮೋದಿಯವರು ಮಾರ್ಚ್ 1ಕ್ಕೆ ಲಸಿಕೆ ಪಡೆದ ನಂತರ ಲಸಿಕೆಯಿಂದ ಅಡ್ಡ ಪರಿಣಾಮಗಳು ಇಲ್ಲವೆಂದು ಖಾತರಿಪಡಿಸಿಕೊಂಡು ಇವರು ಮಾರ್ಚ್ 2ಕ್ಕೆ ತಮ್ಮ ಮೊದಲ ಲಸಿಕೆಯನ್ನು ಪಡೆದಿದ್ದಾರೆ. ಇದರಿಂದ ಗೊತ್ತಾಗುತ್ತೆ ಲಸಿಕೆ ಬಗ್ಗೆ ಪ್ರಧಾನಿ ಮತ್ತು ಸಂಸದರಿಗೆ ಭಯವಿತ್ತು ಎಂದು. ದೇಶದಲ್ಲಿ ಲಕ್ಷಾಂತರ ಜನರು ಲಸಿಕೆ ಪಡೆದ ನಂತರವೇ, ಬಿಜೆಪಿ ನಾಯಕರು ಲಸಿಕೆ ಪಡೆದಿದ್ದು ಏಕೆ ? ಎಂದು ಅವರು ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಲಸಿಕೆಗಾಗಿ ಜನ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಹಿಂದೆ ಸಂಸದರು ಆಡಿದ ಮಾತಿನಂತೆ ಜಿಲ್ಲೆಗೆ ಅಗತ್ಯವಾದ ಲಸಿಕೆ ತರಬೇಕು. ಅಗತ್ಯ ಲಸಿಕೆ ಸಿಗದಿದ್ದರೆ ಮುಖ್ಯಮಂತ್ರಿಗಳ ಮನೆಮುಂದೆ ಧರಣಿ ಕೂರುತ್ತೇನೆಂದು ಸಂಸದ ಜಿ.ಎಂ. ಸಿದ್ದೇಶ್ವರ  ಹೇಳಿದ್ದರು.  ಈಗ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ವ್ಯಾಪಕ ಅಭಾವವಿದೆ. ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕುಳಿತಾದರೂ ಲಸಿಕೆ ತನ್ನಿ ಎಂದು ಸಂಸದರನ್ನು ಬಸವರಾಜ್ ಒತ್ತಾಯಿಸಿದ್ದಾರೆ.  

error: Content is protected !!