ಒಂದೇ ದಿನ ಜೈಲು ಹಕ್ಕಿಗಳಿಗೆಲ್ಲಾ ಲಸಿಕೆ

ದಾವಣಗೆರೆ, ಮೇ 25- ಕೊರೊನಾ ಸೋಂಕಿಗೆ ತುತ್ತಾಗದಿರಲು ಮುಂಜಾಗ್ರತೆ ಗಾಗಿ ಜಿಲ್ಲಾ ಕಾರಾಗೃಹದಲ್ಲಿನ ಎಲ್ಲಾ ಜೈಲು ಹಕ್ಕಿಗಳೂ ಮೊದಲ ಹಂತದ ಲಸಿಕೆ ಭಾಗ್ಯ ಕಂಡಿದ್ದಾರೆ. ಆ ಮೂಲಕ ಕೊಂಚ ನಿರಾಳತೆ ಕಂಡು ಆತಂಕ ದೂರವಾಗಿದೆ.

ಪ್ರಸ್ತುತ ಲಸಿಕೆ ಬಹು ಪ್ರಾಮುಖ್ಯತೆ ಪಡೆದಿದ್ದು, ಎರಡೂ ಹಂತದ ಲಸಿಕೆ ಪಡೆದು ಜೀವ ಉಳಿಸಿಕೊಳ್ಳುವ ಕಾಲಘಟ್ಟ ಕಾಣಲಾಗುತ್ತಿದೆ. ಲಸಿಕೆ ಪಡೆದರೆ ಕೊರೊನಾ ಸೋಂಕಿಗೆ ತುತ್ತಾಗಿ ತೀವ್ರ ಆರೋಗ್ಯ ತೊಂದರೆಯಿಂದ ಬಳಲುವುದು ತಪ್ಪಲಿದೆ ಎಂದು ಹೇಳಲಾಗುತ್ತಿದೆ. ತಾವೂ ಸಹ ಲಸಿಕೆ ಯಾವಾಗ ಪಡೆಯುತ್ತೇವೆಂದು ಕಾರಾಗೃಹದಲ್ಲಿನ ವಿಚಾರಣಾಧೀನ ಖೈದಿಗಳು ಎದುರು ನೋಡುತ್ತಿದ್ದರು. ಅಲ್ಲದೇ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕ ಕರ್ಣ ಬಿ. ಕ್ಷತ್ರಿ ಅವರು ಜೈಲು ಹಕ್ಕಿಗಳಿಗೆಲ್ಲಾ ಲಸಿಕೆ ಹಾಕಿಸಲು ಪ್ರಯತ್ನಿಸಿದ್ದಲ್ಲದೇ, ಸಮಾಧಾನವೂ ಇರಲಿಲ್ಲ. ಲಸಿಕೆ ಖಾಲಿ ಒಂದೆಡೆಯಾದರೆ, ಕೆಲ ಖೈದಿಗಳ ಬಳಿ ಆಧಾರ್ ಕಾರ್ಡ್ ಇಲ್ಲದ ಕಾರಣ ಎಲ್ಲಾ ಜೈಲು ಹಕ್ಕಿಗಳೂ ಲಸಿಕೆ ಭಾಗ್ಯ ಸಿಕ್ಕಿರಲಿಲ್ಲ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. 

ಜಿಲ್ಲಾ ಕಾರಾಗೃಹದಲ್ಲಿ ಸ್ಥಳದ ಅಭಾವದಿಂದ ಖೈದಿಗಳೆಲ್ಲಾ ಒಂದೇ ಕಡೆ ಇರಬೇಕಾದ ಪರಿಸ್ಥಿತಿ ಇರುವ ಕಾರಣ ಕೊರೊನಾ ಭೀತಿ ಕಾಡುತ್ತಿತ್ತು. ಜೈಲಿನಲ್ಲಿ ಒಟ್ಟು 12 ಸೆಲ್‌ಗಳಿವೆ. 10 ಸೆಲ್‍ಗಳು, ಎರಡು ಬ್ಯಾರಕ್ (ವಿಶಾಲವಾದ ಸೆಲ್‍ಗಳು) ಇವೆ. ಖೈದಿಗಳನ್ನು ನಿಯಮಾನುಸಾರ ಸೆಲ್‌ಗಳಲ್ಲಿ ಇರಿಸಲಾಗುತ್ತಿದೆ. ಜೈಲಿನ ಸಮೀಪವೇ ವಸತಿ ಗೃಹಗಳು ಸಿಗದೇ ಇತರೆ ಕಡೆಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಜೈಲಿನ ಕೆಲ ಸಿಬ್ಬಂದಿಗಳು ಹೊರಗಡೆಯಿಂದ ಕಾರಾಗೃಹಕ್ಕೆ ಬರುವ ಕಾರಣ ಅದೂ ಕೂಡ ಆತಂಕಕ್ಕೆ ಕಾರಣವಾಗಿತ್ತು. ಈ ನಡುವೆಯೂ ಖೈದಿಗಳ ಜೀವಗಳ ಜೊತೆಗೆ ಇಲಾಖೆಯ ಸಿಬ್ಬಂದಿಗಳ ಜೀವನನ್ನೂ ಕಾಪಾಡುವುದೇ ಸವಾಲಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕೊರೊನಾ ಮಹಾಮಾರಿ ನಿದ್ದೆಗೆಡುವಂತೆ ಮಾಡಿತು. ಅದೃಷ್ಟವಶಾತ್ ಪ್ರಮಾಣಿತ ಕಾರ್ಯಾಚರಣಾ ವಿಧಾನದ (ಎಸ್‍ಓಪಿ) ಅನ್ವಯ ಜಿಲ್ಲಾ ಕಾರಾಗೃಹದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬರುತ್ತಿರುವುದರಿಂದ ಸದ್ಯಕ್ಕೆ ಇದುವರೆಗೂ ಕಾರಾಗೃಹದಲ್ಲಿ ಕೊರೊನಾ ಸೋಂಕಿನ ಸುಳಿವಿಲ್ಲ.

ಜಿಲ್ಲಾಸ್ಪತ್ರೆಯಿಂದ ವೈದ್ಯರು, ಸಿಬ್ಬಂದಿಗಳು ಸೇರಿ 7-8 ಮಂದಿಯುಳ್ಳ ತಂಡವು ಜಿಲ್ಲಾ ಕಾರಾಗೃಹದ ಆವರಣದಲ್ಲೇ ಕ್ಯಾಂಪ್ ಹಾಕಿ ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆವರೆಗೂ ಜೈಲಿನಲ್ಲಿರುವ ಪ್ರತಿಯೊಬ್ಬ ಖೈದಿಗಳಿಗೂ ಮೊದಲ ಲಸಿಕೆ ಹಾಕಿದರು. 15-20 ದಿನಗಳ ಹಿಂದೆ 45 ವರ್ಷ ಮೇಲ್ಪಟ್ಟ 13 ಮಂದಿ ಖೈದಿಗಳಿಗೆ ಲಸಿಕೆ ಹಾಕಿಸಲಾಗಿತ್ತು ಎಂದು ‘ಜನತಾವಾಣಿ’ ಪತ್ರಿಕೆಗೆ ಮಾಹಿತಿ ನೀಡಿದರು.

ಜೈಲಿನ 42 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆಲ್ಲಾ ಕಳೆದ 2-3 ತಿಂಗಳ ಹಿಂದೆಯೇ ಮೊದಲ ಲಸಿಕೆ ಪಡೆದಿದ್ದಾರೆ. ಶೇ. 60ರಿಂದ 70 ರಷ್ಟು ಭಾಗ ಸಿಬ್ಬಂದಿಗಳು ಎರಡನೇ ಹಂತದ ಲಸಿಕೆ ಪಡೆದಿದ್ದಾರೆ. ಇನ್ನುಳಿದವರಿಗೆ ಎರಡನೇ ಹಂತದ ಲಸಿಕೆಯ ನಿಗದಿತ ಸಮಯಕ್ಕೆ ಕಾಯುತ್ತಿದ್ದಾರೆ.

ಲಾಕ್ ಡೌನ್ ಬಳಿಕ ಇತ್ತೀಚಿಗೆ ಯಾವುದೇ ಹೊಸ ಖೈದಿಗಳ ಪ್ರವೇಶವಾಗಿಲ್ಲ. ಒಬ್ಬರೋ, ಇಬ್ಬರೋ ಬರುತ್ತಾರೆ. ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ. ಕಳೆದ 15 ದಿನಗಳ ಹಿಂದೆ ಹೊಸ ಖೈದಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಆ ಖೈದಿ ಜೈಲಿನೊಳಗೆ ಪ್ರವೇಶ ಮಾಡದೇ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಸೋಂಕು ಮುಕ್ತನಾಗಿ ಬಂದಿದ್ದ. ಕೊರೊನಾ ಸಂದರ್ಭದಲ್ಲಿ ಜೈಲಿನಲ್ಲಿರುವ ಯಾವುದೇ ಖೈದಿಗಳು ಕೆಮ್ಮಿದರೂ, ಆರೋಗ್ಯದಲ್ಲಿ ಏರು-ಪೇರು ಕಂಡರೂ ನಮಗೆ ಟೆನ್ಷನ್ ಶುರುವಾಗಲಿದೆ. ಆದರೆ ಅದೃಷ್ಟವಶಾತ್ ಇಂತಹ ಪ್ರಸಂಗಗಳು ಸಂಭವಿಸಿಲ್ಲ ಎಂದು ಕರ್ಣ ಅವರು ನಿಟ್ಟುಸಿರು ಬಿಟ್ಟರು.


– ಜಿ.ಎಸ್. ವಸಂತ್ ಕುಮಾರ್

error: Content is protected !!