ದಾವಣಗೆರೆ, ಮೇ 26- ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ದೆಹಲಿಯಲ್ಲಿ ಮತ್ತೆ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರೈತ ಹೋರಾಟ ಸಮಿತಿಯು ಕಪ್ಪು ಪಟ್ಟಿ ಧರಿಸಿ ಇಂದು ಮಲ್ಲಶೆಟ್ಟಿಹಳ್ಳಿ ಗ್ರಾಮದ ಸಮೀಪ ಇರುವ 22 ಕೆರೆಗಳ ಏತ ನೀರಾವರಿ ಪಂಪ್ಹೌಸ್ ಬಳಿ ಹೊಲದಲ್ಲಿ ಪ್ರತಿಭಟನೆ ನಡೆಸಿತು. ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಆವರಗೆರೆ ಹೆಚ್.ಜಿ.ಉಮೇಶ್, ದೇಶವನ್ನು ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತಂದಿವೆ. ಅಲ್ಲದೇ ಅವುಗಳನ್ನು ಬಲವಂತವಾಗಿ ಅನುಷ್ಠಾನಗೊಳಿಸುವ ಮೂಲಕ ರೈತರು ಮತ್ತು ಕಾರ್ಮಿಕರನ್ನು ಬೀದಿಪಾಲು ಮಾಡಿವೆ. ಕೃಷಿ, ಎಪಿಎಂಸಿ, ವಿದ್ಯುತ್ ಸೇರಿದಂತೆ ರೈತ, ಕಾರ್ಮಿಕರಿಗೆ ಮಾರಕವಾದ ಕಾಯಿದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಇಂದಿಗೆ ಸರಿಯಾಗಿ 6 ತಿಂಗಳಾಗಿವೆ. ಆದರೆ, ನಮ್ಮ ಪ್ರತಿಭಟನೆಗಳಿಗೆ ಮನ್ನಣೆ ನೀಡದ ಕೇಂದ್ರ ಸರ್ಕಾರ ಕಣ್ಣಿದ್ದು ಕುರುಡರಾಗಿ, ಕಿವಿಯಿದ್ದು ಕಿವುಡರಂತೆ ವರ್ತಿಸುತ್ತಿದೆ.
ಆ ಮೂಲಕ ಆಳುವ ಪಕ್ಷ ಬಂಡವಾಳ ಶಾಹಿ ವರ್ಗವನ್ನು ಸಂರಕ್ಷಿಸುತ್ತಿದೆ. ಅಲ್ಲದೇ ರೈತ ಮತ್ತು ಕಾರ್ಮಿಕ ವರ್ಗವನ್ನು ಕಾಲ ಕೆಳಗೆ ತುಳಿದು ಓಡಾಡುತ್ತಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ
ದುಡಿಯುವ ವರ್ಗದ ಪರವಾಗಿ ಯಾವುದೇ ಕೆಲಸ ಮಾಡಿಲ್ಲ. ಬ್ಯಾಂಕುಗಳ ವಿಲೀನಿಕರಣ ಸೇರಿದಂತೆ, ಎಲ್ಲಾ ರಾಷ್ಟ್ರೀಕೃತ ಸಂಸ್ಥೆಗಳನ್ನು ಖಾಸಗಿಕರಣ ಮಾಡಿ, ಎಲ್ಲವನ್ನೂ ಮುಚ್ಚಿ ದೇಶವನ್ನೇ ಹಾಳು ಮಾಡಿದೆ. ದೇಶದ ದುಡಿಯುವ ವರ್ಗದ ಜನತೆ ಅಭದ್ರತೆಯಲ್ಲಿ ಇದ್ದಾರೆ. ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದು ತಿಳಿಸಿದರು.
ರೈತ ಮುಖಂಡರಾದ ಇ. ಶ್ರೀನಿವಾಸ್, ಸತೀಶ್ ಅರವಿಂದ್, ಮಲ್ಲಶೆಟ್ಟಿ ಹಳ್ಳಿ ಚನ್ನಬಸಪ್ಪ, ಗೊಲ್ಲರಹಟ್ಟಿ ಬಸವರಾಜ್, ತೋಳಹುಣಸೆ ಜಯಪ್ಪ, ಶಿವಕುಮಾರ್, ಹಾಲೇಶ್ ನಾಯ್ಕ, ಐರಣಿ ಚಂದ್ರು, ನರಗ ರಂಗನಾಥ್ ಇದ್ದರು.