ಮಕ್ಕಳಿಗೆ ಸರ್ಕಾರದಿಂದ ಯಾವುದೇ ಪ್ರೋಟೋಕಾಲ್‌ ಇಲ್ಲ

ಕೋವಿಡ್‌ಗೆ ಈಡಾದ ಮಕ್ಕಳ ನಿರ್ಲಕ್ಷ್ಯ: ಎಚ್‌.ಕೆ. ಪಾಟೀಲ್‌ ಆರೋಪ

ರಾಣೇಬೆನ್ನೂರು, ಮೇ 26- ಕೊರೊನಾ ಸೋಂಕಿತ ಮಕ್ಕಳಿಗಾಗಿ ಸರ್ಕಾರ ಇದುವರೆಗೂ ಯಾವುದೇ ರೀತಿಯಲ್ಲೂ ಪ್ರೋಟೋಕಾಲ್ ಮಾಡಿಲ್ಲ. ಮಕ್ಕಳ ಚಿಕಿತ್ಸೆಗೆ ಏನು ಅವಶ್ಯವಿದೆ. ಅವರ ಆರೈಕೆ ಹೇಗೆ ಎಂದು ಪಾಲಕರು ಗೋಳಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲಿ 721 ಮಕ್ಕಳು ಕೋವಿಡ್‌ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸರ್ಕಾರದಲ್ಲಿ ಯಾವುದೇ ಕ್ರಮ ಇಲ್ಲ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಆರೋಪಿಸಿದರು.

ಅವರು,  ಕಾಂಗ್ರೆಸ್ ಪಕ್ಷ ಹಾಗೂ ಪ್ರಕಾಶ ಕೋಳಿವಾಡರ ಪಿಕೆಕೆ ಸಂಸ್ಥೆಯಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಬಸ್ ನೀಡಿ ಮಾಧ್ಯಮ ಗೋಷ್ಠಿ ನಡೆಸಿದರು.

ಉಪಯೋಗಕ್ಕೆ ಬಾರದ ವೆಂಟಿಲೇಟರ್‌ಗಳನ್ನು  ಪಿಎಂ ಕೇರ್‌ನಲ್ಲಿ ತರಿಸಲಾಗಿದೆ. ತಜ್ಞರು ಕೊಟ್ಟ ಮಾಹಿತಿಯನ್ನು ಕಡೆಗಣಿಸಿ, ಲಸಿಕೆ ರಪ್ತು ಮಾಡಲಾಗಿದೆ.   ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಆರೋಗ್ಯ ರಕ್ಷಣೆಯಲ್ಲಿ ಬಹಳಷ್ಟು ನಿರ್ಲಕ್ಷ್ಯ ತಾಳಿವೆ. ಜವಾಬ್ದಾರಿ ಅರಿಯದ ಸರ್ಕಾರ ಇದಾಗಿದೆ. ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದೆ ಎಂದು ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು, ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಆಕ್ಸಿಜನ್ ಬಸ್‌ಗಳನ್ನು ಇನ್ನಿತರೆ ಆರೋಗ್ಯ ಪರಿಕರಗಳನ್ನು ಕೊಡುವುದು ಸರ್ಕಾರದ ಜೊತೆಗಿನ ಸಹಕಾರ ಅಲ್ಲವೇ. ವೆಂಟಿಲೇಟರ್ ಕೆಲಸ ಮಾಡುತ್ತಿಲ್ಲ. ಅವು ಸರಿ ಇಲ್ಲಾ ಅಂತಾ ಹೇಳಿದರೆ ಕಾಂಗ್ರೆಸ್  ಆರೋಪ ಮಾಡುತ್ತಿದೆ ಎಂದು ಟೀಕಿಸುತ್ತಾರೆ. ಕೊರೊನಾ ಸಂಕಷ್ಟದಲ್ಲಿ  ಕಾಂಗ್ರೆಸ್ ಜನರ ಜೊತೆ ಇದೆ. ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಪಾಟೀಲ್ ಹೇಳಿದರು.

ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ನಿವಾಸದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ, ವಿಧಾನ ಪರಿಷತ್ ಸದಸ್ಯ ಆರ್.ಬಿ. ಮಾನೆ, ಎಪಿಎಂಸಿ ಅಧ್ಯಕ್ಷ ಬನ್ನಿಕೋಡು, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಅಧ್ಯಕ್ಷ ಮಂಜನಗೌಡ ಪಾಟೀಲ, ಆರ್.ಎಂ. ಕುಬೇರಪ್ಪ, ಇರ್ಫಾನ್ ದಿಡಗೂರ, ನಗರಸಭೆ ಸದಸ್ಯರು ಹಾಗು ಇನ್ನಿತರರಿದ್ದರು.

error: Content is protected !!