ಕೊರೊನಾ ಕಟ್ಟಿಹಾಕಲು ಕೋಟಿ ರೂ. ಅನುದಾನ

ಜಗಳೂರು: ಕೊರೊನಾ ನಿಯಂತ್ರಣ ಸಭೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಮೇ 24- ಕ್ಷೇತ್ರದ ಜನರ ಆಶೀರ್ವಾದದಿಂದಾಗಿ ಕೋವಿಡ್‌ನಿಂದ  ಗುಣಮುಖನಾಗಿ ಪುನಃ ನಿಮ್ಮ ಸೇವೆಗೆ ಮರಳಿದ್ದೇನೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಭಾವುಕರಾಗಿ ನುಡಿದರು.

ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ನಡೆದ ಕೊರೊನಾ ನಿಯಂತ್ರಣ ಸಭೆಯಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ನಾನು ಆಸ್ಪತ್ರೆಯಲ್ಲಿದ್ದಾಗಲೂ ನನ್ನ ಜೀವವೆಲ್ಲಾ ಕ್ಷೇತ್ರದಲ್ಲೇ ಇತ್ತು. ಪ್ರತಿದಿನ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ  ಕೊರೊನಾ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದೆ. ತಾಲ್ಲೂಕಿನ  ಎಲ್ಲ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ನನ್ನ ಕ್ಷೇತ್ರಕ್ಕೆ ಸಂಪೂರ್ಣ ಸಹಕಾರ ನೀಡಿದೆ ಅವರಿಗೆ ಅಭಿನಂದಿಸುವುದಾಗಿ ಶಾಸಕರು ತಿಳಿಸಿದರು.

ಸಂಸದ ಸಿದ್ದೇಶಣ್ಣ ಅತಿಹೆಚ್ಚಿನ ಹಳ್ಳಿಗಳಿಗೆ ಭೇಟಿ ನೀಡಿ, ಕೊರೊನಾ ಪ್ರಗತಿ ಪರಿಶೀಲನೆ ಮಾಡಿ ಜನರಿಗೆ ಜಾಗೃತಿ ಮೂಡಿಸಿರುವುದು ಅವರ ಜನಪರ ಕಾಳಜಿ ಯಾಗಿದೆ. ತಮ್ಮ ಟ್ರಸ್ಟ್ ವತಿಯಿಂದ 53 ಲಕ್ಷ ರೂ ವೆಚ್ಚದಲ್ಲಿ ಆಕ್ಸಿಜನ್  ಜನರೇಟರ್‌ಗೆ ಮಂಜೂರಾತಿ ನೀಡಿದ್ದು,  ಮೇ 25ರಂದು ಸ್ಥಳ ಪರಿಶೀಲನೆ
ನಡೆದು 15 ದಿನಗಳಲ್ಲಿ  ಕೇಂದ್ರ ಸ್ಥಾಪನೆಯಾಗಲಿದೆ.ಇದರಿಂದಾಗಿ ಪ್ರತಿದಿನ 50 ರೋಗಿಗಳಿಗೆ
ಆಕ್ಸಿಜನ್ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಸಂಸದರನ್ನು ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುವೆ ಎಂದು ಶಾಸಕರು ತಿಳಿಸಿದರು.

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗಳ ಮೂಲ ಸೌಕರ್ಯ, ಸಲಕರಣೆ ಹಾಗೂ ಸಾಮಗ್ರಿಗಳ ಸೌಲಭ್ಯಕ್ಕಾಗಿ ಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ  ಶಾಸಕರ ಅನುದಾನದಲ್ಲಿ ಒಂದು ಕೋಟಿ ರೂ. ನೀಡುವುದಾಗಿ ಶಾಸಕರು ತಿಳಿಸಿದರು. ಕಳೆದ ವರ್ಷದಲ್ಲಿ ವಿಧಾನಸಭಾ ಕ್ಷೇತ್ರದ ಅರಸೀಕೆರೆ ಹೋಬಳಿಯ 7 ಪಂಚಾಯ್ತಿಗಳು ಸೇರಿದಂತೆ ಕ್ಷೇತ್ರದ ಆಸ್ಪತ್ರೆಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ 1.36 ಕೋಟಿ ರೂ. ಅನುದಾನ ನೀಡಿರುತ್ತೇನೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಕೊರೊನಾ ನಿಯಂತ್ರಣ ಹೋರಾಟದಲ್ಲಿ ಅನೇಕ ಸಂಘ-ಸಂಸ್ಥೆಗಳು, ದಾನಿಗಳು ಕೊರೊನಾ ವಾರಿಯರ್ಸ್ ಶ್ರಮಿಸುತ್ತಿದ್ದಾರೆ. ಜೆಡಿಎಸ್‌ನ ಕಲ್ಲೇರು ದ್ರೇಶ್ ಅವರು ಸಹ ಕೈಜೋಡಿಸಿದ್ದಾರೆ ಎಲ್ಲರನ್ನು ಅಭಿನಂದಿಸುತ್ತೇನೆ  ಎಂದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಕೋವಿಡ್ ಸೆಂಟರ್‌ನಲ್ಲಿರುವ ಎಲ್ಲ ರೋಗಿಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಪ್ರತಿದಿನ ಪೌಷ್ಟಿಕ ಆಹಾರ ವಿತರಿಸುವುದಾಗಿ ಶಾಸಕರು ತಿಳಿಸಿದರು.

ಆಸ್ಪತ್ರೆಯಲ್ಲಿ 6 ವೆಂಟಿಲೇಟರ್‌ಗಳಿದ್ದರೂ ಸಹ ವೈದ್ಯರು ಸೇರಿದಂತೆ  ಸಿಬ್ಬಂದಿ ಕೊರತೆಯಿದೆ. ಜಿಲ್ಲಾಧಿ ಕಾರಿಗಳು ಅಗತ್ಯ ಸಿಬ್ಬಂದಿಯನ್ನು ನೀಡಬೇಕೆಂದು ಶಾಸಕರು ಮನವಿ ಮಾಡಿದರು.  ನಾನು ಕೋವಿಡ್ ಕಾರಣದಿಂದ ಆಸ್ಪತ್ರೆಯಲ್ಲಿದ್ದಾಗ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಟೀಕಿಸಿರುವುದು ನನ್ನ ಗಮನಕ್ಕೆ ಬಂದಿದೆ. ಕ್ಷೇತ್ರದ ಜನರ ಆಶೀರ್ವಾದದಿಂದ ಕೊರೊನಾ ಜಯಿಸಿ, ಕ್ಷೇತ್ರದ ಜನರ ಸೇವೆಗೆ ಈ ರಾಜಾಹುಲಿ ಮರಳಿದೆ ಎಂದು ರಾಮಚಂದ್ರ ಆತ್ಮವಿಶ್ವಾಸದಿಂದ ನುಡಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಮಾತನಾಡಿ, ಕ್ಷೇತ್ರ ಶಾಸಕರು ಕೊರೊನಾದಿಂದ ಗುಣಮುಖರಾಗಿ ಸೇವೆಗೆ ಆಗಮಿಸಿದ್ದಾರೆ. ಅವರಿಗೆ ಅಭಿನಂದಿಸುವುದಾಗಿ ತಿಳಿಸಿದರು.  

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾಕ್ಟರ್ ರಾಘವನ್, ಜಿಲ್ಲಾ ಪಂಚಾಯತ್ ಸಿಇಓ ವಿಜಯ ಮಾಂತೇಶ ಮಾತನಾಡಿದರು. 

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಆಡಳಿತ ವೈದ್ಯಾಧಿಕಾರಿ ಡಾ. ನೀರಜ್,  ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಮಂಜುನಾಥ್ ಪಂಡಿತ್, ಪ್ರಭಾರಿ ತಹಶೀಲ್ದಾರ್ ಗಿರೀಶ್ ಬಾಬು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಮಹೇಶ್ ಸೇರಿದಂತೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!