ಕಾಂಗ್ರೆಸ್‌ ಅಪಪ್ರಚಾರದಿಂದ ಲಸಿಕೆ ಕಾರ್ಯಕ್ಕೆ ಹಿನ್ನೆಡೆ

ಕಾಂಗ್ರೆಸ್‌ ಅಪಪ್ರಚಾರದಿಂದ ಲಸಿಕೆ ಕಾರ್ಯಕ್ಕೆ ಹಿನ್ನೆಡೆ - Janathavaniಜಗಳೂರು, ಮೇ 24- ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಆರಂಭವಾದ ಸಮಯದಲ್ಲಿ ಕಾಂಗ್ರೆಸ್ ಪಕ್ಷದವರು ಮಾಡಿದ ಅಪಪ್ರಚಾರದಿಂದಾಗಿ ಲಸಿಕೆ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿತ್ತು ಎಂದು ಕೇಂದ್ರದ ಮಾಜಿ ಸಚಿವರು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ್ ಆರೋಪಿಸಿದರು.

ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ನಡೆದ ಕೊರೊನಾ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದರು, ಲಸಿಕೆ ತೆಗೆದುಕೊಳ್ಳುವ ಬಗ್ಗೆ ಆರಂಭದಲ್ಲಿ ಕಾಂಗ್ರೆಸ್  ಅಪಪ್ರಚಾರ ನಡೆಸಿ ಒಳಗಿಂದೊಳಗೆ ಅವರು ಲಸಿಕೆ ಹಾಕಿಸಿಕೊಂಡರು. ಆದರೆ ಅವರ ಮಾತು ಕೇಳಿದ ಸಾಮಾನ್ಯ ಜನರು ಲಸಿಕೆ ಪಡೆದುಕೊಳ್ಳದೆ ತೊಂದರೆಗೀಡಾಗಿದ್ದಾರೆ ಎಂದು ಟೀಕಿಸಿದರು.

ಆರಂಭದ ದಿನಗಳಲ್ಲಿ ಲಸಿಕೆಯ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದರೂ ಜನ ಮುಂದೆ ಬರಲಿಲ್ಲ. ಆದರೆ ಈಗ ಲಸಿಕೆಯ ಮಹತ್ವ ಅರಿತು ಸಾರ್ವಜನಿಕರು ಲಸಿಕೆ ಪಡೆಯಲು ಒಮ್ಮೆಲೇ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವುದರಿಂದ  ಲಸಿಕೆ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ವಿತರಿಸಲು ಭಾರತ ಸರ್ಕಾರ ಬದ್ಧವಾಗಿದೆ. ಪ್ರಸ್ತುತ ಎರಡನೇ ಡೋಸ್ ಮಾತ್ರ ವಿತರಿಸುತ್ತಿದ್ದು,  ಮುಂದಿನ ವಾರ 18 ಪ್ಲಸ್ ವಯೋಮಾನದವರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಜಗಳೂರು ಆಸ್ಪತ್ರೆಯಲ್ಲಿ 6 ವೆಂಟಿಲೇಟರ್ ಸಹಿತ 50 ಆಕ್ಸಿಜನ್‌ ಬೆಡ್‌ಗಳ ಸೌಲಭ್ಯವಿದ್ದು ಯಾವುದೇ ಕೊರತೆ ಇಲ್ಲ. ಜಗಳೂರು  ಹಿಂದುಳಿದ ತಾಲ್ಲೂಕು ಆಗಿದ್ದು ಜನರು ಕೆಲಸಕ್ಕಾಗಿ ಗುಳೇ ಹೋಗುವ ಸಂಭವವಿದೆ.  ಹಾಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ವೈಯಕ್ತಿಕ ಕಾಮಗಾರಿಗಳನ್ನು ನೀಡುವ ಮೂಲಕ ಅವರಿಗೆ ಆರ್ಥಿಕ ನೆರವು ಕಲ್ಪಿಸಿಕೊಡಬೇಕೆಂದು ಸಿಇಒಗೆ ಸೂಚನೆ ನೀಡಿದರು.

ಪಟ್ಟಣದಲ್ಲಿರುವ ಸುಸಜ್ಜಿತವಾದ ತರಳಬಾಳು ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಅನುಮತಿ ನೀಡಿದ್ದು, ಅವರಿಗೆ ನಾನು ಹಾಗೂ ಶಾಸಕರು ಹಾಗೂ ಜಿಲ್ಲಾಡಳಿತ ಅಭಿನಂದಿಸುವುದಾಗಿ ಸಂಸದರು ತಿಳಿಸಿದರು.  

ಸಭೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!