ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶ್ರೀಗಳು
ಸಾಣೇಹಳ್ಳಿ, ಮಾ. 11- ಪ್ರತಿನಿತ್ಯ ಲಿಂಗಪೂಜೆ ಮಾಡುವುದರಿಂದ ವ್ಯಕ್ತಿಯಲ್ಲಿ ಏಕಾಗ್ರತೆ, ಸಾಮಾಜಿಕ ಎಚ್ಚರಿಕೆ, ಸೂಕ್ಷ್ಮತೆಗಳ ಅರಿವಾಗುಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಶಿವರಾತ್ರಿ ನಿಮಿತ್ತ ಸಾಣೇಹಳ್ಳಿ ಶ್ರೀಮಠದ ಚನ್ನಬಸವ ಸದನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆಯ ಸಾನ್ನಿಧ್ಯ ಹಾಗೂ ಶಿವ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಶರಣರು ದೇವರನ್ನು ಹುಡುಕಿಕೊಂಡು ದೂರದ ದೇವಸ್ಥಾನಗಳಿಗೆ ಹೋಗುವುದನ್ನು ಒಪ್ಪುವುದಿಲ್ಲ ಎಂದರು.
ದೇವರು ನಮ್ಮನ್ನು ಬಿಟ್ಟು ಬೇರೆಡೆ ಇಲ್ಲ. ನಾವಿದ್ದಲ್ಲಿಯೇ ಇಷ್ಟಲಿಂಗ ಪೂಜೆಯ ಮೂಲಕ ದೇವರನ್ನು ಪೂಜಿಸಬಹುದು. ಇದರಿಂದ ಮನು ಷ್ಯನ ಬೌದ್ಧಿಕ, ಅಧ್ಯಾತ್ಮಿಕ, ನೈತಿಕ, ದೈಹಿಕ ಆರೋಗ್ಯ ಹೆಚ್ಚುವುದು. ಶರಣರು ಹೇಳುವ ಧರ್ಮದ ಹಾದಿಯಲ್ಲಿ ನಡೆದರೆ ಆರೋಗ್ಯ, ನೆಮ್ಮದಿ, ಸಕಲ ಸುಖ ಸಂಪತ್ತುಗಳು ನಮ್ಮ ಕೈವಶವಾಗುವವಲ್ಲದೆ ಬದುಕು ಸಾರ್ಥಕವಾಗುವುದು ಎಂದರು.
ಹಿರಿಯ ಜಗದ್ಗುರುಗಳಾದ ಲಿಂ. ಶಿವಕುಮಾರ ಶ್ರೀಗಳು ಜನ ಸಾಮಾನ್ಯರು ಆಚರಿಸುತ್ತಿದ್ದ ಹಬ್ಬ ಗಳನ್ನು ಶರಣರ ಜಯಂತಿಗಳೊಂದಿಗೆ ಸಮ್ಮಿಲಿತ ಗೊಳಿಸಿ ಆಚರಣೆಗೆ ತಂದರು. ಅವರು ಯಾವುದೇ ಕಾರ್ಯಕ್ರಮಕ್ಕೂ ಮುನ್ನ ಶಿವ ಧ್ವಜಾರೋಹಣ ನೆರವೇರಿಸುತ್ತಿದ್ದರು. ಅವರೇ ಶಿವ ಧ್ವಜಾ ರೋಹಣದ ಶರಣರ ಪರಂಪರೆಯನ್ನು ಮೊದಲು ಜಾರಿಗೆ ತಂದವರು ಎಂದರು.
ಅಧ್ಯಾಪಕ ಸಂತೋಷ್, ಶ್ರೀ ತರಳ ಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾ ಚಾರ್ಯ ಮಹಾಸ್ವಾಮಿಗಳವರ ಬಿಸಿಲು-ಬೆಳದಿಂಗಳು ಅಂಕಣದ `ಯಾಂತ್ರಿಕ ಶಿವರಾತ್ರಿ ಜಾಗರಣೆ ನಿದ್ದೆಗೇಡು!’ ಲೇಖನ ವಾಚಿಸಿದರೆ ದ್ಯಾಮೇಶ್, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಅರಿವು-ಮರೆವು ಅಂಕಣದ `ನಿತ್ಯ ಶಿವಯೋಗವೇ ಶಿವರಾತ್ರಿ’ ಲೇಖನ ವಾಚಿಸಿದರು.
ಸಂಗೀತ ಶಿಕ್ಷಕ ಹೆಚ್.ಎಸ್. ನಾಗರಾಜ್, ವಿದ್ಯಾರ್ಥಿಗಳಾದ ಸ್ನೇಹ, ಸುಪ್ರಭೆ, ಮುಕ್ತಾ ವಚನ ಗೀತೆಗಳನ್ನು ಹೇಳಿಕೊಟ್ಟರು. ದೈಹಿಕ ಶಿಕ್ಷಕ ಸಿದ್ದೇಶ್ ಶಿವ ಧ್ವಜಾರೋಹಣದ ಕಾರ್ಯ ನಡೆಸಿಕೊಟ್ಟರೆ, ಜಯಪ್ಪ ನಿರೂಪಿಸಿದರು.