2ನೇ ಲಸಿಕೆಗಾಗಿ ಕಾಯುವ, ಅಲೆದಾಟಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ
ದಾವಣಗೆರೆ, ಮೇ 10- ಕೊರೊನಾ ಸೋಂಕು ತಗುಲದಿರಲೆಂದು ಸದ್ಯಕ್ಕೆ ನೀಡಲಾಗುತ್ತಿರುವ ಎರಡನೇ ಲಸಿಕೆಗಾಗಿ ಕಾಯುವಂತಾಗಿರುವುದಕ್ಕೆ, ಅಲೆದಾಡುವಂತಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.
ಲಸಿಕೆ ಪಡೆಯಲಿಚ್ಚಿಸುವವರಿಗೆ ಸರಿಯಾದ ಮಾಹಿತಿ, ಗುರುತಿಸುವಿಕೆ, ಸಮಯಕ್ಕೆ ಅನುಗುಣವಾಗಿ ಲಸಿಕೆ ಹಾಕುವ ಕ್ರಮ ಪಾಲನೆಯಾಗಬೇಕು. ಬಹಳಷ್ಟು ಸಮಯದವರೆಗೂ ಕಾದರೂ ಲಸಿಕೆ ಸಿಗದೇ ವಾಪಸ್ ತೆರಳುವ, ಪುನಃ ಲಸಿಕೆಗಾಗಿ ಅಲೆದಾಡುವುದು ತಪ್ಪಬೇಕು. ಎರಡನೇ ಲಸಿಕೆಯ ನಿಗದಿತ ಸಮಯ ಬಂದವರ ಗುರುತಿಸಿ, ಸೂಕ್ತ ಮಾಹಿತಿಯೊಂದಿಗೆ ಲಸಿಕೆ ನೀಡುವ ಕೆಲಸ ಆಗಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಸದ್ಯಕ್ಕೆ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಲಸಿಕೆ ಹಾಕುವ ಕೆಲಸವಾಗುತ್ತಿದೆ. ಇಂದು ಜಿಲ್ಲಾಸ್ಪತ್ರೆಯಲ್ಲಿ ಎರಡನೇ ಲಸಿಕೆ ಪಡೆಯುವ ಅವಧಿ ಬಂದವರಿಗೆ ಲಸಿಕೆ ಹಾಕುವ ಕಾರ್ಯ ನಡೆಸಲಾಯಿತು. ಈ ವೇಳೆ ಸುಮಾರು 200 ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ.
ಇದರಲ್ಲಿ ಸುಮಾರು 180 ಸಾರ್ವಜನಿಕರಿಗೆ ಹಾಗೂ ಉಳಿದದ್ದು ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ಸಿಬ್ಬಂದಿಗಳು ಸೇರಿದಂತೆ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.
ತಾವೂ ಎರಡನೇ ಲಸಿಕೆ ಪಡೆಯಬೇಕೆಂದು ಬೆಳಂಬೆಳಗ್ಗೆ ಜನರು ಸರತಿ ಸಾಲಿನಲ್ಲಿ ನಿಂತು ಕಾದಿದ್ದರು. ಇವರಲ್ಲಿ ಹೆಚ್ಚಿನವರು 60 ವರ್ಷ ಮೇಲ್ಪಟ್ಟ ವೃದ್ಧರೇ ಆಗಿದ್ದರು. ಕೆಲವರಿಗೆ ಲಸಿಕೆ ಭಾಗ್ಯ ಸಿಕ್ಕಿಲ್ಲ. ಆಗ ಮುಂಜಾನೆಯಿಂದಲೇ ಕಾದು ಕುಳಿತರೂ ನಮಗೇಕೆ ಲಸಿಕೆ ನೀಡಲಿಲ್ಲ. ನಾವೆಲ್ಲಾ ವಯೋವೃದ್ಧರಿದ್ದೇವೆ. ಲಸಿಕೆಗಾಗಿ ಅಲೆದಲೆದು ಸಾಕಾಗಿದೆ ಎಂಬುದಾಗಿ ಅಸಮಾಧಾನ ವ್ಯಕ್ತವಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಸಮಜಾಯಿಷಿ ನೀಡಿ ಸಮಾಧಾನಪಡಿಸಿದ್ದಾರೆ.
ಆಸ್ಪತ್ರೆಯ ಲಸಿಕಾ ಕೇಂದ್ರದ ಬಳಿ ಕೆಲ ವೃದ್ಧರು ಮನೆಯಿಂದಲೇ ಚೇರ್ ತಂದಿದ್ದ ಸಂಗತಿ ಜರುಗಿದೆ. ಕುಳಿತುಕೊಳ್ಳಲು ವ್ಯವಸ್ಥೆ ಕಾಣದ ಕಾರಣ ಲಸಿಕೆ ಪಡೆಯಲು ಹಿಂದೆ ಬಂದಾಗ ನಿಲ್ಲಲು ಆಗದೇ ಚೇರ್ ತಂದಿರುವುದಾಗಿ ಮಾತುಗಳು ಕೇಳಿ ಬಂದಿವೆ.
ಎರಡನೇ ಲಸಿಕೆ ಪಡೆಯಲು ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ಸಿಬ್ಬಂದಿಗಳು ಸಹ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಇವರುಗಳಿಗೆ ಆಸ್ಪತ್ರೆ ಆವರಣದಲ್ಲಿ ಪ್ರತ್ಯೇಕ ಸ್ಥಳದಲ್ಲಿ ಲಸಿಕೆ ನೀಡಲಾಗಿದೆ.
ಲಸಿಕೆಗೆ ಲೆಕ್ಕಪರಿಶೋಧಕರೋರ್ವರ ಅಲೆದಾಟ-ಸೂಕ್ತ ಮಾಹಿತಿಗೆ ಸಲಹೆ: ಮೊದಲ ಲಸಿಕೆಯಾಗಿ ಕೋವ್ಯಾಕ್ಸಿನ್ ಪಡೆದಿದ್ದ ತಾವೂ ಸಹ ಎರಡನೇ ಲಸಿಕೆ ಪಡೆಯಲು ಜಿಲ್ಲಾಸ್ಪತ್ರೆಗೆ ತೆರಳಿದಾಗ ಕಾದರೂ ಲಸಿಕೆ ಸಿಗದೇ ವಾಪಸ್ಸಾಗಬೇಕಾಯಿತು. ಆನ್ ಲೈನ್ ಮುಖೇನವೂ ಲಸಿಕೆಗಾಗಿ ಹುಡುಕಾಟ ನಡೆಸಿದಾಗ ಕೊಂಡಜ್ಜಿ ಮತ್ತು ಆನಗೋಡು ಲಸಿಕಾ ಕೇಂದ್ರದಲ್ಲಿರುವ ಬಗ್ಗೆ ಮಾಹಿತಿ ನಮೂದಿಸಲಾಗಿತ್ತು. ಈ ಆಧಾರದ ಮೇಲೆ ಕೊಂಡಜ್ಜಿ ಲಸಿಕಾ ಕೇಂದ್ರಕ್ಕೆ ತೆರಳಿದಾಗ ಲಸಿಕೆ ಇಲ್ಲ ಎಂಬ ಮಾತು ಕೇಳಿ ಬಂತು ಎಂಬುದಾಗಿ ಬೇಸರ ವ್ಯಕ್ತಪಡಿಸಿದರು.
ಮೊದಲ ಲಸಿಕೆ ಪಡೆದದ್ದು ವ್ಯರ್ಥವಾಗಲಿದೆ. ಹಾಗಾಗಿ ಎರಡನೇ ಲಸಿಕೆ ಪಡೆಯಲು ನಿಗದಿತ ಸಮಯ ಸಮೀಪಿಸಿದವರನ್ನು ಗುರುತಿಸಿ ಪ್ರಥಮಾದ್ಯತೆ ಮೇರೆಗೆ ಲಸಿಕೆ ನೀಡಬೇಕು. ಅವರ ಮೊಬೈಲ್ ನಂಬರ್ ಗೆ ಲಸಿಕೆ ಪಡೆಯುವ ದಿನಾಂಕದ ಬಗ್ಗೆ ಸಂದೇಶ ರವಾನಿಸಬೇಕು. ಆಗ ಕಾಯುವ, ಅಲೆದಾಡುವ ಪ್ರಮೇಯವೇ ಬಾರದು ಎಂಬುದು ಲೆಕ್ಕಪರಿಶೋಧಕ ಅರುಣಾಚಲ ಶೆಟ್ಟಿ ಅವರು `ಜನತಾವಾಣಿ’ ಮುಖೇನ ಸಂಬಂಧಿಸಿದ ಇಲಾಖೆಗೆ ಸಲಹೆ ನೀಡಿದರು.